Advertisement

Stories: ಹಾಡಿನಂಥ ಕಾಡುವಂಥ ಕಥೆಗಳು

12:08 PM Dec 22, 2024 | Team Udayavani |

ದಾನ

Advertisement

“ಈ ಬಿಸ್ಕೆಟ್‌ ಮುಂದಿನ ಸಲಿ ತಗೊಳ್ಳೋಣ ಪುಟ್ಟಾ…’ ಆ ತಾಯಿ ತನ್ನ ಕೈಹಿಡಿದುಕೊಂಡು ನಿಂತಿದ್ದ ಐದು ವರ್ಷದ ಹುಡುಗನನ್ನು ಸಮಾಧಾನಿಸಲು ಪ್ರಯತ್ನಿಸಿದಳು. “ಮೊನ್ನೆನೂ ಅದೇ ಹೇಳಿದೆ ನೀನು!’ ಮಗು ಮೆತ್ತಗಿನ ದನಿಯಲ್ಲಿ ಆಕ್ಷೇಪಿಸಿತು. ತಾಯಿ ಕೊಂಡುಕೊಳ್ಳಬೇಕೆಂದು ಇಟ್ಟುಕೊಂಡ ಅಕ್ಕಿಯನ್ನೊಮ್ಮೆ ದಿಟ್ಟಿಸಿದಳು. ಅಕ್ಕಿ- ಬಿಸ್ಕೆಟ್‌ ಎರಡಕ್ಕೂ ಆಗುವಷ್ಟು ದುಡ್ಡಿಲ್ಲ. ಖಂಡಿತ ಅಕ್ಕಿಯದ್ದೇ ಮೇಲುಗೈ. ಹಸಿದ ನಾಲ್ಕು ಹೊಟ್ಟೆ ತುಂಬಬೇಕಲ್ಲ. “ಈಗೇನು ಬಿಸ್ಕೆಟ್‌ ಬಿಲ್‌ ಮಾಡಲೋ ಬೇಡವೋ!’ ಸಾಮಾನು ಕಟ್ಟುವ ಸತೀಶ ತಾಳ್ಮೆಗೆಟ್ಟು ಕೇಳಿದ. ಅವನಿಗೂ ಬೆಳಗ್ಗೆಯಿಂದ ಬಿಡುವಿಲ್ಲದ ಕೆಲಸ. ಮಗು ಆಸೆಯಿಂದ ತಾಯಿಯತ್ತ ನೋಡಿತು. ತಾಯಿ ಗಟ್ಟಿ ಮನಸು ಮಾಡಿ, “ಅಕ್ಕಿ ಕೊಡಿ ಸಾಕು’ ಅಂದಳು. ಮಗುವಿನ ಮುಖ ಬಾಡಿತು. ಪಕ್ಕದಲ್ಲೇ ನಿಂತಿದ್ದ ಅಂಗಡಿ ಮಾಲೀಕ ಸೆಟ್ಟರಿಗೆ ಎಂಬತ್ತರ ವಯಸ್ಸು. ಮೆತ್ತಗೆ ಬಿಸ್ಕೆಟ್‌ ಅನ್ನು ಆಕೆಯ ಬ್ಯಾಗಿಗೆ ಹಾಕಿದರು. ಆಕೆಗೆ ಆಶ್ಚರ್ಯ. “ಈ ಬ್ರಾಂಡ್‌ ಅಕ್ಕಿಯ ಜೊತೆಗೆ ಈ ಬಿಸ್ಕೆಟ್‌ ಆಫ‌ರ್‌ ಇದೆ ಅಮ್ಮಾ…’

