Advertisement

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

04:50 AM Dec 19, 2024 | Team Udayavani |

ಮಂಗಳೂರು: ಆನ್‌ಲೈನ್‌ ಗೇಮ್‌ನಲ್ಲಿ ತೊಡಗಿಕೊಂಡಿದ್ದ ಯುವಕನೋರ್ವ ಸೈಬರ್‌ ವಂಚಕರ ಜಾಲದ ಸಂಪರ್ಕಕ್ಕೆ ಸಿಲುಕಿ ತಾನು ಕೂಡ ಸೈಬರ್‌ ವಂಚಕನಾದ ವೃತ್ತಾಂತವಿದು!

Advertisement

ಮಂಗಳೂರಿನ ವ್ಯಕ್ತಿಯೋರ್ವರಿಗೆ ಎಪಿಕೆ ಫೈಲ್‌ನ ಲಿಂಕ್‌ ಕಳುಹಿಸಿ ಅವರ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮಾಹಿತಿ ಕದ್ದು ಅದರ ಮೂಲಕ ಐಷಾರಾಮಿ ಸೊತ್ತುಗಳನ್ನು ಖರೀದಿಸಿ ವಂಚಿಸಿದ ಪ್ರಕರಣವೊಂದರಲ್ಲಿ ಮಂಗಳೂರು ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಹೊಸದಿಲ್ಲಿಯ 25 ವರ್ಷ ವಯಸ್ಸಿನ ಗೌರವ್‌ ಮುಕ್ವಾನ್‌ ಆನ್‌ಲೈನ್‌ ಗೇಮ್‌ ಆಡುತ್ತಿದ್ದಾಗಲೇ ಸೈಬರ್‌ ವಂಚಕರ ಜಾಲಕ್ಕೆ ಸಿಲುಕಿ ತಾನು ಕೂಡ ವಂಚನೆಯ ಹಾದಿ ತುಳಿದಿದ್ದ ಎಂಬುದು ಗೊತ್ತಾಗಿದೆ.

ಈತ ಪಿಯುಸಿ ಫೇಲ್‌ ಆಗಿದ್ದ. ಈತನ ತಂದೆ ರಿಯಲ್‌ ಎಸ್ಟೇಟ್‌ ಏಜೆಂಟ್‌ ಆಗಿದ್ದರು. ಮೂರು ವರ್ಷಗಳ ಹಿಂದೆ ಪಬ್‌ಜಿ ಮಾದರಿಯ “ಫ್ರೀ ಫೈರ್‌’ ಎಂಬ ಆನ್‌ಲೈನ್‌ ಗೇಮ್‌ ಆಡುತ್ತಿದ್ದಾಗ ಅದರಲ್ಲಿ ಓರ್ವ ಅಪರಿಚಿತ ಯುವಕನ ಪರಿಚಯವಾಗಿತ್ತು. ಅದೇ ಪರಿಚಯ ಮುಂದೆ ಗೌರವ್‌ನನ್ನು ವಂಚಕರ ಜಾಲದೊಳಗೆ ಸೇರಿಸಿಕೊಂಡಿತ್ತು.

ಹಣದಾಸೆ, ಶ್ರೀಮಂತಿಕೆಯ ಕನಸು
ಆನ್‌ಲೈನ್‌ ಗೇಮ್‌ನಲ್ಲಿ ಸಂಪರ್ಕಕ್ಕೆ ಬಂದಿದ್ದ ಅಪರಿಚಿತ ಯುವಕ (ಸೈಬರ್‌ ವಂಚಕ) ಛತ್ತೀಸ್‌ಗಡದವ. ಆತ ಸೈಬರ್‌ ವಂಚನೆಯ ಜಾಲವೊಂದನ್ನು ಸೃಷ್ಟಿಸಿದ್ದ. ಅದಕ್ಕಾಗಿ ಆನ್‌ಲೈನ್‌ ಗೇಮ್‌ ಪ್ರವೇಶಿಸಿ ಅದರಲ್ಲಿ ಸೇರ್ಪಡೆಯಾಗುವ ಯುವಕರನ್ನು ಸೆಳೆದುಕೊಳ್ಳುತ್ತಿದ್ದ. ಅದೇ ವಂಚಕ ಗೌರವ್‌ನಿಗೂ ಬಲೆ ಬೀಸಿದ್ದ. ಹಣದ ಆಸೆ ತೋರಿಸಿದ್ದ. ಬೇಗನೇ ಶ್ರೀಮಂತನಾಗಬಹುದು ಎಂಬಿತ್ಯಾದಿ ಆಸೆ ಹುಟ್ಟಿಸಿದ್ದ. ಮಂದೆ ಗೌರವ್‌ ಕೂಡ ಸೈಬರ್‌ ವಂಚಕರ ಜಾಲಕ್ಕೆ ಸೇರಿಕೊಂಡಿದ್ದ.

