Advertisement

Compliant: ಸಿಆರ್‌ಪಿಎಫ್ ಭದ್ರತೆ ಕೊಡಿಸಿ, ನನ್ನ ಜೀವಕ್ಕೆ ಅಪಾಯ ಇದೆ: ಸಿ.ಟಿ.ರವಿ

12:47 AM Jan 06, 2025 | Team Udayavani |

ಬೆಂಗಳೂರು: ತಮ್ಮ ಮೇಲೆ ಪೊಲೀಸ್‌ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿರುವ ಮೇಲ್ಮನೆ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಈಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿದ್ದಾರೆ.

Advertisement

ಈ ಕುರಿತು ಆಯೋಗಕ್ಕೆ 14 ಪುಟಗಳ ಪತ್ರ ಬರೆದಿರುವ ಅವರು, 3 ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದು, ಈ ಪೈಕಿ ನಾಲ್ಕು ಬೇಡಿಕೆಗಳನ್ನು ತತ್‌ಕ್ಷಣ ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ. ಜತೆಗೆ ನಕಲಿ ಎನ್‌ಕೌಂಟರ್‌ ಮಾಡಿ ನನ್ನ ತವರೂರಿಗೆ ಶವ ಕಳುಹಿಸಲು ಯೋಜಿಸಿದ್ದರು, ಬೆಳಗಾವಿಯ ಐಜಿಪಿ, ಎಸ್‌ಪಿ, ಪೊಲೀಸ್‌ ಆಯುಕ್ತ, ಹಿರೆಬಾಗೇವಾಡಿ ಸಿಪಿಐಯನ್ನು ತತ್‌ಕ್ಷಣ ಅಮಾನತುಪಡಿಸಬೇಕು. 1 ಕೋಟಿ ರೂ. ಪರಿಹಾರ ಕೊಡಬೇಕು. ಇದನ್ನು ಆಪಾದಿತರಾದ ಸರಕಾರ ಮತ್ತು ಪೊಲೀಸರಿಂದ ವಸೂಲಿ ಮಾಡಬೇಕು ಎಂಬ ಆಗ್ರಹ ಮಂಡಿಸಿದ್ದಾರೆ.

ಮುಖ್ಯವಾಗಿ ಡಿ. 19ರಂದು ಖಾನಾಪುರ ಹಾಗೂ ಹಿರೇಬಾಗೇವಾಡಿ ಠಾಣೆಗಳಲ್ಲಿ ತಾನು ಕೊಟ್ಟಿರುವ ದೂರುಗಳನ್ನು ದಾಖಲಿಸಿಕೊಳ್ಳುವಂತೆ ನಿರ್ದೇಶನ ನೀಡಬೇಕು. ಎಫ್ಐಆರ್‌ ದಾಖಲಿಸಿಕೊಳ್ಳಲು ಸಿಬಿಐಗೆ ನಿರ್ದೇಶನ ನೀಡಬೇಕು ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಹಿರೇಬಾಗೇವಾಡಿ ಸಿಪಿಐ, ಎಸ್‌ಪಿ ಭೀಮಾಶಂಕರ್‌ ಗುಳೇದ್‌, ಪೊಲೀಸ್‌ ಆಯುಕ್ತ ಮಾರ್ಟಿನ್‌, ಡಿಜಿ-ಐಜಿಪಿ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು. ಸಂವಿಧಾನದ 194ನೇ ಪರಿಚ್ಛೇದ, ಸದನದ ನಿಯಮ, ಭಾರತೀಯ ನ್ಯಾಯ ಸಂಹಿತೆ, ಪೊಲೀಸ್‌ ಮ್ಯಾನ್ಯುಯಲ್‌ ಉಲ್ಲಂಘನೆ ಆಗಿದ್ದು, ಇದರ ವಿರುದ್ಧವೂ ಶಿಸ್ತು ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಸಿಆರ್‌ಪಿಎಫ್ ಭದ್ರತೆ ಕೊಡಿ
ಪ್ರಭಾವ ಬಳಸಿ ಸಾಕ್ಷಿಗಳನ್ನು ಹೆದರಿಸುವ ಸಾಧ್ಯತೆ ಇರುವುದರಿಂದ ಬೆಳಗಾವಿಯ ಐಜಿಪಿ, ಎಸ್‌ಪಿ, ಪೊಲೀಸ್‌ ಆಯುಕ್ತ, ಹಿರೆಬಾಗೇವಾಡಿ ಸಿಪಿಐಯನ್ನು ತತ್‌ಕ್ಷಣ ಅಮಾನತುಪಡಿಸಬೇಕು. ರಾಜ್ಯದ ಪೊಲೀಸರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಲಕ್ಷ್ಮೀ ಹೆಬ್ಬಾಳ್ಕರ್‌ ಸಹಿತ ಸಚಿವ ಸಂಪುಟದ ಸಚಿವರಿಂದ ನನಗೆ ಬೆದರಿಕೆ ಇರುವುದರಿಂದ ರಕ್ಷಣೆಗಾಗಿ ಸಿಆರ್‌ಪಿಎಫ್ ಭದ್ರತೆ ಒದಗಿಸಬೇಕು ಎಂದಿದ್ದಾರೆ.