ತಾಯಿಗೆ ನಂಬಲಾಗಲಿಲ್ಲ. “ಹೊಸ ಆಫ‌ರ್‌ ಅಮ್ಮಾ, ಬೇಡದಿದ್ರೆ ಹೇಳಿ’, ಸೆಟ್ಟರು ನಿರ್ಭಾವುಕತೆಯಿಂದ ನುಡಿದರು. ತಾಯಿಯ ಮುಖದಲ್ಲಿ ನಗು ಅರಳಿತು. ಅದನ್ನು ನೋಡಿ ಮಗು ಕೇಕೆ ಹಾಕಿ ಚಪ್ಪಾಳೆ ತಟ್ಟಿತು. ತಾಯಿ- ಮಗು ಹೋದ ಮೇಲೆ ಸತೀಶ ಕೇಳಿದ: “ಇದ್ಯಾವ ಆಫ‌ರ್‌ ಸೆಟ್ಟರೇ?’ “ಹೇ ಸುಮ್ಮನೆ ಮಾರಾಯ. ಹಾಗೇ ಕೊಡಬೋದಿತ್ತು, ಆದ್ರೆ ದಾನ ಕೂಡ ತೆಗೊಂಡವರಿಗೆ ನೋವು ಕೊಡತ್ತೆ ಒಮ್ಮೊಮ್ಮೆ, ಅದನ್ನು ಆದಷ್ಟು ಸೂಕ್ಷ್ಮವಾಗಿ ಮಾಡಬೇಕು.’

ಬಣ್ಣ

“ಕಪ್ಪಗಿದ್ದೀಯ ಅಂತ ಶಾಲೆಯಲ್ಲಿ ಎಲ್ಲರೂ ಆಡ್ಕೊàತಾರೆ ಅಮ್ಮ’, ಐದನೇ ತರಗತಿಯಲ್ಲಿ ಓದುತ್ತಿರುವ ಮಗಳು ನುಡಿದಾಗ ಸುಧಾ ಹೌಹಾರಿದಳು. ಬಾಡಿ ಶೇಮಿಂಗ್‌ ಬಗ್ಗೆ ಓದಿ, ಅದರ ದುಷ್ಪರಿಣಾಮಗಳನ್ನು ತಿಳಿದುಕೊಂಡಿದ್ದಳು ಅವಳು. “ಕಪ್ಪಗಿದ್ದರೇನಂತೆ, ಅದಕ್ಕೆಲ್ಲಾ ತಲೆ ಕೆಡಿಸ್ಕೋಬೇಡ…’ ಅಂತೆಲ್ಲ ಸಮಾಧಾನಿಸಿದಳು. “ಕಪ್ಪಿರುವವವರು ಮನೆಕೆಲಸದವರಂತೆ. ನಾನೂ ಅವರ ಜೊತೆ ಮನೆ ಮನೆಗೆ ಹೋಗಬೇಕಂತೆ ಕೆಲಸಕ್ಕೆ…’ ಹೀಗೆನ್ನುತ್ತಾ ಮಗು ಕಣ್ಣಲ್ಲಿ ನೀರು ಹಾಕಿಕೊಂಡಿತು. ಸುಧಾಳಿಗೆ ಕರುಳು ಚುರ್ರೆಂದಿತು. “ಯಾರು ಹೀಗಂದೋರು? ನಾಳೆ ಬಂದು ನಿಮ್ಮ ಪ್ರಿನ್ಸಿಪಲ್‌ ಹತ್ರ ಮಾತಾಡ್ತೀನಿ ಇರು’ ಅಂದಳು.

Advertisement

ಈ ನಡುವೆ, “ಮೇಡಂ, ನಾಳೆ ನಮ್‌ ಮಗಳ ಶಾಲೆಯಲ್ಲಿ ಒಂದು ಡಾ®Õ… ಅಂತೆ. ನಿಮ್ಮ ಹಳೆ ಲಿಪ್‌ಸ್ಟಿಕ್‌ ಇದ್ರೆ ಬೇಕಿತ್ತು…’ ಮನೆಗೆಲಸದ ರತ್ನಮ್ಮನದ್ದು ಮುಗಿಯದ ಬೇಡಿಕೆಗಳು. ಒಂದಿನ ಹಳೆ ಬಟ್ಟೆ ಬೇಕು, ಒಂದಿನ ಹಳೆ ಪಾತ್ರೆ ಇದ್ರೆ ಕೊಡಿ, ಹೀಗೆ. ಮೊದಲೇ ಸಿಟ್ಟಾಗಿದ್ದ ಸುಧಾಳ ಪಿತ್ತ ಕೆರಳಿತು. “ನಿನ್ನ ಮಗಳ ಕರಿ ಮೂತಿಗೆ ಎಷ್ಟು ಲಿಪ್‌ಸ್ಟಿಕ್‌ ಹಾಕಿದ್ರೂ ಅಷ್ಟೇ. ಸುಮ್ಮನೆ ಡಿಸ್ಟರ್ಬ್ ಮಾಡಬೇಡ’, ಅಬ್ಬರಿಸಹೊರಟವಳು ನಡುವೆ ನಾಲಿಗೆ ಕಚ್ಚಿಕೊಂಡಳು.