ಡೆಲಿವರಿ ಪಡೆದುಕೊಳ್ಳುವ ಕೆಲಸ!
ಗೌರವ್‌ನಿಗೆ ಆತನ “ಬಾಸ್‌’ (ಸೈಬರ್‌ ವಂಚಕ) ನಿಯೋಜಿಸಿದ ಕೆಲಸವೆಂದರೆ ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್‌ ಗಳಿಂದ ದುಬಾರಿ ಸಾಮಗ್ರಿಗಳನ್ನು ಪಡೆದುಕೊಂಡು ಅದನ್ನು ಆತ ಹೇಳಿದ ವಿಳಾಸಕ್ಕೆ ಕಳುಹಿಸಿಕೊಡುವುದಾಗಿತ್ತು. ವಂಚಕ ತನ್ನ ಜಾಲದಲ್ಲಿರುವ ಇತರರ ಸಹಾಯದಿಂದ ಡೆಬಿಟ್‌ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ನ ಮಾಹಿತಿ ಪಡೆದುಕೊಂಡು ಅದರಿಂದ ಐಷಾರಾಮಿ ವಸ್ತುಗಳನ್ನು ಕಾದಿರಿಸುತ್ತಿದ್ದ.

Advertisement

ಆ ಸೊತ್ತುಗಳ ಡೆಲಿವರಿಗೆ ಗೌರವ್‌ನ ವಿಳಾಸ ನೀಡಲಾಗುತ್ತಿತ್ತು. ಗೌರವ್‌ ತನ್ನ ವಿಳಾಸಕ್ಕೆ ಬರುತ್ತಿದ್ದ ಸೊತ್ತುಗಳನ್ನು ವಂಚಕರು ನೀಡಿದ ವಿಳಾಸಕ್ಕೆ ಕಳುಹಿಸಿಕೊಡುತ್ತಿದ್ದ. ಇದರಲ್ಲಿ ಐಫೋನ್‌, ಏರ್‌ಪಾಡ್‌, ಗಿಫ್ಟ್ ವೋಚರ್‌ಗಳು, ಇತರ ದುಬಾರಿ ಸೊತ್ತುಗಳು ಕೂಡ ಇರುತ್ತಿದ್ದವು.

ಮೊದಲು ಅಮಾಯಕ, ಅನಂತರ ವಂಚಕ
ಗೌರವ್‌ ಆರಂಭದಲ್ಲಿ ಆನ್‌ಲೈನ್‌ ಗೇಮ್‌ ಆಡುತ್ತಿದ್ದಾಗ ಅಮಾಯಕ ನಾಗಿದ್ದು ಸಂಪರ್ಕಕ್ಕೆ ಬಂದ ಅಪರಿಚಿತ ವ್ಯಕ್ತಿ ಹೇಳಿದಂತೆ ಮಾಡಿದ್ದ. ಅನಂತರ ಹಣದ ರುಚಿ ಸಿಕ್ಕಿದ ಬಳಿಕ ತನ್ನ ಕೃತ್ಯವನ್ನು ಚಾಕಚಕ್ಯತೆಯಿಂದ ಮಾಡತೊಡಗಿದ. ಮುಂದೆ ಮತ್ತಷ್ಟು ವಂಚನಾ ಕೃತ್ಯಗಳನ್ನು ನಡೆಸಿ ಶ್ರೀಮಂತನಾಗುವ ಹುಮ್ಮಸ್ಸಿನಲ್ಲಿದ್ದ. ಕೊನೆಗೆ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಈ ವಂಚನಾ ಪ್ರಕರಣದ ಜಾಲದ ಆಳಕ್ಕೆ ಇಳಿದಿರುವ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಲು ಬಿಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next