Advertisement

Mangaluru: 643 ಕಿ.ಮೀ.ರೇಸನ್ನು 38.27 ಗಂಟೆಯಲ್ಲಿ ಮುಗಿಸಿದ ಸೈಕ್ಲಿಸ್ಟ್‌ !

02:52 PM Dec 06, 2024 | Team Udayavani |

ಮಹಾನಗರ: ಭಾರತದ ಕ್ಲಿಷ್ಟಕರ ಅಲ್ಟ್ರಾ ಸೈಕ್ಲಿಂಗ್‌ ರೇಸ್‌ ಆಗಿರುವ ಡೆಕ್ಕನ್‌ ಕ್ಲಿಫ್‌ಹ್ಯಾಂಗರ್‌ನಲ್ಲಿ ಅವರು 643 ಕಿ.ಮೀ. (400 ಮೈಲು) ದೂರವನ್ನು 38 ಗಂಟೆ 27 ನಿಮಿಷದಲ್ಲಿ ಪೂರ್ಣಗೊಳಿಸಿ ಗಮನ ಸೆಳೆದಿದ್ದಾರೆ.

Advertisement

ಇನ್‌ಸ್ಪೈರ್‌ ಇಂಡಿಯಾ ಸಂಸ್ಥೆ ನಡೆಸುವ ರೇಸ್‌ನ 11ನೇ ಆವೃತ್ತಿಯಲ್ಲಿ ದೇಶದ ವಿವಿಧೆಡೆಯಿಂದ ಸೈಕ್ಲಿಸ್ಟ್‌ಗಳು ಪಾಲ್ಗೊಂಡಿದ್ದಾರೆ. ಇದರಲ್ಲಿ 17 ಮಂದಿ ಏಕಾಂಗಿ(ಸ್ವಯಂ ಬೆಂಬಲಿತ), ನಾಲ್ವರು ಮಹಿಳಾ ಸವಾರೆಯರು ಸೇರಿದಂತೆ 15 ಮಂದಿ ಏಕಾಂಗಿ ರೇಸ್‌(ಇತರರ ಬೆಂಬಲದೊಂದಿಗೆ), ನಾಲ್ಕು ತಂಡಗಳು ರಿಲೇ ವಿಭಾಗದಲ್ಲಿ ಪಾಲ್ಗೊಂಡಿದ್ದವು.

ಪುಣೆಯಿಂದ ಗೋವಾಕ್ಕೆ 643 ಕಿ.ಮೀ(400 ಮೈಲಿ) ದೂರ ಕ್ರಮಿಸುವುದು ಈ ಕಠಿನ ರೇಸ್‌ನ ದೊಡ್ಡ ಸವಾಲು. ಹಾರ್ದಿಕ್‌ ರೈ ಅವರು 38 ಗಂಟೆ 27 ನಿಮಿಷದಲ್ಲಿ ಈ ದೂರವನ್ನು ಕ್ರಮಿಸಿದ್ದಾರೆ. ಏಕಾಂಗಿಯಾಗಿ ಸಂಚರಿಸುವಾಗ ಯಾವುದೇ ಬೆಂಬಲಿಗರು ಇರುವುದಿಲ್ಲ. ಸೈಕಲ್‌ ಸಮಸ್ಯೆಯಾದರೆ, ಆಹಾರ ಬೇಕಾದರೆ ಯಾರೂ ಬೆಂಬಲಕ್ಕೆ ಸಿಗುವುದಿಲ್ಲ.