ಇದೆಲ್ಲವನ್ನೂ ನೋಡುತ್ತಿದ್ದ ಮಗು “ಹೋ’ ಎಂದು ಅಳುತ್ತ ಒಳಹೋಯಿತು. “ಹೇ, ನೀನು ಕಪ್ಪಿಲ್ಲ…’ ಎಂದು ಬಡಬಡಿಸುತ್ತಾ ಸುಧಾ ಮಗಳ ಹಿಂದೆ ಓಡಿದಳು. ರತ್ನಮ್ಮನಿಗೆ ಮಗಳ ಲಿಪ್‌ಸ್ಟಿrಕ್‌ನ ಚಿಂತೆಯಲ್ಲಿ ಇದೆಲ್ಲ ಗೌಣವಾಯಿತು.

-ಸೌರಭ ಕಾರಿಂಜೆ

**********************************************************************************************************

ಸರಳ ರೇಖೆ

“ಸರಳರೇಖೆ ಎಂದರೆ ಎರಡು ಬಿಂದುಗಳ ನಡುವಿನ ನೇರ ಅಂತರ’ ಎನ್ನುವುದನ್ನು ನೆನಪಿಡದ ಕಾರಣಕ್ಕೆ ಬಾಲ್ಯದಲ್ಲಿ ಅವಳನ್ನು ಬಡಿಯುತ್ತಿದ್ದ ಅಪ್ಪ. ಆಸ್ಪತ್ರೆಯಲ್ಲಿ ಮಲಗಿದ್ದ ಅಪ್ಪನಿಗಂಟಿದ ಇಸಿಜಿ ಯಂತ್ರ ಸದಾಕಾಲ ವಕ್ರರೇಖೆಯನ್ನೇ ತೋರಿಸಲಿ ಎನ್ನುವುದು ಈಗ ಅವಳ ಪ್ರಾರ್ಥನೆಯಾಗಿತ್ತು.

ಅಪಾರ್ಥ

ಸಂಜೆಗತ್ತಲ ಹೊತ್ತಿಗೆ ಮೆಜೆಸ್ಟಿಕ್‌ನ ಮೇಲ್ಸೇತುವೆ ಮೇಲೆ ನಡೆಯುತ್ತಿದ್ದವಳು ಹಿಂದಿರುಗಿ ಅವನ ಕಪಾಳಕ್ಕೆ ಬಿಗಿದು, “ರ್ಯಾಸ್ಕಲ್, ಅಕ್ಕತಂಗಿಯರಿಲ್ಲವಾ ನಿನಗೆ, ಚಿವುಟೋಕೆ’ ಎಂದು ಸರಸರನೇ ನಡೆದಳು. ಜನರೆಲ್ಲ ಗಾಬರಿಯಾದರೆ ಅವನು ನಗುತ್ತ ನಿಂತಿದ್ದ. ಅವನಿಗೆ ಕೈಗಳೇ ಇರಲಿಲ್ಲ.

-ಗುರುರಾಜ ಕೊಡ್ಕಣಿ

+++++++++++++++++++++++++++++++++++++

ಮರೀಚಿಕೆ

“ಇತ್ತೀಚೆಗೇಕೋ ಕಥೆಯೇ ಹುಟ್ಟುತ್ತಿಲ್ಲ.’ ಹಣೆಗೆ ಕೈಹಚ್ಚಿ, ಮಳೆಹನಿಗಳು ಭುವಿಯ ಚುಂಬಿಸುತ್ತಿದ್ದುದನ್ನು ನೋಡುತ್ತಿದ್ದವನಿಗೆ… ಇನ್ನು ಕುಳಿತಿರಲು ಮನಸ್ಸಾಗದೇ ಪುಟ್ಟ ಬಾಲಕನಂತೆ ಮಳೆಯಲ್ಲಿ ನೆನೆಯತೊಡಗಿದ. ಹಿಂದೆಯೇ ಅವಳ ನೆನಪೂ ನುಗ್ಗಿಬಂತು.

