Advertisement

Mangaluru: ಕದ್ರಿ ಹಿಲ್ಸ್‌  ಹುತಾತ್ಮರ ಸ್ಮಾರಕಕ್ಕೆ ಹೊಸ ರೂಪ

02:55 PM Dec 17, 2024 | Team Udayavani |

ಮಹಾನಗರ: 1992ರಲ್ಲಿ ಮಂಗಳೂರಿನ ಕದ್ರಿ ಹಿಲ್ಸ್‌ನಲ್ಲಿ ನಿರ್ಮಿಸಲಾದ ಹುತಾತ್ಮ ಯೋಧರ ಸ್ಮಾರಕವನ್ನು ನವೀಕರಿಸುವ ಕೆಲಸಕ್ಕೆ ಚಾಲನೆ ಸಿಕ್ಕಿದ್ದು, 2025ರ ಜನವರಿ 26ರೊಳಗೆ ಸಿದ್ಧವಾಗುವ ನಿರೀಕ್ಷೆ ಇದೆ.

Advertisement

ಪುಟ್ಟ ಜಾಗದಲ್ಲಿ ಹಸುರ ಹಾಸಿನ ನಡುವೆ ಇರುವ ಈ ಸ್ಮಾರಕದ ಮೇಲುಸ್ತುವಾರಿಯನ್ನು ಮಾಜಿ ಸೈನಿಕರ ಸಂಘದವರು ಹೊತ್ತಿದ್ದಾರೆ. ಪ್ರತಿ ವರ್ಷವೂ ಕಾರ್ಗಿಲ್‌ ವಿಜಯ ದಿವಸ್‌, ವಿಜಯ ದಿವಸ್‌ ಇತ್ಯಾದಿ ಕಾರ್ಯಕ್ರಮಗಳೂ ಇಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ. ಅವರಿಗೆಲ್ಲ ಅವಕಾಶ ಕೊಡುವ ನಿಟ್ಟಿನಲ್ಲಿ ವಿಸ್ತರಣೆಯೊಂದಿಗೆ ಹೊಸ ರೂಪ ನೀಡಲು ನಿರ್ಧರಿಸಲಾಗಿತ್ತು.

ಕಳೆದ ಆಗಸ್ಟ್‌ನಲ್ಲಿ ನವೀಕರಣ ಕಾಮಗಾರಿಗಳಿಗೆ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಗುದ್ದಲಿ ಪೂಜೆ ನೆರವೇರಿಸಿದ್ದಲ್ಲದೆ ಅವರ 1 ತಿಂಗಳ ವೇತನ ನೀಡುವುದಾಗಿಯೂ ಪ್ರಕಟಿಸಿದ್ದರು. ಶಾಸಕ ವೇದವ್ಯಾಸ ಕಾಮತ್‌ 25 ಲಕ್ಷ ರೂ. ಮೊತ್ತದ ಅನುದಾನ ಒದಗಿಸುವುದಾಗಿ ತಿಳಿಸಿದ್ದರು. ಜುಲೈನಲ್ಲಿ ಪಿಲ್ಲರ್‌ ಹಾಕುವುದಕ್ಕಾಗಿ ಸ್ಮಾರಕದ ಬಳಿ ಹೊಂಡಗಳನ್ನು ಮಾಡಲಾಗಿದ್ದು ಕೆಲವು ಸಮಯ ಹಾಗೆಯೇ ಇತ್ತು. ವಿಧಾನ ಪರಿಷತ್‌ ಉಪ ಚುನಾವಣೆಯೂ ಬಂದ ಕಾರಣ ಕೆಲಸ ಮುಂದೆ ಹೋಗಲಿಲ್ಲ. ಈ ಕುರಿತು ಮಾಜಿ ಸೈನಿಕರ ಸಂಘದವರು ಪದೇ ಪದೇ ಮನಪಾ ಆಡಳಿತವನ್ನು ಹಿಂಬಾಲಿಸುತ್ತಿದ್ದು, ಪ್ರಸ್ತುತ ಪಿಲ್ಲರ್‌ಗೆ ಕಾಂಕ್ರೀಟ್‌ ಹಾಕುವ ಕೆಲಸ ಡಿಸೆಂಬರ್‌ ಮೊದಲ ವಾರ ನಡೆದಿದೆ.

