Advertisement

Manipal ಕುಡಿಯುವ ನೀರು: ಎಚ್ಚರ ವಹಿಸುವಂತೆ ಡಿಸಿ ಸೂಚನೆ

10:47 PM Nov 18, 2023 | Team Udayavani |

ಮಣಿಪಾಲ: ಬೇಸಗೆಯಲ್ಲಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಯಾವುದೇ ತೊಂದರೆಯಾಗದಂತೆ ಈಗಿಂದಲೇ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಅಂತರ್ಜಲ ಮಟ್ಟ ಶೇ. 24ರಷ್ಟು ಕುಸಿದಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಯಿವೆ. ಅಧಿಕಾರಿಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಿ, ನೀರಿನ ಮಿತ ಬಳಕೆ ಮಾಡಲು ಅರಿವು ಮೂಡಿಸಬೇಕು ಎಂದರು.

ಮಳೆ ನೀರ ಕೊಯ್ಲು
ಹೊಸದಾಗಿ ಮನೆ ಹಾಗೂ ವಸತಿ ಸಮುಚ್ಚಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ಪರವಾನಿಗೆ ನೀಡುವಾಗ ಮಳೆ ನೀರಿನ ಕೊಯ್ಲು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಸ್ಥಳೀಯವಾಗಿ ನೀರಿನ ಲಭ್ಯತೆ, ಖಾಸಗಿ ಬೋರ್‌ವೆಲ್‌ಗ‌ಳಿಂದ ನೀರನ್ನು ಪಡೆದು ವಿತರಿಸುವ ಬಗ್ಗೆ ನೀಲನಕ್ಷೆ ತಯಾರಿಸಬೇಕು. ತೀರ ಅಗತ್ಯವಿದ್ದಲ್ಲಿ ಮಾತ್ರ ಟ್ಯಾಂಕರ್‌ಗಳ ಮೂಲಕ ನೀರನ್ನು ಸಾರ್ವಜನಿಕರಿಗೆ ನೀಡಬೇಕು ಮತ್ತು ಇದಕ್ಕಾಗಿ ಈಗಿಂದಲೇ ಏಜೆನ್ಸಿಗಳನ್ನು ಗುರುತಿಸಬೇಕು ಎಂದರು.

ನಿರ್ವಹಣ ಸಮಿತಿ
ಕಾರ್ಕಳ, ಬ್ರಹ್ಮಾವರ ಹಾಗೂ ಹೆಬ್ರಿ ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಸರಕಾರ ಘೋಷಿಸಿದೆ. ಇಲ್ಲಿನ ಬರ ಪರಿಸ್ಥಿತಿಗಳ ನಿರ್ವಹಣೆಗೆ ಸ್ಥಳೀಯ ಶಾಸಕರನ್ನು ಒಳಗೊಂಡಂತೆ ತಹಶೀಲ್ದಾರರ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳನ್ನು ಸೇರಿಸಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಪ್ರತಿ 15 ದಿನಗಳಿಗೊಮ್ಮೆ ಸಭೆ ಸೇರಿ ಬರ ನಿರ್ವಹಣೆ ಕುರಿತು ಯೋಜನೆ ರೂಪಿಸಿ, ಅನುಷ್ಠಾನಗೊಳಿಸಬೇಕು ಎಂದರು.ಜಿಪಂ ಸಿಇಒ ಪ್ರಸನ್ನ ಎಚ್‌., ಉಪ ವಿಭಾಗ ಆಯುಕ್ತೆ ರಶ್ಮಿ ಎಸ್‌., ಎಡಿಸಿ ಮಮತಾದೇವಿ ಜಿ.ಎಸ್‌., ಪೌರಾಯುಕ್ತ ರಾಯಪ್ಪ, ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ಹಲಗೆ ಅಳವಡಿಸಲು ಸೂಚನೆ
ಜಿಲ್ಲೆಯ ಪ್ರತಿಯೊಂದು ಕಿಂಡಿ ಆಣೆಕಟ್ಟುಗಳಿಗೆ ತಡೆ ಹಲಗೆಗಳನ್ನು ಕೂಡಲೇ ಅಳವಡಿಸಬೇಕು. ಜಿಲ್ಲೆಯಲ್ಲಿ 603 ಕಿಂಡಿ ಆಣೆಕಟ್ಟುಗಳಲ್ಲಿ 210ಕ್ಕೆ ಮಾತ್ರ ಹಲಗೆಗಳನ್ನು ಅಳವಡಿಸಲಾಗಿದೆ. ಈಗಾಗಲೇ ಹಿಂದಿನ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತಡೆ ಹಲಗೆಗಳನ್ನು ಅಳವಡಿಸಲು ಸೂಚನೆ ನೀಡಿದ್ದರೂ ಅಳವಡಿಸಿಲ್ಲ. ಶೀಘ್ರದಲ್ಲಿಯೇ ಅಳವಡಿಸಿ ವರದಿ ನೀಡುವಂತೆ ಎಚ್ಚರಿಸಿದರು.

Advertisement

“ಮಳೆ ನಿಂತರೂ ಕಿಂಡಿ ಅಣೆಕಟ್ಟಿಗೆ ಬೀಳದ ಹಲಗೆ’ ಎಂಬ ಶೀರ್ಷಿಕೆಯಡಿ “ಉದಯವಾಣಿ’ ನ. 17ರಂದು ವರದಿ ಪ್ರಕಟಿಸಿ ಜಿಲ್ಲಾಡಳಿತದ ಗಮನ ಸೆಳೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next