ಮಂಗಳೂರು: ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 7ನೇ ಆವೃತ್ತಿ ಮಂಗಳೂರಿನ ಡಾ|ಟಿಎಂಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜ.11, 12ರಂದು ನಡೆಯಲಿದೆ. ಜ.11ರಂದು ಬೆಳಗ್ಗೆ 10 ಗಂಟೆಗೆ ಲಿಟ್‌ಫೆಸ್ಟ್ ಅನ್ನು ಖ್ಯಾತ ಸಾಹಿತಿ ಡಾ|ಎಸ್.ಎಲ್.ಭೈರಪ್ಪ ಹಾಗೂ ಶತಾವಧಾನಿ ಡಾ|ಆರ್.ಗಣೇಶ್ ಅವರು ಉದ್ಘಾಟಿಸಲಿದ್ದಾರೆ.
ಭಾರತ್ ಫೌಂಡೇಶನ್‌ನ ಟ್ರಸ್ಟಿ ಸುನಿಲ್ ಕುಲಕರ್ಣಿ ಹಾಗೂ ಶ್ರೀರಾಜ್ ಗುಡಿ ಅವರು ಬುಧವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. ಜ.11, 12ರಂದು ಎರಡೂ ದಿನ 29 ಗೋಷ್ಠಿಗಳು ಎರಡು ಸಭಾಂಗಣಗಳಲ್ಲಿ ನಡೆಯಲಿದ್ದು 50ಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳುವರು ಎಂದರು.
ಜ.12ರಂದು ಬೆಳಗ್ಗೆ ಕೇಂದ್ರ ಸಾಮರ್ಥ್ಯ ಆಯೋಗದ ಸದಸ್ಯ, ಚಾಮರಾಜನಗರ, ಮೈಸೂರು ಆಸುಪಾಸಿನಲ್ಲಿ ಅಭಿವೃದ್ಧಿ ಚಟುವಟಿಕೆ ನಡೆಸಿರುವ ಡಾ|ಬಾಲಸುಬ್ರಹ್ಮಣ್ಯಂ ಅವರಿಗೆ ಈ ಬಾರಿಯ ಲಿಟ್‌ಫೆಸ್ಟ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಜ.11ರಂದು 10.45ಕ್ಕೆ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಎನರ್ಜಿ ಫಾರ್ ಸರ್ವೈವಲ್-ಸೆಕ್ಯೂರಿಟಿ ಆ್ಯಂಡ್ ಕ್ಲೈಮೇಟ್ ಡಿಬೇಟ್ ನಡೆಸಿಕೊಡುವರು. ಪ್ರಾಸೆಸ್ ರಿಫಾಮ್ಸ್ ಆಸ್ ಪಬ್ಲಿಕ್ ಪಾಲಿಸಿ ಎನ್ನುವ ಕಲಾಪ 3ಗಂಟೆಗೆ ನಡೆಯಲಿದ್ದು ಪ್ರಧಾನಿಯವರ ಆರ್ಥಿಕ ಸಲಹೆಗಾರರಾದ ಸಂಜೀವ್ ಸಾನ್ಯಾಲ್ ಮಾತನಾಡುವರು, ಗ್ರಾಜುವೇಟಿಂಗ್ ದಿ ಎಜುಕೇಶನ್ ಪಾಲಿಸಿ ಕುರಿತು ಡಾ|ಶಾಂತಿಶ್ರೀ ಧುಲಿಪುಡಿ ಪಂಡಿತ್ ಹಾಗೂ ಡಾ|ವಿನಯ್ ಸಹಸ್ರಬುದ್ಧೆ, ಡೆಮಾಕ್ರೆಸಿ ಮತ್ತು ಡೆಮಾಕ್ರೆಟಿಕ್ ಗವರ್ನೆನ್ಸ್ ಕುರಿತು ಬಿಜೆಪಿ ತಮಿಳುನಾಡು ಅಧ್ಯಕ್ಷ ಕೆ.ಅಣ್ಣಾಮಲೈ ಮಾತನಾಡಲಿದ್ದಾರೆ.
