Advertisement

ಪ್ರಣಾಳಿಕೆ ಅನುಷ್ಠಾನ: ದಳದ್ದೇ ಎಲ್ಲ; ಕೈ ಭರವಸೆಗಳಿಗೆ ಬೆಲೆಯಿಲ್ಲ?

01:43 AM Feb 06, 2019 | |

ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳು ಕಳೆದಿದೆ. ಆದರೆ, ಸಮ್ಮಿಶ್ರ ಸರ್ಕಾರ ಒಂದು ಆರ್ಥಿಕ ವರ್ಷವನ್ನು ಪೂರೈಸಿ ಮತ್ತೂಂದು ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿದೆ. ಒಂದು ವರ್ಷದ ಅವಧಿಯಲ್ಲಿ ದೋಸ್ತಿ ಸರ್ಕಾರದ ಬಹುತೇಕ ಯೋಜನೆಗಳಲ್ಲಿ ಜೆಡಿಎಸ್‌ ಛಾಯೆ ಎದ್ದು ಕಾಣುತ್ತಿದ್ದು, ಕಾಂಗ್ರೆಸ್‌ನ ಹೇಳಿಕೊಳ್ಳುವಂತಹ ಯಾವುದೇ ಕಾರ್ಯಕ್ರಮಗಳು ಜಾರಿಯಾಗದಿರುವುದು ಕೈ ನಾಯಕರ ಅತೃಪ್ತಿಗೆ ಕಾರಣವಾಗಿದೆ.

Advertisement

ಕಾಂಗ್ರೆಸ್‌ 80 ಶಾಸಕರ ಬಲ ಹೊಂದಿದ್ದರೂ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು ಜೆಡಿಎಸ್‌ ನೆರಳಿನಂತೆ ಕಾಂಗ್ರೆಸ್‌ ಕಾರ್ಯ ನಿರ್ವಹಿಸುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡದಿರುವುದು ಕಂಡು ಬಂದಿದೆ. ಪ್ರಮುಖ ಯೋಜನೆಗಳ ಸರ್ಕಾರಿ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ ಜತೆಗೆ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಭಾವಚಿತ್ರ ಹಾಕಿರುವುದೇ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ನ ಒಂದು ವರ್ಷದ ಸಾಧನೆ ಎನ್ನುವಂತಾಗಿದೆ ಎಂಬ ಆರೋಪ ಕಾಂಗ್ರೆಸ್‌ ವಲಯದಿಂದ ಕೇಳಿಬಂದಿದೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಎರಡೂ ಪಕ್ಷಗಳ ಪ್ರಣಾಳಿಕೆಗಳನ್ನು ಮುಂದಿಟ್ಟುಕೊಂಡು ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ಜಾರಿಗೆ ತರಲು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಗೆ ವರದಿಯನ್ನೂ ನೀಡಿದೆ. ಆದರೆ, ಸಿಎಂಪಿ ಆಧಾರದಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳದೇ ಮುಖ್ಯಮಂತ್ರಿ ಕುಮಾರಸ್ವಾಮಿ ಜೆಡಿಎಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ ಜನಪ್ರಿಯ ಯೋಜನೆಗಳ ಜಾರಿಗೆ ಹೆಚ್ಚು ಒತ್ತು ನೀಡಿದ್ದು, ಕಾಂಗ್ರೆಸ್‌ ಸಿದ್ದರಾಮಯ್ಯ ಅವಧಿ ಯಲ್ಲಿ ಜಾರಿಗೆ ತಂದಿದ್ದ ಯೋಜನೆಗಳನ್ನು ಉಳಿಸಿಕೊಳ್ಳಲು ಕಸರತ್ತು ನಡೆಸುವಂತಾಗಿದೆ.

ಕಾಂಗ್ರೆಸ್‌ ಪ್ರಮುಖ ಯೋಜನೆಗಳು: ಕಾಂಗ್ರೆಸ್‌ ಕೂಡ ಚುನಾವಣೆಗೂ ಮೊದಲು ‘ಪ್ರಗತಿಯ ಪಕ್ಷ ಕಾಂಗ್ರೆಸ್‌’ ಹೆಸರಿನಲ್ಲಿ 100 ಪುಟಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ, ಭರಪೂರ ಭರವಸೆಗಳನ್ನು ನೀಡಿತ್ತು. ಪ್ರಮುಖವಾಗಿ ರೈತರ ಆದಾಯ ದ್ವಿಗುಣಗೊಳಿಸುವುದು, ರೈತರ ಪಂಪ್‌ಸೆಟ್‌ಗಳಿಗೆ ದಿನವಿಡೀ ನಿರಂತರ ವಿದ್ಯುತ್‌ ಸರಬರಾಜು ಮಾಡುವುದು. ಪಂಚಾಯತಿಗೊಂದರಂತೆ ಮೊರರ್ಜಿ ದೇಸಾಯಿ ಶಾಲೆ ತೆರೆಯುವುದು, ಮಹಿಳೆಯರಿಗೆ ಫ್ರೀ ಬಸ್‌ ಪಾಸ್‌, ಪೂರ್ವ ಪ್ರಾಥಮಿಕದಿಂದ ಸ್ನಾತಕೋತ್ತರ ಶಿಕ್ಷಣದವರೆಗೂ ಉಚಿತ ಶಿಕ್ಷಣ, 18 ರಿಂದ 23 ವರ್ಷದೊಳಗಿನ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್‌ ಫೋನ್‌ ನೀಡುವುದು, ವಿದ್ಯಾಸಿರಿ ಯೋಜನೆಯನ್ನು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ವಿಸ್ತರಿಸುವುದಾಗಿ ಅನೇಕ ಜನಪ್ರೀಯ ಯೋಜನೆಗಳನ್ನು ಘೋಷಣೆ ಮಾಡಿದ್ದರು.