“ನೀವು ಬರೆಯುವ ಕಥೆಗಳು ನೈಜವೆನಿಸುತ್ತವೆ. ಕಣ್ಣಿಗೆ ಕಟ್ಟುವಂತೆ ಬರೆಯುತ್ತೀರಿ…’ ಆಫೀಸಿನ ಲಂಚ್‌ ಅವರ್‌ನಲ್ಲಿ ಮೊದಲ ಸಲ ಮಾತಿಗಿಳಿದಿದ್ದಳು. ಅಂದಿನಿಂದ ಇಬ್ಬರಲ್ಲೂ ಸಾಹಿತ್ಯ ಸಂಬಂಧಿ ಚರ್ಚೆಗಳು ನಡೆಯತೊಡಗಿ ಬಲು ಹತ್ತಿರವಾದರು. “ನಮ್ಮಿಬ್ಬರ ಆಸಕ್ತಿ, ಮನೋಭಾವ ಒಂದೇ ಆಗಿರುವಾಗ… ನಾವೇಕೆ ಜೊತೆಯಾಗಬಾರದು? ನಿಮ್ಮ ಬದುಕಿನ ಕಥೆಯ ನಾಯಕಿ ನಾನಾಗಲೇ?’ ಕ್ಯಾಂಟೀನಿನಿಂದ ಎದ್ದು ಹೋಗುವ ಮೊದಲು ಕೈಯಲ್ಲಿಟ್ಟ ಕಾಗದದಲ್ಲಿ ಅವಳ ಮುದ್ದಾದ ಅಕ್ಷರಗಳು ಮುತ್ತು ಪೋಣಿಸಿದಂತಿದ್ದವು.  ಅವನಿಂದ ಉತ್ತರವನ್ನು ನಿರೀಕ್ಷಿಸುತ್ತಿದ್ದವಳಿಗೆ… “ನಾನು ನಿಮ್ಮನ್ನು ಮದುವೆಯಾಗಲಾರೆ. ನಿಮ್ಮನ್ನಷ್ಟೇ ಅಲ್ಲ, ಯಾವ ಹೆಣ್ಣನ್ನೂ ಮದುವೆಯಾಗಲಾರೆ. ದಾಂಪತ್ಯ ನಡೆಸುವ ಆಸಕ್ತಿ ನನ್ನಲ್ಲಿಲ್ಲ. ಏಕೆಂದರೆ….ನಾನೊಬ್ಬ “ಗೇ’. ಜಿಟಿಜಿಟಿ ಮಳೆಯಲ್ಲಿ ನೆನೆಯುತ್ತ ನಿಂತವಳ ಕೈಗೆ ಕಾಗದವನ್ನಿತ್ತ ಮರುಕ್ಷಣವೇ ತಿರುಗಿ ನೋಡುವ ಧೈರ್ಯ ಸಾಲದೇ ಹೊರಟುಬಿಟ್ಟಿದ್ದ. ಅಂದೇ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರನ್ನು ತೊರೆದು ಯಾರೂ ಗುರುತಿಸದ ಊರಿನಲ್ಲಿ ಅಪರಿಚಿತನಾಗಿ ಉಳಿದುಬಿಟ್ಟಿದ್ದ.

