ಚಿತ್ರರಂಗ ನಡೆಯೋದೇ ಹೀಗೇನಾ, ಇಲ್ಲಿ ಯಾವುದೂ ಪಕ್ಕಾ ಇಲ್ವಾ, ಯಾವುದಕ್ಕೂ ಒಂದು ಕ್ಲ್ಯಾರಿಟಿ ಇಲ್ವಾ? ಇಷ್ಟೊಂದು ಅನಿಶ್ಚಿತತೆ ಯಾಕೆ? ಇದು ನಾವು ಕೇಳುವ ಪ್ರಶ್ನೆಯಲ್ಲ. ಕಾತರದಿಂದ ಸ್ಟಾರ್ ಸಿನಿಮಾಗಳಿಗಾಗಿ ಎದುರು ನೋಡುತ್ತಿದ್ದ ಪ್ರೇಕ್ಷಕನ ಮನದ ಮಾತು. ಈ ಪ್ರಶ್ನೆ ಮೂಡಲು ಕಾರಣ ಏಕಾಏಕಿ ಸ್ಟಾರ್ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಿರುವುದು. ಇದು ಕೇವಲ ಕನ್ನಡವಷ್ಟೇ ಅಲ್ಲ, ಹಿಂದಿ, ತೆಲುಗು ಚಿತ್ರರಂಗಕ್ಕೆ ಅನ್ವಯಿಸುತ್ತದೆ.
ನಿಮಗೆ ಗೊತ್ತಿರುವಂತೆ ಅಲ್ಲು ಅರ್ಜುನ್ ನಟನೆಯ “ಪುಷ್ಪ-2′ ಚಿತ್ರ ಆಗಸ್ಟ್ 15ಕ್ಕೆ ಬರುವುದಾಗಿ ಘೋಷಿಸಿಕೊಂಡಿತ್ತು. ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ಮೂಲಕ ಎರಡನೇ ಭಾಗದ ನಿರೀಕ್ಷೆ ಹೆಚ್ಚಾಗಿತ್ತು. ಹಾಗಾಗಿ, ಪ್ರೇಕ್ಷಕ ಕೂಡಾ ಈ ಸಿನಿಮಾಕ್ಕಾಗಿ ಕಾಯುತ್ತಿದ್ದ. ಆದರೆ, ಈಗ ಚಿತ್ರತಂಡ ದಿಢೀರನೇ ರಿಲೀಸ್ ಮುಂದೂಡಿ, ಡಿಸೆಂಬರ್ 6ಕ್ಕೆ ಬರುವುದಾಗಿ ಹೇಳಿಕೊಂಡಿದೆ. ಹಾಗೆ ನೋಡಿದರೆ ಈ ಚಿತ್ರ ಕಳೆದ ವರ್ಷ ಡಿಸೆಂಬರ್‌ನಲ್ಲೇ ಬರಬೇಕಿತ್ತು.
ಇನ್ನು, ಶಿವರಾಜ್ ಕುಮಾರ್ ಅವರ “ಭೈರತಿ ರಣಗಲ್’ ಚಿತ್ರ ಕೂಡಾ ಆಗಸ್ಟ್ 15 ರಂದು ಬರುವುದಾಗಿ ಅಧಿಕೃತವಾಗಿ ಹೇಳಿಕೊಂಡಿತ್ತು. ಶಿವಣ್ಣ ಅಭಿಮಾನಿಗಳ ಜೊತೆ ಇಡೀ ಚಿತ್ರರಂಗ ಈ ಸಿನಿಮಾ ಮೇಲೆ ಭರ್ಜರಿ ನಿರೀಕ್ಷೆ ಇಟ್ಟಿತ್ತು. ಸ್ಟಾರ್ ಸಿನಿಮಾಗಳಿಲ್ಲದೇ ಕಂಗೆಟ್ಟಿದ್ದ ಚಂದನವನಕ್ಕೆ ಶಿವಣ್ಣ ಚಿತ್ರದಿಂದ ಅದೃಷ್ಟ ಖುಲಾಯಿಸಬಹುದು ಎಂದು ನಂಬಿತ್ತು. ಜೊತೆಗೆ ಪರಭಾಷಾ “ಪುಷ್ಪ-2′ ಜೊತೆಗೆ ಬರಲು ಸಿದ್ಧವಾಗಿದ್ದ “ಭೈರತಿ’ಯನ್ನು ಅದ್ಧೂರಿಯಾಗಿ ಸ್ವಾಗತಿಸಲು ಮುಂದಾಗಿದ್ದರು. ಆದರೆ, ಸದ್ಯದ ಮಾಹಿತಿಯ ಪ್ರಕಾರ, “ಭೈರತಿ ರಣಗಲ್’ ಕೂಡಾ ಆಗಸ್ಟ್ 15ಕ್ಕೆ ಬರುತ್ತಿಲ್ಲ. ಇದು ಕನ್ನಡ ಸಿನಿಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿರುವುದು ಸುಳ್ಳಲ್ಲ. ಇನ್ನು, ಈ ಹಿಂದೆ ಆಗಸ್ಟ್ 15ಕ್ಕೆ ಬರುವುದಾಗಿ ಘೋಷಿಸಿಕೊಂಡಿದ್ದ ಅಜಯ್ ದೇವಗನ್ ಅವರ “ಸಿಂಗಂ ಅಗೇನ್’ ಚಿತ್ರವೂ ಮುಂದಕ್ಕೆ ಹೋಗಿದ್ದು, ನ.1ಕ್ಕೆ ಬರಲಿದೆ. ಹೀಗೆ ಏಕಾಏಕಿ ಸ್ಟಾರ್ ಸಿನಿಮಾಗಳೆಲ್ಲವೂ ಬಿಡುಗಡೆಯನ್ನು ಮುಂದಕ್ಕೆ ಹಾಕಿರುವುದರಿಂದ ಬೇರೆ ಸಿನಿಮಾಗಳ ರಿಲೀಸ್ ಪ್ಲ್ರಾನ್ ಗಳೆಲ್ಲವೂ ಉಲ್ಟಾಪಲ್ಟಾ ಆಗಿವೆ.
