Advertisement
ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಹಾಗೂ ಸುತ್ತಲಿನ ಪ್ರದೇಶ ತಗ್ಗಿನಲ್ಲಿದೆ. ಮರೋಳಿ, ಕೆಂಬಾರ್, ಅಳಪೆ ಮೊದಲಾದ ಎತ್ತರ ಪ್ರದೇಶದಿಂದ ಹರಿದು ಬರುವ ನೀರು ಇದೇ ರಾಜಕಾಲುವೆ ಮೂಲಕ ಹರಿದು ಹೋಗುತ್ತದೆ. ಪಡೀಲ್ ಭಾಗದಲ್ಲಿರುವ ಪ್ರಮುಖ ಕಾಲುವೆಗಳಲ್ಲಿ ಇದೂ ಒಂದಾಗಿದೆ. ಭಾರಿ ಮಳೆಯ ಸಂದರ್ಭದಲ್ಲಿ ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತದೆ. ಆದರೆ ಇದೀಗ ಕಾಲುವೆಗೆ ಸ್ಮಾರ್ಟ್ ಸಿಟಿಯ 2ನೇ ಹಂತದ ಕಾಮಗಾರಿಯ ಭಾಗವಾಗಿ ಪೈಪ್ ಅಳಡಿಸಲಾಗಿದ್ದು, ಇದರಿಂದ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಅಡ್ಡಿ ಪಡಿಸಿದಂತಾಗಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.
ರಾಜಕಾಲುವೆಗೆ ಪೈಪ್ ಅಳವಡಿಸಿದ ಕಾರಣ ಮುಂದಿನ ದಿನಗಳಲ್ಲಿ ನಗರದ ಇತರ ಪ್ರದೇಶಗಳಂತೆ ಪಡೀಲ್ ಕೂಡ ಕೃತಕ ನೆರೆ ಆವೃತ ಪ್ರದೇಶಗಳ ಪಟ್ಟಿಗೆ ಸೇರಬಹುದಾ ಎನ್ನುವ ಆತಂಕ ಉಂಟಾಗಿದೆ. ಇಲ್ಲಿಯವರೆಗೆ ಯಾವುದೇ ಸಮಸ್ಯೆ ಇಲ್ಲದೆ ಸರಾಗವಾಗಿ ನೀರು ಹರಿದು ಹೋಗುತ್ತಿತ್ತು. ನೀರು ಹರಿಯುವ ಹಾದಿಗೆ ಇದೀಗ ಪೈಪ್ ಅಳವಡಿಸಿ ಜಿಲ್ಲಾಧಿಕಾರಿ ಕಚೇರಿಯ ಅವರಣದೊಳಗೂ ನೆರೆ ಉಕ್ಕಿ ಹರಿಯುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪಡೀಲ್ – ಪಂಪ್‌ವೆಲ್ ಮುಖ್ಯ ರಸ್ತೆಯ ಅಡಿಭಾಗದಲ್ಲೇ ಈ ರಾಜ ಕಾಲುವೆ ಹಾದು ಹೋಗುತ್ತದೆ. ಕೃತಕ ನೆರೆಯಿಂದ ರಸ್ತೆಯೂ ಮುಳುಗಡಯಾಗಿ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಯೂ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪರಿಶೀಲನೆ ಬಳಿಕವೇ ಅಳವಡಿಕೆ: ಸ್ಮಾರ್ಟ್‌ಸಿಟಿ
ಕಾಲುವೆಯ ಒಟ್ಟು ಸುತ್ತಳತೆ, ನೀರು ಹರಿಯುವ ಪ್ರಮಾಣ ಇತ್ಯಾದಿಗಳನ್ನು ಪರಿಶೀಲನೆ ಮಾಡಿ, ಲೆಕ್ಕಾಚಾರ ನಡೆಸಿಯೇ ಪೈಪ್ ಅಳವಡಿಸಲಾಗುತ್ತಿದೆ. ಜತೆಗೆ ಡಿಸಿ ಕಚೇರಿ ಆವರಣದ ಒಳಭಾಗದಲ್ಲಿ ಮ್ಯಾನ್ ಹೋಲ್‌ಗಳನ್ನು ಇರಿಸಲಾಗಿದ್ದು, ಇದರಿಂದಾಗಿ ಒಂದು ವೇಳೆ ಒಳಗೆ ನೀರು ಬ್ಲಾಕ್ ಆದರೆ ಅದನ್ನು ತೆರವುಗೊಳಿಸುವ ನಿಟ್ಟಿನಲ್ಲಿ ವ್ಯವಸ್ಥೆಯಿದೆ. ಪ್ರಸ್ತುತ ಅಳವಡಿಸಿರುವ ಪೈಪ್ 1,200 ಮೀ.ಮೀ. ವ್ಯಾಸ ಹೊಂದಿದೆ. ಇದು ತೋಡಿನ ಒಟ್ಟು ವಿಸ್ತೀರ್ಣಕ್ಕೆ ಸಮನಾಗಿದೆ. ಆದ್ದರಿಂದ ಕೃತಕ ನೆರೆಯ ಸಮಸ್ಯೆ ಉಂಟಾಗದು ಎನ್ನುವುದು ಸ್ಮಾರ್ಟ್‌ಸಿಟಿ ಅಧಿಕಾರಿಗಳ ಮಾತು.
Related Articles
Advertisement