Advertisement

Manipal; ಜಾಗತಿಕ ಆರೋಗ್ಯ ಸಮ್ಮೇಳನಕ್ಕೆ ಚಾಲನೆ

12:20 AM Jan 06, 2024 | Team Udayavani |

ಮಣಿಪಾಲ: ಭಾರತೀಯ ಸಂಜಾತ ಅಮೆರಿಕನ್‌ ವೈದ್ಯರ ಒಕ್ಕೂಟ(ಎಎಪಿಐ)ವು ಮಾಹೆ ವಿ.ವಿ. ಸಹಯೋಗದಲ್ಲಿ ಹಮ್ಮಿ ಕೊಂಡಿರುವ “ಆರೋಗ್ಯ ರಕ್ಷಣೆ ಮತ್ತು ಕೃತಕ ಬುದ್ಧಿಮತ್ತೆಯ ಭವಿಷ್ಯ’ ವಿಷಯದ ಜಾಗತಿಕ ಆರೋಗ್ಯ ಸಮ್ಮೇಳನಕ್ಕೆ ಶುಕ್ರವಾರ ಫಾರ್ಚೂನ್‌ ಇನ್‌ ವ್ಯಾಲಿ ಹೊಟೇಲ್‌ನಲ್ಲಿ ಚಾಲನೆ ನೀಡಲಾಯಿತು.

Advertisement

ರಾಜ್ಯ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ| ಆರತಿ ಕೃಷ್ಣ ಅವರು ಎಎಪಿಐ ಸ್ಮರಣಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಕರ್ನಾಟಕವು ಐಟಿ ಮತ್ತು ಇನ್ನೋವೇಶನ್‌ ಹಬ್‌ ಆಗಿ ಬೆಳೆಯುತ್ತಿದ್ದು ಟೆಕ್‌ ನೀತಿ ತಂದಿರುವ ಮೊದಲ ರಾಜ್ಯ ಇದು. ಆರೋಗ್ಯ ಕ್ಷೇತ್ರದಲ್ಲೂ ವೇಗವಾಗಿ ಬೆಳೆಯುತ್ತಿದೆ. ಆರೋಗ್ಯ ಕ್ಷೇತ್ರದ ಡಿಜಿಟಲೈಜೇಶನ್‌ಗೆ ಆದ್ಯತೆ, ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ಪ್ರಾಮುಖ್ಯ ನೀಡಲಾಗುತ್ತಿದೆ. ನವೋದ್ಯಮಗಳೂ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿವೆ.ಇನ್ನೋವೇಟಿವ್‌ ಲ್ಯಾಬೋರೇಟರಿಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.

ರಾಜ್ಯ ಸರಕಾರವು ಎನ್‌ಆರ್‌ಐಗಳಿಗೆ ಪೂರಕವಾಗಿ ಪ್ರತ್ಯೇಕ ಸಚಿವಾಲಯ ಆರಂಭಿಸಿ, ಪ್ರತ್ಯೇಕ ನೀತಿಯನ್ನು ರೂಪಿಸಬೇಕು ಎಂದರು.

ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮಾಹೆ ವಿ.ವಿ.ಯ ಕುಲಾಧಿಪತಿ ಡಾ| ರಾಮದಾಸ್‌ ಪೈ ಅವರಿಗೆ ಎಎಪಿಐ ನಿಂದ ಕೊಡಮಾಡಿದ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ಅವರ ಪರವಾಗಿ ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್‌. ಪೈ ಅವರು ಸ್ವೀಕರಿಸಿದರು.

ಅನಂತರ ಮಾತನಾಡಿ, ರಾಮದಾಸ ಪೈ ಅವರು ತಾಳ್ಮೆ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸುವವರು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ ಎಂದರು.

Advertisement

ಮಾಹೆ ಟ್ರಸ್ಟ್ ನ ಅಧ್ಯಕ್ಷರೂ ಆದ ಎಂಇಎಂಜಿ ಗ್ರೂಪ್‌ ಮುಖ್ಯಸ್ಥ ಡಾ| ರಂಜನ್‌ ಆರ್‌. ಪೈ ಶುಭ ಹಾರೈಸಿದರು. ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ಮಾತನಾಡಿ, ಕಾಲದ ಬದಲಾವಣೆಗೆ ತಕ್ಕಂತೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಆರೋಗ್ಯ ಕ್ಷೇತ್ರದಲ್ಲಿ ಆವಿಷ್ಕಾರಗಳು ಅತಿ ಆವಶ್ಯಕವಾಗಿದೆ. ಆರೋಗ್ಯ ಮತ್ತು ಶಿಕ್ಷಣವನ್ನು ಗ್ರಾಮೀಣ ಭಾಗದ ಮಹಿಳೆಯರು ಸೇರಿದಂತೆ ಬಡ ಜನರಿಗೆ ಒದಗಿಸುವ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕು. ಕೌಶಲಾಭಿವೃದ್ಧಿ ಹಾಗೂ ಪಿಪಿಪಿ ಮಾದರಿಯನ್ನು ದಶಕಗಳ ಹಿಂದೆಯೇ ಡಾ| ಟಿಎಂಎ ಪೈ ಅವರು ಅನುಷ್ಠಾನ ಮಾಡಿದ್ದರು ಎಂದರು.

ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್‌ ಮಾತನಾಡಿ, ಮಾಹೆ ವಿವಿ ಜಾಗತಿಕ ಗುಣಮಟ್ಟದ ಶಿಕ್ಷಣದ ಜತೆಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ ಎಂದರು. ಎಎಪಿಐ ಅಧ್ಯಕ್ಷ ಡಾ| ಸಂಪತ್‌ ಶಿವಾಂಗಿ ಅವರು ಸಮ್ಮೇಳನದ ಬಗ್ಗೆ ವಿವರಿಸಿದರು. ಎಎಪಿಐ ಯುಎಸ್‌ಎ ಅಧ್ಯಕ್ಷೆ ಡಾ| ಅಂಜನಾ ಸಮದ್ದರ್‌, ಪ್ರಮುಖರಾದ ಡಾ| ಸುಬ್ರಹ್ಮಣ್ಯ ಭಟ್‌, ಅನು ಭಟ್‌ ಮೊದಲಾದವರು ಉಪಸ್ಥಿತರಿದ್ದರು.

ಸಹ ಕುಲಪತಿ ಡಾ| ಶರತ್‌ ಕುಮಾರ್‌ ರಾವ್‌ ಸ್ವಾಗತಿಸಿ, ಎಎಐಪಿ ಮಹಿಳಾ ಘಟಕದ ಅಧ್ಯಕ್ಷೆ ಡಾ| ಉದಯಾ ಶಿವಾಂಗಿ ಸಮ್ಮಾನಿತರ ಪಟ್ಟಿ ವಾಚಿಸಿದರು. ಕೋಮಲಾ ಡಿ’ಸೋಜಾ ನಿರೂಪಿಸಿ, ಅಲುಮ್ನಿ ರಿಲೇಶನ್‌ ನಿರ್ದೇಶಕ ಡಾ| ರೋಹಿತ್‌ ಸಿಂಗ್‌ ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next