‘ನನಗೆ ಇದು ಮೊದಲ ಬಾರಿಯ ಅನುಭವ, ಆದರೆ ಉಳಿದವರು ಹೆಚ್ಚಿನವರೂ 2, 3 ಬಾರಿ ಇದೇ ರೇಸ್‌ನಲ್ಲಿ ಭಾಗವಹಿಸಿದ ಅನುಭವಿಗಳು, ಹಾಗಾಗಿ ಅವರಿಗೆ ರೇಸ್‌ ಹಾದು ಹೋಗುವ ಹಾದಿಯ ಅರಿವಿತ್ತು, ಆಹಾರ, ವಿಶ್ರಾಂತಿಯ ಸರಿಯಾದ ಯೋಜನೆ ಇತ್ತು, ಅತ್ಯಾಧುನಿಕ ರೇಸ್‌ ಸೈಕಲ್‌, ಕಾಡಿನಲ್ಲೂ ಸಮರ್ಪಕವಾಗಿ ರೂಟ್‌ ತೋರಿಸುವ ಜಿಪಿಎಸ್‌ ಕಂಪ್ಯೂಟರ್‌ ಇತ್ತು, ನನ್ನಲ್ಲಿದ್ದು ತೀರಾ ಪ್ರೊಫೆಷನಲ್‌ ಸೈಕಲ್‌ ಅಲ್ಲ, ಹಾದಿಯ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ, ಆದರೂ 39 ಗಂಟೆಯಲ್ಲಿ ಪೂರ್ಣಗೊಳಿಸಿದೆ’ ಎಂದು ಹಾರ್ದಿಕ್‌ ಉದಯವಾಣಿಗೆ ತಿಳಿಸಿದರು.

37 ಗಂಟೆಯಲ್ಲಿ ಮುಗಿಸಿದ್ದರೆ…
ಡೆಕ್ಕನ್‌ ಕ್ಲಿಫ್‌ ಹ್ಯಾಂಗರ್‌ನಲ್ಲಿ ಏಕಾಂಗಿ ಸವಾರಿಯನ್ನು 37 ಗಂಟೆಯೊಳಗೆ ಪೂರ್ಣಗೊಳಿಸಿದರೆ ವಿಶ್ವದ ಕಠಿನ ಸೈಕ್ಲಿಂಗ್‌ ರೇಸ್‌ಗಳಲ್ಲೊಂದಾದ ರೇಸ್‌ ಅಕ್ರಾಸ್‌ ಅಮೆರಿಕಾ(ರ್ಯಾಮ್‌)ನಲ್ಲಿ ಪಾಲ್ಗೊಳ್ಳುವುದಕ್ಕೆ ಅರ್ಹತೆ ದೊರಕುತ್ತದೆ. ಮುಂದಿನ ಬಾರಿ ಇನ್ನಷ್ಟು ಸಿದ್ಧತೆ ನಡೆಸಿ ರ್ಯಾಮ್‌ ಅರ್ಹತೆ ಪಡೆಯುವುದೇ ಗುರಿಯಾಗಿದೆ ಎಂದು 21ರ ಹರೆಯದ ಹಾರ್ದಿಕ್‌ ತಿಳಿಸಿದರು.

Advertisement

ಕೆಲ ತಿಂಗಳ ಹಿಂದೆಯಷ್ಟೇ ಎಂಜಿನಿಯರಿಂಗ್‌ ಪದವಿ ಗಳಿಸಿರುವ ಹಾರ್ದಿಕ್‌ ಮಂಗಳೂರಿನ ಜೆಪ್ಪಿನಮೊಗರು ನಿವಾಸಿ. ಮೈಸೂರು ರೋಡ್‌ ರೇಸ್‌ನಲ್ಲಿ ಮೂರನೇ ಸ್ಥಾನ, ವಿಇಆರ್‌ಸಿ ಟಿಟಿ ರೇಸ್‌ನಲ್ಲಿ 2ನೇಸ್ಥಾನ ಪಡೆದಿರುವ ಇವರು ವಯನಾಡ್‌, ಬೆಂಗಳೂರು ಮುಂತಾದೆಡೆ ನಡೆದ ಹಲವು ಸೈಕ್ಲಿಂಗ್‌ ರೇಸ್‌ಗಳಲ್ಲಿ ಪಾಲ್ಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next