Advertisement
ಲೇಡಿಗೋಶನ್ ಆಸ್ಪತ್ರೆಯ ನೂತನ ಕಟ್ಟಡದ ಎಲ್ಲ ಕೆಲಸಗಳು ಮುಗಿದಿದ್ದು, ಉದ್ಘಾಟನೆಗೆ ಸಿದ್ಧವಾಗಿವೆ. ಈಗಾಗಲೇ ವೈದ್ಯಕೀಯ ಸೇವೆಗೆ ಬೇಕಾದ ಬಹುತೇಕ ಉಪಕರಣಗಳನ್ನು ಸ್ಥಳಾಂತರ ಮಾಡಲಾಗಿದೆ. ಅಲ್ಲದೆ, ಸಹಜ ಹೆರಿಗೆಯಾದ ತಾಯಂದಿರ ಉಪಚಾರವನ್ನು ಕಳೆದ ಜೂನ್ ತಿಂಗಳಿನಿಂದಲೇ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಮಾಡಲಾಗುತ್ತಿದೆ. ಆದರೆ, ಆಸ್ಪತ್ರೆಯ ಇತರ ವಿಭಾಗಗಳ ಕಾರ್ಯಾರಂಭ ಮಾಡುವ ಮುನ್ನ ಅಗ್ನಿಶಾಮಕ ಕಚೇರಿಯಿಂದ ಭದ್ರತೆಗೆ ಸಂಬಂಧಿಸಿದ ಪ್ರಮಾಣಪತ್ರ ಪಡೆದು ಕೊಳ್ಳಬೇಕಿದೆ. ಪ್ರಮಾಣಪತ್ರ ಸಿಗದ ಹಿನ್ನೆಲೆಯಲ್ಲಿ ನೂತನ ಕಟ್ಟಡವನ್ನು ಸೇವೆಗಾಗಿ ಬಳಸಿಕೊಳ್ಳುವುದು ಅಸಾಧ್ಯವಾಗುತ್ತಿದೆ. ಅಗ್ನಿ ಆಕಸ್ಮಿಕಗಳನ್ನು ತಡೆಯಲು, ಮುನ್ನೆಚ್ಚರಿಕೆ ವಹಿಸಲು ಆಸ್ಪತ್ರೆಯಲ್ಲಿ ಅಳವಡಿಸಲಾದ ವ್ಯವಸ್ಥೆಗಳನ್ನು ಪರಿಶೀಲಿಸಿ ಮಂಗಳೂರಿನಿಂದ ಕಳೆದ ಜನವರಿ 29ರಂದು ಬೆಂಗಳೂರು ಅಗ್ನಿಶಾಮಕ ಕಚೇರಿಗೆ ಪತ್ರ ಕಳುಹಿಸಲಾಗಿದೆ. ಅಲ್ಲಿ ವರದಿ ಪರಿಶೀಲಿಸಿ, ಬಳಿಕ ಪ್ರಮಾಣಪತ್ರವನ್ನು ನೀಡಬೇಕು. ಆದರೆ, ಇನ್ನೂ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಹೊಸ ಕಟ್ಟಡ ಉದ್ಘಾಟನೆ ತಡವಾಗುತ್ತಿದೆ.
ಆಸ್ಪತ್ರೆಯ ಹೊಸ ಕಟ್ಟಡದಲ್ಲಿ ತೀವ್ರ ನಿಗಾ ಘಟಕವಿದೆ. ಅಲ್ಲದೆ, ವಿದ್ಯುತ್ ಚಾಲಿತ ಕೆಲವು ಯಂತ್ರಗಳನ್ನೂ ಅಳವಡಿಸಲಾಗಿರುವುದರಿಂದ ಪ್ರಮಾಣಪತ್ರ ಸಿಗದೆ, ಕಾರ್ಯಾರಂಭ ಮಾಡುವುದು ಸಮಸ್ಯೆಯಾಗುತ್ತದೆ. ಈ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಸವಿತಾ ಅವರನ್ನು ಸಂಪರ್ಕಿಸಿದಾಗ, ‘ವರದಿ ಪರಿಶೀಲನೆಗೆ ಸಮಯಾವಕಾಶ ಬೇಕಾಗುತ್ತದೆ. ಕೆಲವೇ ದಿನಗಳಲ್ಲಿ ಪ್ರಮಾಣಪತ್ರ ಸಿಗಬಹದು. ಪ್ರಮಾಣಪತ್ರ ಲಭ್ಯವಾದ ಬಳಿಕ ಆಸ್ಪತ್ರೆ ಲೋಕಾರ್ಪಣೆಗೊಳ್ಳಲಿದೆ’ ಎಂದರು. ಒದಗದ ಲೋಕಾರ್ಪಣೆ ಭಾಗ್ಯ
ಪ್ರತಿ ಬಾರಿ ಸಭೆ, ಪರಿಶೀಲನೆ ನಡೆದಾಗಲೂ ಶೀಘ್ರ ಕಟ್ಟಡ ಲೋಕಾರ್ಪಣೆಯಾಗಲಿದೆ ಎಂದು ಬಂಧಪಟ್ಟವರು ಹೇಳುತ್ತಲೇ ಬಂದಿದ್ದರು. 2017ರ ಮಾರ್ಚ್‌ನಲ್ಲಿ ಆಸ್ಪತ್ರೆ ಲೋಕಾರ್ಪಣೆಗೊಳ್ಳಲಿದೆ ಎಂದಿದ್ದರು ಆದರೆ, ಆಗ ಆಗಿರಲಿಲ್ಲ. ಬಳಿಕ 2018ರ ಜೂನ್, ಜುಲೈ, ಡಿಸೆಂಬರ್‌ನಲ್ಲಿ ಕಟ್ಟಡ ಲೋಕಾರ್ಪಣೆಯಾಗಲಿದೆ ಎಂದು ಹೇಳಲಾಗಿತ್ತಾದರೂ ಕಟ್ಟಡಕ್ಕೆ ಲೋಕಾರ್ಪಣೆ ಭಾಗ್ಯ ಒದಗಿ ಬಂದಿರಲಿಲ್ಲ.
Related Articles
ಲೇಡಿಗೋಶನ್ ಆಸ್ಪತ್ರೆಯಲ್ಲಿ ಅಗ್ನಿಶಾಮಕ ವ್ಯವಸ್ಥೆಗೆ ಸಂಬಂಧಿಸಿದಂತೆ ಕ್ಲಿಯರೆನ್ಸ್ ಪತ್ರ ನೀಡಲು ಕೋರಿಕೆ ಪತ್ರ ಈಗಾಗಲೇ ದೊರಕಿದ್ದು, ಅನುಮೋದನೆಗೆ ಡಿಜಿಯವರಿಗೆ ಕಳುಹಿಸಲಾಗುವುದು. ಚಲನ್ ಮೂಲಕ ಹಣ ಪಾವತಿಸಿದ ಬಳಿಕ ಕ್ಲಿಯರೆನ್ಸ್ ಪ್ರಮಾಣಪತ್ರ ನೀಡಲಾಗುತ್ತದೆ. ಈ ಪ್ರಕ್ರಿಯೆಗೆ ಒಂದು ತಿಂಗಳು ಬೇಕಾಗುತ್ತದೆ.
– ಶಿವಕುಮಾರ್,
ಉಪ ನಿರ್ದೇಶಕರು ಅಗ್ನಿಶಾಮಕ ಕಚೇರಿ, ಬೆಂಗಳೂರು
Advertisement