ಕೋಟಿ ರೂ. ಪರಿಹಾರ
ಪೊಲೀಸರು ತನ್ನನ್ನು ಬಂಧಿಸುವುದಕ್ಕಿಂತ ಹೆಚ್ಚು ಅಪಹರಣ ಮಾಡಿದಂತಾಗಿದ್ದು, ಸಮವಸ್ತ್ರದಲ್ಲಿದ್ದ ಸುಪಾರಿ ಕಿಲ್ಲರ್‌ಗಳಂತೆ ವರ್ತಿಸಿದ್ದಾರೆ. ಹಳೇ ಕ್ರಶರ್‌, ಕಲ್ಲುಕೋರೆ, ಬಯಲು ಪ್ರದೇಶ, ಕಬ್ಬಿನ ಗದ್ದೆಯಂತಹ ಪ್ರದೇಶಗಳಲ್ಲಿ ಸುತ್ತಾಡಿಸಿದ್ದಾರೆ. ಸುಮಾರು 17 ತಾಸುಗಳ ಕಾಲ 400 ರಿಂದ 500 ಕಿ.ಮೀ. ಸುತ್ತಾಡಿಸಿದ್ದಾರೆ.

Advertisement

ನಕಲಿ ಎನ್‌ಕೌಂಟರ್‌ ಮಾಡಿ ತನ್ನ ತವರೂರಿಗೆ ಶವ ಕಳುಹಿಸಲು ಯೋಜಿಸಿದ್ದರು ಎಂದು ಆರೋಪಿಸಿದ್ದಾರಲ್ಲದೆ, ತನ್ನ ವಿರುದ್ಧ ನಕಲಿ ಎಫ್ಐಆರ್‌ ದಾಖಲಾಗಲು ಅವಕಾಶ ಕೊಡಬಾರದು. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ನ್ಯಾಯಾಲಯದ ಅನುಮತಿ ಪಡೆದು ಎಫ್ಐಆರ್‌ ದಾಖಲಿಸುವಂತೆ ನೆರವು ನೀಡಬೇಕು. 1 ಕೋಟಿ ರೂ. ಪರಿಹಾರ ಕೊಡಬೇಕು. ಇದನ್ನು ಆಪಾದಿತರಾದ ಸರಕಾರ ಮತ್ತು ಪೊಲೀಸರಿಂದ ವಸೂಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸಿ.ಟಿ. ರವಿ-ಹೆಬ್ಬಾಳ್ಕರ್‌ ಪ್ರಕರಣ: ಇಂದು ಹಕ್ಕುಬಾಧ್ಯತೆ ಸಮಿತಿಯಲ್ಲಿ ಚರ್ಚೆ ?
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಮೇಲ್ಮನೆ ಬಿಜೆಪಿ ಸದಸ್ಯ ಸಿ.ಟಿ. ರವಿ ನಡುವಣ ವಾಗ್ವಾದ ಪ್ರಕರಣವೀಗ ವಿಧಾನ ಪರಿಷತ್ತಿನ ಹಕ್ಕುಬಾಧ್ಯತೆ ಸಮಿತಿಗೆ ಶಿಫಾರಸಾಗಿದ್ದು, ಸೋಮವಾರ ಸಮಿತಿಯ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳಿವೆ. ಬೆಳಗ್ಗೆ ಸಮಿತಿಯ ಸಭೆ ನಡೆಯಲಿದ್ದು, ಪೊಲೀಸರಿಂದ ಹಕ್ಕುಚ್ಯುತಿ ಆಗಿರುವ ಬಗ್ಗೆ ಸಿ.ಟಿ. ರವಿ ಅವರು ಸಭಾಪತಿಗೆ ನೀಡಿದ್ದ ದೂರು ಮತ್ತು ಅರುಣ್‌ ಹಾಗೂ ರವಿಕುಮಾರ್‌ ಅವರು ನೇರವಾಗಿ ಹಕ್ಕುಬಾಧ್ಯತೆ ಸಮಿತಿಗೆ ಕೊಟ್ಟ ದೂರುಗಳನ್ನು ಏಕಕಾಲದಲ್ಲಿ ವಿಚಾರಣೆಗೆ ಎತ್ತಿಕೊಳ್ಳುವ ಸಂಭವವಿದೆ.

Advertisement

Udayavani is now on Telegram. Click here to join our channel and stay updated with the latest news.

Next