Advertisement
ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ರಸ್ತೆ ವಿಸ್ತರಣೆ, ಒಳಚರಂಡಿ ಕೊಳವೆ ಅಳವಡಿಕೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಪಾಲಿಕೆ ವತಿಯಿಂದ ಮಾಡಲಾಗುತ್ತಿದೆ. ಈ ಕಾಮಗಾರಿಗಳಿಗೆ ಆವಶ್ಯವಿರುವ ಜಾಗವನ್ನು ಪಾಲಿಕೆಗೆ ಬಿಟ್ಟುಕೊಡುವ ಖಾಸಗಿ ಭೂ ಮಾಲಕರಿಗೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಡಿಆರ್‌ಸಿ/ಟಿಡಿಆರ್) ನೀಡಬೇಕಾಗುತ್ತದೆ. ಹೀಗೆ ಆವಶ್ಯ ಜಾಗಗಳಲ್ಲಿ ಬಹಳಷ್ಟು ಜಾಗಗಳಿಗೆ ಭೂ ಪರಿವರ್ತನೆ ಹಾಗೂ ವಿನ್ಯಾಸ ನಕ್ಷೆ ಅನುಮೋದನೆ ಪಡೆದಿರುವುದಿಲ್ಲ. ಆದರೆ ವಿನ್ಯಾಸ ನಕ್ಷೆ ಪಡೆಯುವ ಖಾಸಗಿ ಜಾಗಗಳಿಗೆ ಮಾತ್ರ ಪಾಲಿಕೆಯಲ್ಲಿ ಇ-ಖಾತಾ ನೋಂದಣಿಗೆ ಅವಕಾಶ ಇದೆ.
ಪ್ರಸ್ತುತ ಜಾಗ ಬಿಡುವ ಖಾಸಗಿ ಭೂ ಮಾಲಕರಿಗೆ ಡಿಆರ್‌ಸಿ/ಟಿಡಿಆರ್ ನೀಡುವ ಮೊದಲು ಖಾಸಗಿ ಜಾಗವನ್ನು ಪಾಲಿಕೆ ಹೆಸರಿಗೆ ನೋಂದಣಿ ಮಾಡಬೇಕು. ಹೀಗೆ ನೋಂದಣಿ ಮಾಡುವಾಗ ಇ ಖಾತಾ ಕಡ್ಡಾಯ. ಇ ಖಾತಾ ಇಲ್ಲದಿದ್ದರೆ ಪಾಲಿಕೆ ಹೆಸರಿಗೆ ವರ್ಗಾಯಿಸಲು ಸಾಧ್ಯವಿಲ್ಲ. ಹೀಗಾಗಿ ಪಾಲಿಕೆಗೆ ಖಾಸಗಿ ಭೂಮಿ ಕೆಲವೆಡೆ ಸಿಗುತ್ತಿಲ್ಲ ಎಂಬುದು ಸದ್ಯ ಎದುರಾದ ದೂರು. ಅಭಿವೃದ್ಧಿ ಕಾಮಗಾರಿಗೆ ತೊಡಕು!
ಇ ಖಾತಾ ಪಡೆಯಲು ಭೂ ಪರಿವರ್ತನೆ, ವಿನ್ಯಾಸ ನಕ್ಷೆ ಅನುಮೋದನೆ ಕಡ್ಡಾಯ. ಆದರೆ, ಯಾವುದೇ ಅಭಿವೃದ್ಧಿ ಕಾಮಗಾರಿ ಸಂದರ್ಭ ಭೂಮಾಲಕರ ಮನವೊಲಿಸಿ ಅವರಿಗೆ ರಸ್ತೆ, ಚರಂಡಿ ಕಾಮಗಾರಿಯ ಬಗ್ಗೆ ಮನವರಿಕೆ ಮಾಡಿದ ಅನಂತರವಷ್ಟೇ ಜಾಗವನ್ನು ಪಾಲಿಕೆಯಿಂದ ಪಡೆಯಲಾಗುತ್ತದೆ. ಆದರೆ ಈಗ ರಸ್ತೆ ವಿಸ್ತರಣೆಯ ಆಸ್ತಿಗಳಿಗೆ ಸಹ ಭೂ ಪರಿವರ್ತನೆ, ವಿನ್ಯಾಸ ಅನುಮೋದನೆ ಕಡ್ಡಾಯ ಮಾಡಿರುವುದರಿಂದ ಈ ಎಲ್ಲ ಪ್ರಕ್ರಿಯೆಗಳನ್ನು ಅನುಸರಿಸಿ ಇ ಖಾತಾ ಪಡೆಯಲು ಖಾಸಗಿ ಜಾಗದ ಮಾಲಕರು ಒಪ್ಪುತ್ತಿಲ್ಲ. ಹೀಗಾಗಿ ವಿವಿಧ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಳ್ಳುವ ಅಪಾಯವಿದೆ ಎಂಬುದು ಕೆಲವರ ಅಭಿಪ್ರಾಯ.