ಆದರೆ, ಸಮ್ಮಿಶ್ರ ಸರ್ಕಾರದ ಒಂದು ವರ್ಷದ ಅವಧಿಯಲ್ಲಿ ಕಾಂಗ್ರೆಸ್‌ನ ಹೇಳಿಕೊಳ್ಳುವಂತಹ ಯಾವುದೇ ಯೋಜನೆಗಳು ಜಾರಿಗೆ ಬಂದಿಲ್ಲ. ಅದರ ಬದಲು ಸಿದ್ದರಾಮಯ್ಯ ಅವಧಿಯಲ್ಲಿ ಜಾರಿಗೆ ತಂದಿದ್ದ ಅನ್ನಭಾಗ್ಯ, ಪಶು ಭಾಗ್ಯ, ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್‌, ಕ್ಷೀರಭಾಗ್ಯ, ಮಾತೃಪೂರ್ಣ ಯೋಜನೆಗಳನ್ನು ಮುಂದುವರೆಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದು ಬೇಡಿಕೊಂಡಿರುವುದೇ ಹೆಚ್ಚು.

Advertisement

ಬಜೆಟ್‌ನಲ್ಲಿ ಸೇರಿಸಲು ಆಗ್ರಹ: ಒಂದು ವರ್ಷದ ಅವಧಿಯಲ್ಲಿ ಕಾಂಗ್ರೆಸ್‌ನ ಯಾವುದೇ ಜನಪ್ರಿಯ ಯೋಜನೆಗಳು ಅನುಷ್ಠಾನಗೊಳ್ಳದಿರುವುದರಿಂದ ಈ ಬಾರಿ ಬಜೆಟ್‌ನಲ್ಲಿ ಕೆಲವನ್ನಾದರೂ ಸೇರಿಸಲು ಕಾಂಗ್ರೆಸ್‌ ಪ್ರಯತ್ನ ನಡೆಸಿದ್ದು, ಅದೇ ಕಾರಣಕ್ಕೆ ಬಜೆಟ್ ಪೂರ್ವ ಇಲಾಖಾವಾರು ಸಭೆಗಳಲ್ಲಿ ಉಪ ಮುಖ್ಯಮಂತ್ರಿ ಕಡ್ಡಾಯವಾಗಿ ಹಾಜರಿದ್ದು, ಕಾಂಗ್ರೆಸ್‌ ಯೋಜನೆಗಳನ್ನು ಸೇರಿಸಲು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

•ದೋಸ್ತಿ ಸರ್ಕಾರದ ಬಹುತೇಕ ಯೋಜನೆಗಳಲ್ಲಿ ಜೆಡಿಎಸ್‌ ಛಾಯೆ

•ಕಾಂಗ್ರೆಸ್‌ನ ಹೇಳಿಕೊಳ್ಳುವಂತಹ ಕಾರ್ಯಕ್ರಮಗಳು ಜಾರಿಯಾಗದಿರುವುದು ಅತೃಪ್ತಿಗೆ ಕಾರಣ

•ಸಿಎಂ ಕುಮಾರಸ್ವಾಮಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯೋಜನೆಗಳಿಗೆ ಹೆಚ್ಚಿನ ಆದ್ಯತೆ

•ಮುಖ್ಯಮಂತ್ರಿ ಜತೆಗೆ ಪರಮೇಶ್ವರ್‌ ಭಾವಚಿತ್ರ ಹಾಕಿರುವುದೇ ಸರ್ಕಾರದಲ್ಲಿ ಕಾಂಗ್ರೆಸ್‌ ಸಾಧನೆ: ಆರೋಪ

ಕಾಂಗ್ರೆಸ್‌ ಯೋಜನೆಗಳು

ಸಾಲ ಮನ್ನಾ, ಋಣ ಮುಕ್ತ ಕಾಯ್ದೆ ಜಾರಿ, ಬಡವರ ಬಂಧು, ಹಿರಿಯ ನಾಗರಿಕರ ಪ್ರೋತ್ಸಾಹ ಧನ ಹೆಚ್ಚಳ, ಇಸ್ರೆಲ್‌ ಮಾದರಿ ಕೃಷಿ ಪದ್ಧತಿ, ಗರ್ಭಿಣಿಯರಿಗೆ ಹೆರಿಗೆ ಪೂರ್ವ ಹಾಗೂ ಹೆರಿಗೆ ನಂತರ ಮೂರು ತಿಂಗಳು ತಾಯಂದಿರಿಗೆ ಹೆರಿಗೆ ಭತ್ಯೆ. ರೈತರ ಆದಾಯ ದ್ವಿಗುಣಗೊಳಿಸುವುದು, ರೈತರ ಪಂಪ್‌ಸೆಟ್‌ಗಳಿಗೆ 24ಷ7 ನಿರಂತರ ವಿದ್ಯುತ್‌, ಪಂಚಾಯಿತಿಗೊಂದರಂತೆ ಮೊರಾರ್ಜಿ ದೇಸಾಯಿ ಶಾಲೆ, ಮಹಿಳೆಯರಿಗೆ ಫ್ರೀ ಬಸ್‌ ಬಾಸ್‌, ಕೆಜಿ ಟು ಪಿಜಿ ವರೆಗೂ, 18-23 ವರ್ಷದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್‌ ಫೋನ್‌.

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next