– ಶೋಭಾ ಮೂರ್ತಿ

**********************************************************************************************************

ಬೆಟ್ಟದಮ್ಮ…

ಆಕಾಶ ಭೂಮಿ ಒಂದಾಗುವಂತೆ ಭೀಕರ ಮಳೆ ಸುರಿಯಿತು. ಕೆಲವೇ ಘಳಿಗೆಗಳಲ್ಲಿ  ಗುಡ್ಡ ಕುಸಿದು, ಅಲ್ಲೊಂದು ಊರು ಇತ್ತು ಅನ್ನುವ ಕುರುಹೇ ಇಲ್ಲದಂತೆ ಕೊಚ್ಚಿ ಹೋಯಿತು. ಪವಾಡ ಸದೃಶವೆಂಬಂತೆ ಅವಳೊಬ್ಬಳು ಬದುಕುಳಿದಳು. ನೆರೆಹೊರೆಯ ಊರವರು ಅವಳನ್ನು ನೋಡಲು ಸಾಲುಗಟ್ಟಿ ಬಂದರು. ಕೆಲವರು ಸಾಂತ್ವನ ಹೇಳಿದರು, ಮತ್ತೆ ಕೆಲವರು ಅವಳ ಅದೃಷ್ಟವ ಕೊಂಡಾಡಿದರು. ಉತ್ತರಿಸಲೂ ಅವಕಾಶ ಕೊಡದಂತೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದರು. ತಮ್ಮೊಂದಿಗೆ ಬರಲು ಒತ್ತಾಯಿಸಿದರು. ಆಕೆ ಕದಲದೇ ಕೂತಿದ್ದಳು. ಉಪಾಯವಿಲ್ಲದೆ ಬಂದವರು ಕೆಲವರು ಸೇರಿ ಅವಳಿಗೆ ಅಲ್ಲಿಯೇ ಗುಡಿಸಲೊಂದು ಕಟ್ಟಿ ಕೊಟ್ಟರು. ಹಾಲು ಹಣ್ಣು ತಂದಿತ್ತರು. ತುಟಿ ಬಿಚ್ಚದೆ, ಕಣ್ಣೆತ್ತದೆ ಅಲ್ಲಾಡದೇ ಕಲ್ಲಿನಂತೆ ಕುಳಿತ ಅವಳು ಕÇÉಾಗಿಯೇ ಬಿಟ್ಟಳು.

“ಬೆಟ್ಟದಮ್ಮ’ ಈಗ ಗುಡಿಯೊಳಗೆ ಕೂತಿದ್ದಾಳೆ. ಈಗ ಬೆಟ್ಟವೇರಿ ಬಂದು ಹೆಮ್ಮಕ್ಕಳೆÇÉಾ ಅವಳ ಶಕ್ತಿಯನ್ನು ಆವಾಹಿಸಿಕೊಳ್ಳಲು ಪ್ರಾರ್ಥಿಸುತ್ತಿದ್ದಾರೆ.

ಯಾರಿಗೆ ಅಹವಾಲು ಸಲ್ಲಿಸಲಿ?

ಆ ರಾತ್ರಿ ಅವಳ ಮನೆಯಲ್ಲಿ ಕಳುವಾಯಿತು. ಸದ್ದಾಗುತ್ತಿದ್ದರೂ ಅವಳು ಲೆಕ್ಕಿಸದೇ ಬಾಗಿಲು ಹಾಕಿಕೊಂಡು ಏನೋ ಬರೆಯುತ್ತಿದ್ದಳು. ನೆರೆಮನೆಯವರಿಗೆ ಅನುಮಾನ ಬಂದು ಪೊಲೀಸರಿಗೆ ದೂರಿತ್ತರು.

ಮನೆಯಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ದೇವರ ಮನೆಯ ಬೆಳ್ಳಿ ದೀಪ, ಹಜಾರದ ಟಿವಿ ಕಳುವಾಗಿದ್ದಕ್ಕೆ ಕುರುಹು ಕಾಣಿಸುತ್ತಿತ್ತು. “ನಿಮ್ಮ ಮನೆಗೆ ಕಳ್ಳರು ಬಂದು ದೋಚಿಕೊಂಡು ಹೋದಾಗಲೂ ನಿಮಗೆ ಗೊತ್ತಾಗಲಿಲ್ಲವಾ?’ ಪೊಲೀಸರು ಗದರಿದರು. “ಗೊತ್ತಾಗಿದೆ’, ನಿರ್ಲಿಪ್ತವಾಗಿ ಅವಳು ಉತ್ತರಿಸಿದಳು.

“ಮತ್ತೆ ನೀವು ದೂರು ಕೊಡಲಿಲ್ಲ?’

“ನಾನು ಪದ್ಯ ಬರೆಯುತ್ತಿದ್ದೆ’ ಅವಳಂದಳು.

“ಹೆದರಿಕೆ ಆಗಲಿಲ್ಲವಾ ನಿಮಗೆ? ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ?! ಏನೆಲ್ಲ ಕಳುವಾಗಿದೆ? ಒಮ್ಮೆ ಸರಿಯಾಗಿ ನೋಡಿ!’

