Advertisement

ಮಣಿಪಾಲದಲ್ಲಿ   ರಸ್ತೆಯ ಗುಂಡಿ ನುಂಗಿತ್ತಾ …

09:00 AM Aug 30, 2017 | Harsha Rao |

ಮಣಿಪಾಲ: ಶಿಕ್ಷಣ, ಮುದ್ರಣ, ಬ್ಯಾಂಕಿಂಗ್‌ ಮತ್ತು ವೈದ್ಯಕೀಯ ಕ್ಷೇತ್ರಗಳಿಂದ ವಿಶ್ವವಿಖ್ಯಾತಿಯನ್ನು ಹೊಂದಿದ ಮಣಿಪಾಲ, ಹೊಂಡ ಮಯವಾದ ರಸ್ತೆಗಳಿಂದ ತತ್ತರಿಸಿಹೋಗಿದೆ. ಮಲ್ಪೆ-ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿಯೇ ಕಾಣದಷ್ಟು ಹೊಂಡಗಳು ತುಂಬಿ ಹೋಗಿವೆ.

Advertisement

ವಿಶ್ವದ ವಿವಿಧ ದೇಶಗಳ ವಿದ್ಯಾರ್ಥಿಗಳನ್ನು, ಉದ್ಯಮಿಗಳನ್ನು, ಅಂತಾರಾಷ್ಟ್ರೀಯ ನಾಯಕರನ್ನು,ಕಲಾವಿದರನ್ನು ಆಕರ್ಷಿಸುವ ಮಣಿಪಾಲ ಇಂದು ಹೊಂಡ-ಗುಂಡಿಯಾದ ರಸ್ತೆಗಳಿಂದ ಜನಜನಿತವಾಗುತ್ತಿದೆ.

ಮೂಲಭೂತ ಸೌಕರ್ಯಗಳಿಂದ ನಗರದ ಆರೋಗ್ಯವನ್ನು ಅಳೆಯುವವರಿಗೆ ಮಣಿಪಾಲ ಪೇಚಿಗೆ ಸಿಲುಕಿಸುತ್ತಿದೆ. ಮಣಿಪಾಲನಗರವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಡಾಮರು ರಸ್ತೆ ಇದೆ ಎಚ್ಚರಿಕೆ ಎಂದು ಫ‌ಲಕವನ್ನು ಹಾಕಿ ಎಂದು ಸ್ಥಳೀಯರು ವಿಡಂಬನೆಯನ್ನು ಮಾಡುತ್ತಿದ್ದಾರೆ. 

ಸುಮಾರು ಒಂದರಿಂದ ಎರಡೂವರೆ ಅಡಿಯಾ ಆಳದ ಗುಂಡಿಗಳು ಮಣಿಪಾಲದವರನ್ನು ಬೆಚ್ಚಿ ಬೀಳಿಸಿವೆ. ಆಳದ ಅರಿವಿಲ್ಲದೆ ಹೊಂಡಕ್ಕಿಳಿಯುವ ಅನೇಕ ಕಾರುಗಳು ತಮ್ಮ ಬಾಡಿಯ ಶೇಪ್‌ಅನ್ನೇ ಬದಲಾಯಿಸಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ತೀರ ಕಡಿಮೆ ಗ್ರೌಂಡ್‌ ಕ್ಲಿಯರೆನ್ಸ್‌ ಇರುವ ವಾಹನಗಳಂತೂ ಮುಂದೆಯೂ ಹೊಗೆದೆ ಹಿಂದೆಯೂ ಬಾರದೆ ಟ್ರಾಫಿಕ್‌ ಜಾಮ್‌ ಸೃಷ್ಟಿಸುತ್ತಿರುವ ದೃಶ್ಯ ಸಾಮಾನ್ಯವಾಗಿ ಹೋಗಿದೆ. ರಿಕ್ಷಾ, ಬಸ್‌ಗಳ ಮಾಲಕರು ತಮ್ಮ ವಾಹನಗಳು ಹೊಂಡದಲ್ಲಿ ಬಿದ್ದು ಎದ್ದು ಹಾಳಾಗಿ ವಾಹನದ ಬಿಡಿಭಾಗಗಳಿಗೆ ಹಣವನ್ನು ಹಾಕಿ ಹಾಕಿ ಬಸವಳಿದಿದ್ದಾರೆ.

ತಿದ್ದಿಕೊಳ್ಳಲು ಎಷ್ಟು ಅವಕಾಶ ಬೇಕು?
ಮಣಿಪಾಲದ ಪ್ರಮುಖ ಭಾಗಗಳಾದ ಸಿಂಡಿಕೇಟ್‌ ವೃತ್ತ, ಟೈಗರ್‌ ವೃತ್ತ ಮತ್ತು ಎಂಐಟಿ ವೃತ್ತ ಸಮೀಪದ ರಸ್ತೆಗಳು ಪ್ರತೀ ವರ್ಷ ಮಳೆಗಾಲದಲ್ಲಿ ಹಾಳಾಗುತ್ತವೆ. ಹಾಗಾಗಿ ಇವುಗಳನ್ನು ಅವಲೋಕಿಸಿದ ತೀರಾ ಸಾಮಾನ್ಯರಿಗೂ ಈ ಸ್ಥಳಗಳು ಡಾಮರು ರಸ್ತೆಗೆ ಯೋಗ್ಯವಲ್ಲವೆಂದು ತಿಳಿಯುತ್ತದೆ ಆದರೆ ಎಂಜಿನಿಯರ್‌ಗಳಿಗೆ ಏಕೆ ಹೊಳೆಯುವುದಿಲ್ಲ?ವೆಂಬುದು ಸಾಮಾನ್ಯರ ಪ್ರಶ್ನೆ.