ಏನೆಲ್ಲಾ ಸೌಲಭ್ಯ ?
ಪ್ರಸ್ತುತ ಇಲ್ಲಿ ಸ್ಮಾರಕ ಹಾಗೂ ಅದಕ್ಕೆ ಸುತ್ತ ಬೇಲಿ ಬಿಟ್ಟರೆ ಬೇರ್ಯಾವುದೇ ಸವಲತ್ತು ಇಲ್ಲ. ಮೇಲ್ಛಾವಣಿ ಇಲ್ಲದೆ ಮಳೆಗಾಲದಲ್ಲಿ ಕಾರ್ಯಕ್ರಮ ನಡೆಸಲು ಕಷ್ಟವಾಗುತ್ತಿತ್ತು. ಈಗಿನ ಪ್ರಸ್ತಾವನೆ ಪ್ರಕಾರ, ಸ್ಮಾರಕದ ಅಂದ ಹೆಚ್ಚಿಸುವುದರ ಜತೆಗೆ ಸುತ್ತಲೂ ಮೂರು ಸಾಲಿನ ಗ್ಯಾಲರಿ, ಅದಕ್ಕೆ ಮೇಲ್ಚಾವಣಿ, ನೆಲಕ್ಕೆ ನೆಲಹಾಸು ಇಂಟರ್‌ಲಾಕ್‌ ಅಳವಡಿಸಲಾಗುವುದು. ಅಲ್ಲದೆ ಪುರುಷರು, ಮಹಿಳೆಯರ ಪ್ರತ್ಯೇಕ ಶೌಚಾಲಯವನ್ನೂ ನಿರ್ಮಿಸಲಾಗುವುದು. ಮಂಗಳೂರು ಮಹಾನಗರ ಪಾಲಿಕೆಯ ನಿಧಿಯಿಂದ 25 ಲಕ್ಷ ರೂ. ಮೀಸಲಿರಿಸಲಾಗಿದೆ.

Advertisement

ಮಾಜಿ ಯೋಧರ ಸ್ಮಾರಕಗಳು
ಮಾಜಿ ಯೋಧ ಹುತಾತ್ಮರಾಗಿರುವ ಮಂಗಳೂರಿನ ಕ್ಯಾ| ಪ್ರಾಂಜಲ್‌ ಅವರ ನೆನಪಿನಲ್ಲಿ ಕೊಟ್ಟಾರ ಚೌಕಿಯಲ್ಲಿ ಸ್ಮಾರಕ ನಿರ್ಮಿಸಲು 15 ಲಕ್ಷ ರೂ. ಇರಿಸಲಾಗಿದೆ. ಅಲ್ಲದೆ ದಶಕದ ಹಿಂದೆ ಮೃತಪಟ್ಟ ವಾಯುಸೇನೆ ಯೋಧ ಫ್ಲೈಟ್‌ ಕೆವಿನ್‌ ರೊನಾಲ್ಡ್‌ ಸೆರಾವೊ ಅವರಿಗೆ ಗೌರವಾರ್ಥ ಕುಲಶೇಖರದಲ್ಲಿ ಸ್ಮಾರಕ ನಿರ್ಮಾಣ ಮಾಡುವುದಕ್ಕೆ 15 ಲಕ್ಷ ರೂ. ಮೊತ್ತವನ್ನು ಇಡಲಾಗಿದ್ದು, ಬೇಗನೆ ಕೆಲಸ ಶುರುವಾಗಲಿದೆ.

31 ಲಕ್ಷ ರೂ. ವೆಚ್ಚ
ಕದ್ರಿ ಹಿಲ್ಸ್‌ ಹುತಾತ್ಮರ ಸ್ಮಾರಕಕ್ಕೆ 2021-22ರ ಸಾಲಿನ ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನವನ್ನು ಶಾಸಕ ವೇದವ್ಯಾಸ ಕಾಮತ್‌ ಮಂಜೂರುಗೊಳಿಸುವಲ್ಲಿ ಶ್ರಮಿಸಿದ್ದಾರೆ. ಅಲ್ಲದೆ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯನಿಧಿಯಿಂದ 5 ಲಕ್ಷ ರೂ. ಸೇರಿದಂತೆ ಒಟ್ಟು 31 ಲಕ್ಷ ರೂ. ಒದಗಿಸಲಾಗಿದೆ.

