ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ವಿಷಯವನ್ನು 10ನೇ ತರಗತಿ ಪಠ್ಯದಿಂದ ಕೈಬಿಟ್ಟಿರುವುದು ಇಡೀ ಸಮಾಜಕ್ಕೆ ನೋವು ತಂದಿದ್ದು, ಇಂತಹ ಪ್ರಮಾದ ನಡೆದಿದ್ದರೆ ಇದನ್ನು ಪ್ರತಿಭಟಿಸಿ ಆ ಸಮುದಾಯಕ್ಕೆ ಸೇರಿದ ಜಿಲ್ಲೆಯ ಇಬ್ಬರು ಸಚಿವರು ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಮಾಜಿ ಉಸ್ತುವಾರಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಶ್ರೀ ನಾರಾಯಣ ಗುರುಗಳ ಅನುಯಾಯಿಗಳು ಬಹುದೊಡ್ಡ ಸಂಖ್ಯೆ ಯಲ್ಲಿದ್ದಾರೆ. ಈ ದೊಡ್ಡ ಸಮುದಾಯದ ಮತ ಪಡೆದು ಅಧಿಕಾರಕ್ಕೆ ಬಂದಿರುವ ಬಿಜೆಪಿಯು ಸಮುದಾಯ ಮತ್ತು ಬ್ರಹ್ಮಶ್ರೀ ನಾರಾಯಣಗುರುಗಳನ್ನು ಮರೆತಿದೆ ಎಂದು ಅವರು ಆರೋಪಿಸಿದರು.
ಹೆಡ್ಗೆವಾರ್ ತಮಗೆ ಆದರ್ಶ ಎಂದು ಅವರ ಅಭಿಮಾನಿಗಳು ಪಕ್ಷದ ಸಭೆಯಲ್ಲಿ ಹೇಳಲಿ. ಆದರೆ ರಾಜ್ಯದಲ್ಲಿ ಸಾಮರಸ್ಯಕ್ಕೆ ಧಕ್ಕೆ ಆಗುವಂತೆ ಪಠ್ಯದಲ್ಲಿ ಸೇರಿಸುವುದು ಘೋರ ಅಪರಾಧ. ಇದರ ಹಿಂದೆ ರಾಜಕೀಯ ಗಿಮಿಕ್ ಅಡಗಿದೆ ಎಂದರು.
ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರನ್ನು ರೈಲು ನಿಲ್ದಾಣಕ್ಕೆ ಮತ್ತು ಕೋಟಿ ಚೆನ್ನಯರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇರಿಸುವಂತೆ ಕಾಂಗ್ರೆಸ್ ಒತ್ತಾಯಿಸುತ್ತಿದ್ದರೂ ಅದಾಗಿಲ್ಲ ಎಂದರು.
ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ಸಾಹುಲ್ ಹಮೀದ್, ಜಯಶೀಲ ಅಡ್ಯಂತಾಯ, ಅಪ್ಪಿ, ಸುರೇಂದ್ರ ಕಂಬಳಿ, ನೀರಜ್ ಪಾಲ್, ನಜೀರ್ ಬಜಾಲ್, ಶಬ್ಬೀರ್ ಉಪಸ್ಥಿತರಿದ್ದರು.