ಆಗಸ್ಟ್ 15ರ ಲೆಕ್ಕಾಚಾರ ಶುರು: ಅತ್ತ ಕಡೆ ಆ.15ಕ್ಕೆ ಬರಬೇಕಿದ್ದ ಎರಡು ಸ್ಟಾರ್ ಸಿನಿಮಾಗಳು ಮುಂದಕ್ಕೆ ಹೋಗುತ್ತಿದ್ದಂತೆ ಆ ಜಾಗ ತುಂಬಲು ಸಿನಿಮಾಗಳು ಪೈಪೋಟಿಗೆ ಇಳಿದಿವೆ. ಅದು ಕನ್ನಡದ ಜೊತೆಗೆ ಇತರ ಭಾಷೆಯ ಚಿತ್ರಗಳು ಕೂಡಾ ತನ್ನ ರಿಲೀಸ್ ಪ್ಲ್ರಾನ್ ಅನ್ನು ರೀಶೆಡ್ನೂಲ್ ಮಾಡುತ್ತಿವೆ. ಈಗಾಗಲೇ ತೆಲುಗಿನಲ್ಲಿ ಪುರಿ ಜಗನ್ನಾಥ್ ಅವರ “ಡಬಲ್ ಇಸ್ಮಾರ್ಟ್’ ಚಿತ್ರ ಆಗಸ್ಟ್ 15ಕ್ಕೆ ತನ್ನ ಬಿಡುಗಡೆ ಘೋಷಿಸಿಕೊಂಡಿದೆ. ಇನ್ನು ಕನ್ನಡದಲ್ಲೂ ಸ್ಟಾರ್ ಸಿನಿಮಾಗಳು ಆಗಸ್ಟ್ 15ನ್ನು ಬಳಸಿಕೊಳ್ಳಲು ಪ್ಲ್ರಾನ್ ಮಾಡಿಕೊಳ್ಳುತ್ತಿವೆ. ಜುಲೈ 12ಕ್ಕೆ ನಿಗದಿಯಾಗಿದ್ದ ದಿಗಂತ್ ನಟನೆಯ “ಪೌಡರ್’ ಚಿತ್ರ ಏಕಾಏಕಿ ತನ್ನ ಬಿಡುಗಡೆಗೆಯನ್ನು ಆ.15ಕ್ಕೆ ಮುಂದೂಡಿದೆ. ಇದರ ಜೊತೆಗೆ ಇನ್ನೊಂದೆರಡು ಸ್ಟಾರ್ ಸಿನಿಮಾಗಳು ಆ.15ಕ್ಕೆ ಬರಲು ತೆರೆಮರೆಯ ತಯಾರಿ ನಡೆಸುತ್ತಿದೆ. ಈ ನಡುವೆಯೇ ಕೆಲವು ದಿನಗಳ ಹಿಂದಷ್ಟೇ ಜು.26ಕ್ಕೆ ಬರುವುದಾಗಿ ಘೋಷಿಸಿಕೊಂಡ ಚಿತ್ರವೊಂದು ಕೂಡಾ ಆ.15ಕ್ಕೆ ಬರುವ ಚಿಂತನೆ ಮಾಡುತ್ತಿದೆ. ಈ ದಿನದ ಮೇಲೆ ಇಷ್ಟೊಂದು ಡಿಮ್ಯಾಂಡ್ ಇರಲು ಕಾರಣ ಸಾಲು ಸಾಲು ರಜೆ. ಆಗಸ್ಟ್ 15ಕ್ಕೆ ಬಂದರೆ ಸತತ ನಾಲ್ಕು ದಿನ ರಜೆ ಸಿಗುವುದರಿಂದ ಪ್ರೇಕ್ಷಕ ರನ್ನು ಸೆಳೆಯಬಹುದು ಎಂಬ ಲೆಕ್ಕಾಚಾರ ತಂಡದ್ದು.
