Advertisement

Mangaluru: ಗುಂಡಿ ಬಿದ್ದ ರಸ್ತೆಗಳಿಗೆ ಜಲ್ಲಿಕಲ್ಲೇ ಆಧಾರ; ಅಪಾಯದಲ್ಲಿ ಸವಾರರು

03:14 PM Oct 18, 2024 | Team Udayavani |

ಮಹಾನಗರ: ವಿವಿಧ ಕಾಮಗಾರಿ ಉದ್ದೇಶಕ್ಕೆ ನಗರದ ಹಲವು ಕಡೆಗಳಲ್ಲಿ ರಸ್ತೆ ಅಗೆಯುತ್ತಿದ್ದು, ಅವುಗಳನ್ನು ಮತ್ತೆ ಸುಸ್ಥಿತಿಗೆ ತರುವಲ್ಲಿ ಸ್ಥಳೀಯಾಡಳಿತ ಹಿಂದೇಟು ಹಾಕುತ್ತಿದೆ. ಇನ್ನೂ ಕೆಲವೆಡೆ ರಸ್ತೆಗಳು ಗುಂಡಿ ಬಿದ್ದಿದ್ದು, ವಾಹನ ಸವಾರರಿಗೆ ಅಪಾಯ ಸೂಚಿಸುತ್ತಿದೆ.

Advertisement

ಜೈಲ್‌ ರಸ್ತೆ ಮೂಲಕ ಬಿಜೈ ಮಾರುಕಟ್ಟೆ ತಲುಪುವ ರಸ್ತೆಯ ಪಿಂಟೋಸ್‌ ಬೇಕರಿ ಬಳಿ ಕಳೆದ ಅನೇಕ ವರ್ಷಗಳಿಂದ ಆಗಾಗ್ಗೆ ಅಗೆಯಲಾಗುತ್ತಿದೆ. ಅದರಂತೆ ಕೆಲವು ತಿಂಗಳ ಹಿಂದೆಯೂ ಕಾಂಕ್ರೀಟ್‌ ರಸ್ತೆ ಅಗೆಯಲಾಗಿತ್ತು. ರಸ್ತೆಯ ಮಧ್ಯ ಭಾಗದಲ್ಲಿ ಅಗೆದು ಒಳಚರಂಡಿ ಕಾಮಗಾರಿ ನಡೆಸಲಾಗಿತ್ತು. ಕಾಮಗಾರಿ ಮುಗಿದರೂ ರಸ್ತೆ ಸುಸ್ಥಿತಿಗೆ ತರಲಿಲ್ಲ. ಸದ್ಯ ಆ ರಸ್ತೆಯಲ್ಲಿ ಅಗೆದ ಜಾಗಕ್ಕೆ ಜಲ್ಲಿಕಲ್ಲು ಹಾಕಲಾಗಿದೆ. ಕಲ್ಲು ಹದ ಮಾಡದ ಪರಿಣಾಮ ಅವು ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಉಂಟುಮಾಡುತ್ತಿದೆ. ಮುಖ್ಯ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾದರೆ ವಾಹನ ಸವಾರರು ಇದೇ ರಸ್ತೆ ಬಳಕೆ ಮಾಡುತ್ತಾರೆ. ಗುಂಡಿ ಬಿದ್ದ ರಸ್ತೆ, ಜಲ್ಲಿಕಲ್ಲು ಎದ್ದು ಟ್ರಾಫಿಕ್‌ ಜಾಮ್‌ಗೂ ಕಾರಣವಾಗಿದೆ.

ಭಗವತಿ ನಗರ ರಸ್ತೆ
ಕೊಡಿಯಾಲಬೈಲು ಬಳಿಯ ಭಗವತಿ ನಗರ ರಸ್ತೆ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಇಲ್ಲಿನ ರಸ್ತೆಗೆ ಅರ್ಧ ಡಾಮರು, ಕಾಂಕ್ರೀಟ್‌, ಇಂಟರ್‌ಲಾಕ್‌ ಅಳವಡಿಸಲಾಗಿದೆ. ರಸ್ತೆಯ ಮಧ್ಯಭಾಗ ದಲ್ಲಿ ರಸ್ತೆ ಅವ್ಯವಸ್ಥೆಯಿಂದ ಕೂಡಿನೆ.