Advertisement

ಸುಮಾರು ಹದಿನೈದು ವರ್ಷಗಳಲ್ಲಿ ಈ ರಸ್ತೆ ದುರಸ್ಥಿಗೆ ಹಾಕಿದ ಮೊತ್ತದಿಂದ ಒಂದು ಉತ್ತಮವಾದ ಕಾಂಕ್ರಿಟ್‌ ರಸ್ತೆಯನ್ನೇ ನಿರ್ಮಿಸಬಹುದಾಗಿತ್ತು ಎಂದು ಎಂಐಟಿಯ ಪ್ರಾಧ್ಯಾಪಕರು ಹೇಳುತ್ತಾರೆ.

ಪದೇ ಪದೇ ತೆರಿಗೆದಾರರ ಹಣವು ರಸ್ತೆ ದುರಸ್ಥಿಯ ಹೆಸರಲ್ಲಿ ಪೋಲಾಗುತ್ತಿರುವುದು ನೋಡಿದಾಗ ತೆರಿಗೆದಾರನ ಅಸಹಾಯಕ ಸ್ಥಿತಿ ಕಾಣುತ್ತದೆ. ಈ ನಿಟ್ಟಿನಲ್ಲಿ ರಾಜಕೀಯವನ್ನು ಬಿಟ್ಟು ಸಮಗ್ರತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಶಾಶ್ವತ ಕಾರ್ಯದತ್ತ ಮುಂದಾಗುವ ಕಾಲ ಸನ್ನಿಹಿತವಾಗಿದೆ.

ಇನ್ನೆಷ್ಟು ಬಲಿ ಬೇಕು?
ಜೀವಉಳಸಿಕೊಳ್ಳಲು ಕೆಎಂಸಿಗೆ ಬರುವ ರೋಗಿಯಯೋರ್ವರು ಈ ರಸ್ತೆ ಹೊಂಡವನ್ನು ತಪ್ಪಿಸಿಕೊಂಡು ಆಸ್ಪತ್ರೆ ಸೇರುವ ಮುನ್ನವೇ ಅಸುನೀಗಿದ ಘಟನೆ ಇತ್ತೀಚೆಗಷ್ಟೆ ನಡೆದಿದೆ. ರಾ.ಹೆ.ಯ ಈ ಸ್ಥಿತಿಯನ್ನು ಕಂಡು ಎರಡು ವಾರಗಳ ಹಿಂದೆಯಷ್ಟೆ ಸಾಮಾಜಿಕ ಕಾರ್ಯಕರ್ತರು ವಿಚಿತ್ರವಾಗಿ ಪ್ರತಿಭಟನೆ ಮಾಡಿ ಗಮನಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಾಂಕ್ರೀಟ್‌ ರಸ್ತೆಯೇ ಪರಿಹಾರ
ಕಳೆದ ಒಂದೂವರೆ ದಶಕಗಳಿಂದ ಮಣಿಪಾಲದ ಟೈಗರ್‌ ಸರ್ಕಲ್‌ ಮತ್ತು ಮಾಧವಕೃಪಾ ಶಾಲಾ ತಿರುವು ಪ್ರದೇಶದ ರಸ್ತೆಯು ಹಾನಿಗೀಡಾಗುವುದನ್ನು ಅವಲೋಕಿಸಿದ ಎಂಜಿನಿಯರ್‌ಗಳು ಈ ಪ್ರದೇಶದಲ್ಲಿ ಜೌಗು ಮಣ್ಣಿದ್ದು ಅದಕ್ಕೆ ಕಾಂಕ್ರೀಟ್‌ ರಸ್ತೆ ಮಾತ್ರ ಪರಿಹಾರವೆಂದೂ ತಿಳಿಸಿದ್ದಾರಂತೆ. ಆದರೂ ಯಾರೂ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ತೇಪೆ ಹಾಕುವುದರಲ್ಲಿಯೇ ಎಲ್ಲರೂ ಮಗ್ನರಾಗಿದ್ದಾರೆ. ಇದರಿಂದ ಯಾರಿಗೂ ಶಾಶ್ವತ ಪರಿಹಾರ ಬೇಡವೆಂಬುದು ಧ್ವನಿಸುತ್ತದೆ. 

ಸಂಸದರೆಲ್ಲಿ?
ಮಲ್ಪೆ-ಮೊಣಕಾಲ್ಮೂರು ರಸ್ತೆಯನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಲಾಗಿದೆ. ಲೋಕೋಪಯೋಗಿ ಇಲಾಖೆಗೆ ಯಾವುದೇ ಜವಾಬ್ದಾರಿಗಳಿಲ್ಲ. ಆದರೆ ಇದಕ್ಕೆ ಪೂರಕವಾಗಿ ರಾ.ಹೆ. ಇಲಾಖೆಯಲ್ಲೂ ಈ ರಸ್ತೆಯನ್ನು ದುರಸ್ತಿಮಾಡಲು ಹಣವಿಲ್ಲ. ಈ ಅತಂತ್ರ ಸ್ಥಿತಿಗೆ ಪರಿಹಾರ ಕೊಡುವ ಉಡುಪಿ-ಚಿಕ್ಕಮಗಳೂರು ಸಂಸದರು ಎಲ್ಲಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next