ಜ.11ರಂದು ಕನ್ನಡ ಸಾಹಿತ್ಯ ವಿಮರ್ಶೆ, ಜಿ.ಎಸ್.ಆಮೂರ ಶತಮಾನದ ನೆನಪು ಚರ್ಚೆಯಲ್ಲಿ ಡಾ|ಜಿ.ಬಿ.ಹರೀಶ, ಡಾ|ಎನ್.ಎಸ್.ಗುಂಡೂರ, ಡಾ|ಶ್ಯಾಮಸುಂದರ ಬಿದರಕುಂದಿ ಪಾಲ್ಗೊಳ್ಳುವರು, ಪತ್ರಿಕೋದ್ಯಮ ಮತ್ತು ಸಾಹಿತ್ಯ ಗೋಷ್ಠಿಯಲ್ಲಿ ಜೋಗಿ ಹಾಗೂ ರವಿ ಹೆಗಡೆ, ಹಳ್ಳಿಯನ್ನು ಕಟ್ಟುವ ಕಷ್ಟ ಸುಖ ವಿಚಾರದಲ್ಲಿ ಶಿವಾನಂದ ಕಳವೆ ಮತ್ತು ಡಾ|ಪ್ರಕಾಶ್ ಭಟ್, ಹಿರಿಯ ಚಿತ್ರನಿರ್ದೇಶಕ ಗುರುದತ್ ಕುರಿತ ಪುಸ್ತಕ ಬಿಡುಗಡೆ ಚರ್ಚೆಯಲ್ಲಿ ಲತಾ ಜಗ್ತಿಯಾನಿ, ಪ್ರಕಾಶ್ ಬೆಳವಾಡಿ ಪಾಲ್ಗೊಳ್ಳಲಿದ್ದಾರೆ.
ಜ.12ರಂದು ಟಿಪ್ಪುಸುಲ್ತಾನ್ ಕುರಿತ ಲೇಖಕ ಡಾ|ವಿಕ್ರಂ ಸಂಪತ್ ಪುಸ್ತಕದ ಬಗ್ಗೆ ಸಂವಾದ ನಡೆಯಲಿದೆ, ಜಾನಪದ: ಗೊಂದಲಿಗರ ಪದಗಳು-ಹಾಡು ಮತ್ತು ಕಥೆ ಎಂಬ ಕುರಿತು ವಿಠಲ್ ಗೋಂದಳೆ, ಸಿನಿಮಾ ತಾಂತ್ರಿಕತೆ ಕುರಿತು ಗಿರೀಶ್ ಕಾಸರವಳ್ಳಿ, ಗೋಪಾಲಕೃಷ್ಣ ಪೈ, ಹಿಮಾಲಯನ್ ಜಿಯೊಪೊಲಿಟಿಕ್ಸ್ ಕುರಿತು ದಿಲೀಪ್ ಸಿನ್ಹ, ಡಾ|ಕ್ಲಾಡ್ ಅರ್ಪಿ, ಜಂಗ್‌ಚಪ್ ಖೋಡೆನ್ ಚರ್ಚಿಸುವರು, ಯುವಗೋಷ್ಠಿ ಸಹಿತ ಹಲವು ಕಲಾಪ ನಡೆಯಲಿವೆ.
ಭಾರತ್ ಫೌಂಡೇಶನ್‌ನ ಈಶ್ವರ್ ಪ್ರಸಾದ್ ಶೆಟ್ಟಿ, ಸುಜಿತ್ ಪ್ರತಾಪ್, ದುರ್ಗಾರಾಮದಾಸ್ ಕಟೀಲ್ ಉಪಸ್ಥಿತರಿದ್ದರು.
ವೈಶಿಷ್ಟ್ಯಗಳು:
– ಹರಟೆಕಟ್ಟೆಯಲ್ಲಿ ವಿದ್ವಾಂಸ, ಸಾಹಿತಿ ಡಾ|ಎಸ್.ಎಲ್.ಭೈರಪ್ಪ ಪಾಲ್ಗೊಳ್ಳಲಿದ್ದಾರೆ.
– 11ರಂದು ಸಂಸ್ಕೃತಯಾನಮ್ ಎನ್ನುವ ಕಲಾಪ ನಡೆಯಲಿದ್ದು ಸಂಸ್ಕೃತದಲ್ಲೇ ನಡೆಯಲಿದ್ದು ಸಮಷ್ಟಿ ಗುಬ್ಬಿ, ಡಾ.ಎಚ್.ಆರ್.ವಿಶ್ವಾಸ, ಡಾ|ಶಂಕರ್ ರಾಜಾರಾಮನ್ ಪಾಲ್ಗೊಳ್ಳುವರು.
– ತುಳು ಸಾಹಿತ್ಯ-ಆಳ-ಅಗಲ-ಆವಿಷ್ಕಾರ ಕುರಿತು ಹರಟೆಕಟ್ಟೆಯಲ್ಲಿ ಚರ್ಚೆ ಜ.11ರಂದು ನಡೆಯಲಿದ್ದು, ಡಾ|ತುಕಾರಾಂ ಪೂಜಾರಿ ಭಾಗವಹಿಸುವರು.
– ಅಂಧರಿಗಾಗಿ ವಿಶೇಷ ಗೋಷ್ಠಿಯನ್ನೂ ಆಯೋಜಿಸಲಾಗಿದೆ.