ಮಂಗಳೂರು: ಯಾವುದೇ ಸಂಸ್ಥೆ, ಸಂಘಟನೆ ಬೆಳೆಯಲು ಅಲ್ಲಿನ ಮಾನವ ಸಂಪನ್ಮೂಲ ವಿಭಾಗದ ಪಾಲು ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಆಯೋಜಿಸಿದ ಸಮಾವೇಶ ಮಾದರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.
ಟಿಎಂಎ ಪೈ ಸಭಾಂಗಣದಲ್ಲಿ ಶುಕ್ರವಾರದಿಂದ ಎರಡು ದಿನಗಳ ಕಾಲ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್ ವತಿಯಿಂದ ಹಮ್ಮಿಕೊಂಡ “ಇಂಡಿಯಾ ಎಟ್ 2047, ಹ್ಯೂಮನ್ ಕ್ಯಾಪಿಟಲ್ ಫಾರ್ ಎ ಡೆವೆಲಪ್‌ಡ್ ಇಂಡಿಯಾ’ ಎಂಬ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಸಂಸ್ಥೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರು ಮಾನವ ಸಂಪನ್ಮೂಲ ವಿಭಾಗವನ್ನು ಅವಲಂಬಿಸಿರುತ್ತಾರೆ. ಯಾವುದೇ ಸಂಸ್ಥೆಗೆ ಉತ್ತಮ ಸಿಬಂದಿ ಆಯ್ಕೆಯಾದರೆ ಆ ಸಂಸ್ಥೆ ಉನ್ನತಿ ಸಾಧಿಸುತ್ತದೆ. ಒಂದು ವೇಳೆ ಆಯ್ಕೆಯಲ್ಲೇ ತಪ್ಪಾದರೆ, ಅದರ ನೇರ ಪರಿಣಾಮ ಸಂಸ್ಥೆಯ ಮೇಲೆ ಬೀಳುತ್ತದೆ. ಈ ನಿಟ್ಟಿನಲ್ಲಿ ಎಚ್‌ಆರ್ ವಿಭಾಗ ಮಹತ್ವ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಎನ್‌ಎಲ್‌ಸಿ ಇಂಡಿಯ ಲಿ. ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ. ಪ್ರಸನ್ನ ಕುಮಾರ್ ಮಾತನಾಡಿ, ಮಾನವ ಸಂಪನ್ಮೂಲ ವಿಚಾರವನ್ನು ಪರಸ್ಪರ ಹಂಚಿಕೊಳ್ಳಲು ಈ ಸಮಾವೇಶ ವೇದಿಕೆ ಒದಗಿಸಿದೆ. ಈ ನಿಟ್ಟಿನಲ್ಲಿ ಇಡೀ ತಂಡ ಗಮನಾರ್ಹ ಕೆಲಸ ಮಾಡಿದೆ ಎಂದರು.
ರಾಜ್ಯ ಫಾಕ್ಟರೀಸ್ ಆ್ಯಂಡ್ ಬಾಯ್ಲರ್ ಇಂಡಸ್ಟ್ರೀಸ್ ಸೇಪ್ಟಿ ಆ್ಯಂಡ್ ಹೆಲ್ತ್‌ನ ಹೆಚ್ಚುವರಿ ನಿರ್ದೇಶಕ ಕೆ.ಜಿ. ನಂಜಪ್ಪ, ಎನ್‌ಐಪಿಎಂ ರಾಷ್ಟ್ರೀಯ ಅಧ್ಯಕ್ಷ ಡಾ| ಎಂ.ಎಚ್. ರಾಜ, ಪ್ರಧಾನ ಕಾರ್ಯದರ್ಶಿ, ಪಿ.ಆರ್. ಬಸವರಾಜ್, ಎಂಆರ್‌ಪಿಎಲ್ ಜಿಜಿಎಂ-ಎಚ್‌ಆರ್ ಕೃಷ್ಣ ಹೆಗ್ಡೆ ಎಂ., ಎನ್‌ಐಪಿಎಂ ಎಂಸಿ ಕಾರ್ಯದರ್ಶಿ ಲಕ್ಷ್ಮೀಶ್ ರೈ, ಆಯೋಜನಾ ಸಮಿತಿ ಚೇರ್ಮನ್ ಪಿ.ಪಿ. ಶೆಟ್ಟಿ ಮತ್ತಿತರರು ಇದ್ದರು.
ಚೇರ್ಮನ್ ಸ್ಟೀವನ್ ಪಿಂಟೋ ಸ್ವಾಗತಿಸಿದರು.