ಇಂಡೋ-ಪಾಕ್‌ ಯುದ್ಧ ವಿಜಯ್‌ ದಿವಸ್‌ ಆಚರಣೆ
ಮಹಾನಗರ, ಡಿ. 16: ಭಾರತ- ಪಾಕಿಸ್ಥಾನ ನಡುವೆ 1971ರಲ್ಲಿ ನಡೆದ ಇಂಡೋ-ಪಾಕ್‌ ಯುದ್ಧದಲ್ಲಿ ಭಾರತ ಸಾಧಿಸಿದ ವಿಜಯದ ಸಂಭ್ರಮವನ್ನು ವಿಜಯ್‌ ದಿವಸ್‌ ರೂಪದಲ್ಲಿ ಸೋಮವಾರ ಮಂಗಳವಾರ ಆಚರಿಸಲಾಯಿತು.

ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಕದ್ರಿ ಹಿಲ್ಸ್‌ನಲ್ಲಿರುವ ಯೋಧರ ಯುದ್ಧ ಸ್ಮಾರಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಮಾರ್ಗದರ್ಶಕ ಕರ್ನಲ್‌ ಐ.ಎನ್‌. ರೈ ಅವರು ಇಂಡೋ-ಪಾಕ್‌ ಯುದ್ಧದ ದಿನಗಳನ್ನು ನೆನಪಿಸಿಕೊಂಡರು.

ಅಂದು ಪೂರ್ವ ಪಾಕಿಸ್ಥಾನದ ಲೆ| ಜ| ಎ.ಎ.ಕೆ. ನಿಯಾಝಿ ಅವರು 93 ಸಾವಿರ ಪಾಕಿಸ್ಥಾನಿ ಸೈನಿಕ ಮತ್ತು ಅರೆಸೈನಿಕರೊಂದಿಗೆ ಭಾರತದ ಲೆ| ಜ| ಜೆ.ಎಸ್‌. ಆರೋರ ಅವರಿಗೆ ಢಾಕಾದ ರಾಮ್ನಾ ಕ್ರೀಡಾಂಗಣದಲ್ಲಿ ಶರಣಾಗಿದ್ದರು. ಅತೀ ಕಡಿಮೆ ದಿನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಯುದ್ಧಕೈದಿಗಳು ಶರಣಾಗಿರುವುದು ಎರಡನೇ ಮಹಾಯುದ್ಧದ ಅನಂತರ ಮೊದಲ ಬಾರಿಯಾಗಿದೆ. ಯುದ್ಧದಲ್ಲಿ ಭಾರತದ ಅನೇಕ ಸೈನಿಕರು ಹುತಾತ್ಮರಾಗಿದ್ದು, ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ ಎಂದು ರೈ ಹೇಳಿದರು.

ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ., ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಭಾಗವಹಿಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಕಾಂತ್‌ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಕ್ಯಾ| ದೀಪಕ್‌ ಅಡ್ಯಂತಾಯ ವಂದಿಸಿದರು.

ಮಾರ್ಗದರ್ಶಕ ಕರ್ನಲ್‌ ಎನ್‌. ಶರತ್‌ ಭಂಡಾರಿ, ಸಂಘದ ಉಪಾಧ್ಯಕ್ಷ ಕರ್ನಲ್‌ ಜಯಚಂದ್ರನ್‌, ಕೋಶಾಧಿಕಾರಿ ಪಿ.ಒ. ಸುಧೀರ್‌ ಪೈ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕದ್ರಿಹಿಲ್ಸ್‌ ಯುದ್ಧ ಸ್ಮಾರಕವನ್ನು ಪಾಲಿಕೆ ವತಿಯಿಂದ ಪೂರ್ಣ ನವೀಕರಿಸಲಾಗುವುದು. ಸ್ಮಾರಕಕ್ಕೆ ಆ ಬಳಿಕ ಹೊಸ ಲುಕ್‌ ಸಿಗಲಿದೆ, ಇಂದು ವಿಜಯದಿವಸ ನಡೆದಿದೆ, ಇನ್ನು ಕೆಲಸ ಚುರುಕಾಗಲಿದ್ದು ಬರುವ ಜನವರಿ 26ರೊಳಗೆ ಪೂರ್ಣಗೊಳ್ಳಲಿದೆ.
-ಸಿ.ಎಲ್‌. ಆನಂದ್‌, ಕಮಿಷನರ್‌, ಮಂಗಳೂರು ಮಹಾನಗರ ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next