ಸೀದಾ ಹೋಗಿ ಪುಸ್ತಕದ ಕಪಾಟು ತೆರೆದಳು. ಅವಳು ಬರೆದ ಅಷ್ಟೂ ಕವಿತೆಗಳು ಅಲ್ಲಿದ್ದವು. “ಅಬ್ಟಾ! ಎಲ್ಲಾ ಜೋಪಾನವಾಗಿಯೇ ಇದೆ’ ಅಂದಳು. ಪೊಲೀಸರಿಗೆ ಕಕ್ಕಾಬಿಕ್ಕಿ. “ಇನ್ನು ಮುಂದೆ ಇಂತಹುಗಳು ಸಂಭವಿಸಿದಾಗ, ಗೊತ್ತಾದ ತಕ್ಷಣ ದೂರು ಕೊಡಬೇಕು’ ಎಂದರು.

“ನನ್ನೆದೆಯೊಳಗೆ ನವಿರು ಕವಿತೆ ಗೀಚಿ ಹೋದವನು ಇನ್ನೂ ಪತ್ತೆಯಾಗಲಿಲ್ಲ. ಯಾರಿಗೆ ಅಹವಾಲು ಸಲ್ಲಿಸಬೇಕು?’ ಪ್ರಶ್ನಿಸಿದಳು.

-ಸ್ಮಿತಾ ಅಮೃತರಾಜ್‌

**********************************************************************************************************

ಬಡತನವೇ ಗುರು

ಶಾಲೆಯ ಕ್ಲಾಸ್‌ಮೇಟ್‌ ಮೇಧಾಳ ಚೆಂದದ ಅಂಗಿ ತನಗೂ ಬೇಕೆನಿಸುತ್ತಿತ್ತು. ಹುಕ್‌ ಕಿತ್ತುಹೋದ, ಅಲ್ಲಲ್ಲಿ ಹೊಲಿಗೆ ಹಾಕಿದ, ಬಣ್ಣ ಮಾಸಿದ ತನ್ನ ಅಂಗಿಯನ್ನು ನೋಡಿ ಕಣ್ಣೀರೇ ಬರುತ್ತಿತ್ತು. ಆಗೆಲ್ಲ ಹಸಿವನ್ನೂ ಮರೆತು ಮತ್ತಷ್ಟು ಗಟ್ಟಿಯಾಗಿ, ಓದುತ್ತಿದ್ದಳು, ಲಕ್ಷ್ಮೀ. ಉದ್ಯೋಗಕ್ಕೆ ಬೇಕಿರುವಷ್ಟು ಕಲಿತ ಕೂಡಲೇ ಮೊದಲು ಮಾಡಿದ ಕೆಲಸ, ಜಾಬ್‌ಗ ಸೇರಿದ್ದು. ನಂತರದಲ್ಲಿ ಸಂಬಳ ಪಡೆದು ಸಂಭ್ರಮ ಪಟ್ಟ ದಿನಗಳೆಲ್ಲ ಕಳೆದು, ವರ್ಷಗಳೇ ಕಳೆದಿವೆ.

ಮದುವೆಯಾಗಿ, ಮಗಳು ಹುಟ್ಟಿದಾಗ, ತನ್ನ ಬಾಲ್ಯದ ಆಸೆಗಳೆಲ್ಲ ಅವಳದು ಎನ್ನುವಂತೆ ಮತ್ತಷ್ಟು, ಇನ್ನಷ್ಟು ದುಡಿದು ಕೇಳಿದ್ದನ್ನೆಲ್ಲ ತಂದು ಕೊಟ್ಟಿದ್ದಳು, ತನ್ನ ಸಮಯವೊಂದನ್ನು ಬಿಟ್ಟು.

ಮಗಳಿಗೆ ಮೊಬೈಲೇ ಅಮ್ಮನೂ, ಅಪ್ಪನೂ, ಗೆಳೆಯರೂ ಆಗಿ ಅವಳು ಹಾದಿ ತಪ್ಪುತ್ತಿರುವಾಗ, ಲಕ್ಷ್ಮೀಗೆ ಅನ್ನಿಸಿದ್ದು… “ಬಾಲ್ಯದ ಬಡತನವೇ ತನಗೆ ಸರಿಯಾದ ದಾರಿ ತೋರಿದ ಗುರುವಾಗಿತ್ತೇನೊ?!’

-ಅರ್ಚನಾ ಹೆಬ್ಬಾರ್‌

Advertisement

Udayavani is now on Telegram. Click here to join our channel and stay updated with the latest news.

Next