ಅಶೋಕನಗರ

ಅಶೋಕನಗರ ರಸ್ತೆ
ಉರ್ವಸ್ಟೋರ್‌ನಿಂದ ಅಶೋಕನಗರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ. ದ್ವಿಚಕ್ರ ವಾಹನಗಳು ಇಲ್ಲಿನ ಹೊಂಡ-ಗುಂಡಿಗೆ ಬಿದ್ದು, ಸ್ಕಿಡ್‌ ಆಗುವ ಆತಂಕವೂ ಈ ರಸ್ತೆಯಲ್ಲಿದೆ. ಉರ್ವಸ್ಟೋರ್‌ನಿಂದ ಅಶೋಕನಗರ, ಉರ್ವ ಮಾರುಕಟ್ಟೆ ಸಹಿತ ಕೆಲವೊಂದು ಪ್ರದೇಶಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಇದೇ ಮಾರ್ಗದಲ್ಲಿ ಹತ್ತಾರು ಮನೆಗಳಿದ್ದು, ವಸತಿ ಪ್ರದೇಶದಿಂದ ಕೂಡಿದೆ. ಇದೇ ಕಾರಣಕ್ಕೆ ನೂರಾರು ವಾಹನಗಳು ದಿನಂಪ್ರತಿ ಅತ್ತಿಂದಿತ್ತ ಸಂಚರಿಸುತ್ತದೆ. ಹೊಂಡ -ಗುಂಡಿಯಿಂದ ಕೂಡಿದ ಈ ರಸ್ತೆಯಲ್ಲಿ ಸದ್ಯ ಸಂಚಾರ ಸಂಕಷ್ಟವೆನಿಸಿದೆ. ಕೆಲವು ತಿಂಗಳ ಹಿಂದೆ ಈ ರಸ್ತೆಗೆ ಡಾಮರು ಹಾಕಲಾಗಿತ್ತು. ಮತ್ತೆ ಗುಂಡಿ ಬಿದ್ದಿದ್ದು, ಬಳಿಕ ತಾತ್ಕಾಲಿಕ ತೇಪೆ ಹಾಕಲಾಗಿತ್ತು. ಆದರೂ ಕೆಲವು ತಿಂಗಳಿನಿಂದ ಸುರಿದ ಮಳೆಗೆ ಮತ್ತೆ ಗುಂಡಿಮಯವಾಗಿದೆ. ಎದುರಿನಿಂದ ಬೇರೆ ವಾಹನ ಬರುತ್ತಿದ್ದರೆ ಅದನ್ನು ತಪ್ಪಿಸುವುದೇ ವಾಹನ ಸವಾರರಿಗೆ ಸವಾಲಾಗಿದೆ. ಮಳೆ ಬಂದರಂತೂ ಇಲ್ಲಿನ ಗುಂಡಿಯ ತುಂಬಾ ನೀರು ತುಂಬಿ, ಗುಂಡಿ ಯಾವುದು? ರಸ್ತೆ ಯಾವುದು? ಎಂದು ತಿಳಿಯುವುದು ಕಷ್ಟ.

Advertisement

ಉರ್ವ ಮಾರುಕಟ್ಟೆ

ಕಳಪೆ ಕಾಮಗಾರಿಯಿಂದ ರಸ್ತೆ ಪೂರ್ತಿ ಗುಂಡಿ
ಕೊಟ್ಟಾರ ಸಮೀಪದ ದಡ್ಡಲಕಾಡು ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಐದಾರು ವರ್ಷಳಿಂದ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಕಳಪೆ ಕಾಮಗಾರಿಯಿಂದ ರಸ್ತೆ ಪೂರ್ತಿ ಗುಂಡಿಯಿಂದ ಕೂಡಿದೆ. ನಗರದ ಕಾಪಿಕಾಡ್‌ನಿಂದ ದಡ್ಡಲಕಾಡು ಮುಖೇನ ಕೊಟ್ಟಾರ ಸಂಪರ್ಕ ರಸ್ತೆ ಪೂರ್ತಿ ಹೊಂಡಗಳೇ ಇವೆ. ಈ ರಸ್ತೆಯನ್ನು ಅನೇಕ ಬಾರಿ ಡಾಮರು ಕಾಮಗಾರಿ ನಡೆಸಿದರೂ ಇಲ್ಲಿನ ಹೊಂಡಗುಂಡಿಗಳಿಗೆ ಮುಕ್ತಿ ಎಂಬುವುದು ಸಿಗುತ್ತಿಲ್ಲ. ಈ ಹಿಂದೆ ಡಾಮರು ಹಾಕಿದ ಕೆಲವೇ ತಿಂಗಳಲ್ಲಿ ರಸ್ತೆ ಪೂರ್ತಿ ಗುಂಡಿ ಬಿದ್ದಿರುವ ಉದಾಹರಣೆಗಳಿವೆ. ಇದೀಗ ಮಳೆಗಾಲ ಆರಂಭದಲ್ಲಿ ರಸ್ತೆಯ ಮತ್ತಷ್ಟು ಕಡೆಗಳಲ್ಲಿ ಗುಂಡಿಗಳಾಗಿದ್ದು, ಇದರಿಂದಾಗಿ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next