ರೀಶೆಡ್ನೂಲ್ ಡಿಸೆಂಬರ್
ಒಂದು ಕಡೆ ಆಗಸ್ಟ್ ರಿಲೀಸ್ ಸಿನಿಮಾಗಳು ಹೇಗೆ ರೀಶೆಡ್ನೂಲ್ ಆಗಬೇಕೋ, ಅದೇ ರೀತಿ ಡಿಸೆಂಬರ್‌ನಲ್ಲಿ ಬಿಡುಗಡೆ ಪ್ಲ್ರಾನ್ ಮಾಡಿಕೊಂಡಿದ್ದ ಸಿನಿಮಾಗಳಿಗೂ ಈಗ “ಪುಷ್ಪ-2′ ರೀಶೆಡ್ನೂಲ್ ಸಂಕಟ ತಂದಿದೆ. ಪುಷ್ಪ-2 ಡಿಸೆಂಬರ್ 6ಕ್ಕೆ ತೆರೆಗೆ ಬರಲಿದೆ. ಆದರೆ, ಪುಷ್ಪಗೂ ಮುಂಚೆ ಕೆಲವು ಸ್ಟಾರ್ ಸಿನಿಮಾಗಳು ಡಿಸೆಂಬರ್ ಮೊದಲ ವಾರ ತೆರೆಗೆ ಬರಲು ತಯಾರಿ ಮಾಡಿದ್ದವು. ಆ ನಿಟ್ಟಿನಲ್ಲಿ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದವು. ಆದರೆ, ಈಗ ಏಕಾಏಕಿ ಬಹುನಿರೀಕ್ಷಿತ ಚಿತ್ರವೊಂದು ಬರುವುದರಿಂದ ಅದರ ಮುಂದೆ ರಿಸ್ಕ್ ಹಾಕಿಕೊಳ್ಳುವುದು ಬೇಡ ಎಂಬ ಕಾರಣದಿಂದ ಆ ಚಿತ್ರಗಳು ಕೂಡಾ ರೀಶೆಡ್ನೂಲ್ ಮಾಡಿಕೊಳ್ಳಬೇಕಿದೆ.
ಹೊಸಬರಿಗೆ ತೊಂದರೆ
ಸ್ಟಾರ್ ಸಿನಿಮಾಗಳು ತನ್ನ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಹಾಕಿ, ಇನ್ಯಾವುದೇ ಡೇಟ್‌ಗೆ ಬಂದರೂ ಆ ಚಿತ್ರಗಳಿಗೆ ಅದರಿಂದ ಯಾವ ತೊಂದರೆಯೂ ಆಗುವುದಿಲ್ಲ. ಆದರೆ, ಏಕಾಏಕಿ ಬಿಡುಗಡೆ ದಿನಾಂಕವನ್ನು ಬದಲಿಸುವುದರಿಂದ ಹೆಚ್ಚಿನ ತೊಂದರೆ ಅನುಭವಿಸುವವರು ಹೊಸಬರು. ಯಾವುದೇ ಚಿತ್ರರಂಗವಾಗಲೀ ಅಲ್ಲಿ ಹೊಸಬರು ತಮ್ಮ ಸಿನಿಮಾ ರಿಲೀಸ್ ಮಾಡಲು ಒದ್ದಾಡಲೇಬೇಕು. ಹೇಗೋ ಸಿನಿಮಾ ರಿಲೀಸ್‌ಗೆ ಡೇಟ್ ಫಿಕ್ಸ್ ಮಾಡಿ, ವಿತರಕರನ್ನು ಹಿಡಿದು, ಥಿಯೇಟರ್ ಹೊಂದಿಸಿ ಇನ್ನೇನು ಎಲ್ಲವೂ ಸಿದ್ಧವಾಯಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಏಕಾಏಕಿ ಸ್ಟಾರ್ ಸಿನಿಮಾವೊಂದು ತಮ್ಮ ರಿಲೀಸ್ ಡೇಟ್‌ಗೆ ಬರುತ್ತದೆ ಎಂದರೆ ಹೊಸಬರ ಪಾಡು ಹೇಗಾಗಬೇಡ ಹೇಳಿ. ಈ ನಿಟ್ಟಿನಲ್ಲಿ ಸ್ಟಾರ್ ಸಿನಿಮಾಗಳು ಯೋಚಿಸಬೇಕಿದೆ.
ರವಿಪ್ರಕಾಶ್ ರೈ