Related Articles
ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಜಾಗಬಿಟ್ಟು ಡಿಆರ್‌ಸಿ ಪ್ರಮಾಣಪತ್ರವನ್ನು ಪಡೆದಿರುವ ಹಾಗೂ ಪಡೆಯಲಾಗುವ ಪ್ರಕರಣದಲ್ಲಿ ಡಿಆರ್‌ಸಿ ಪ್ರಮಾಣ ಪತ್ರವನ್ನು ಇನ್ನೊಬ್ಬರಿಗೆ ಮಾರಾಟ ಮಾಡಲು ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾವಣಿ ಮಾಡಬೇಕು. ಹೀಗೆ ನೋಂದಾವಣೆ ಮಾಡುವಾಗ ಇ ಖಾತಾ ನೀಡುವುದು ಕಡ್ಡಾಯ. ನಿಯಮಾವಳಿ ಪ್ರಕಾರ ಡಿಆರ್‌ಸಿ ಕೊಂಡುಕೊಳ್ಳುವವರ ಹೆಸರಿಗೆ ಇ ಖಾತಾ ಮಾಡಲು ಸಾಧ್ಯವಿಲ್ಲ. ಹಾಗಾಗಿ ಡಿಆರ್‌ಸಿ ಪ್ರಮಾಣ ಪತ್ರವನ್ನು ಮಾರಾಟ ಮಾಡುವ ಸಂದರ್ಭದಲ್ಲಿಯೂ ಇ ಖಾತಾದಿಂದ ವಿನಾಯಿತಿ ನೀಡುವುದು ಅಗತ್ಯ ಎಂಬುದು ಸದ್ಯದ ಚರ್ಚಿತ ವಿಷಯ.
Advertisement
ಸರಕಾರದ ಗಮನಸೆಳೆಯಲಾಗಿದೆವಿವಿಧ ಅಭಿವೃದ್ದಿ ಕಾಮಗಾರಿಗೆ ಜಾಗ ಬಿಡುವ ಖಾಸಗಿ ಭೂ ಮಾಲಕರಿಗೆ ಡಿಆರ್‌ಸಿ/ಟಿಡಿಆರ್ ನೀಡುವ ಸಲುವಾಗಿ ಪಾಲಿಕೆಗೆ ಬಿಟ್ಟುಕೊಡುವಂತಹ ಜಾಗಕ್ಕೆ ಮಾತ್ರ ಅನ್ವಯಿಸುವಂತೆ ಪಾಲಿಕೆ ಸರ್ವೆಯರ್‌ರಿಂದ ನಕ್ಷೆ ಪಡೆದು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಈ ಜಮೀನನ್ನು ಪಾಲಿಕೆಯ ಹೆಸರಿಗೆ ನೋಂದಾವಣಿ ಮಾಡಿಕೊಡಲು ಮಾತ್ರ ಅನ್ವಯಿಸಿ ಭೂ ಪರಿವರ್ತನೆ, ವಿನ್ಯಾಸ ನಕ್ಷೆ ಅನುಮೋದನೆಯಿಂದ ವಿನಾಯಿತಿ ನೀಡಿ ಇ ಖಾತಾ ಮಾಡಲು ಅವಕಾಶ ನೀಡುವಂತೆ ಸರಕಾರವನ್ನು ಪಾಲಿಕೆ ಕೋರಿದೆ.
-ಪ್ರೇಮಾನಂದ ಶೆಟ್ಟಿ, ಮುಖ್ಯಸಚೇತಕರು, ಮಂಗಳೂರು ಪಾಲಿಕೆ -ದಿನೇಶ್ ಇರಾ