ಮಂಗಳೂರು:ಇಡೀ ರಾಜ್ಯದ ಗಮನಸೆಳೆದಿದ್ದ “ಬೈಕ್ ರ್ಯಾಲಿ’ ಬಳಿಕ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ “ಜನ ಸುರಕ್ಷಾ ಯಾತ್ರೆ’ ಮೂಲಕ ಮಂಗಳವಾರ ಮತ್ತೂಂದು ಬೃಹತ್ ರಾಜಕೀಯ ಸಮಾವೇಶಕ್ಕೆ ಬಿಜೆಪಿ ಸಜ್ಜಾಗಿದೆ.
ಇನ್ನೊಂದೆಡೆ ಕರಾವಳಿಯಲ್ಲಿ ತನ್ನ ಶಕ್ತಿ ಪ್ರದರ್ಶನದ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ಖಾತೆ ತೆರೆಯುವುದಕ್ಕೆ ಜೆಡಿಎಸ್ ಕೂಡ ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದು, ಮಂಗಳವಾರ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಹಾಗೂ ಸಂವಾದ ಹಮ್ಮಿಕೊಂಡಿದೆ. ಈ ಮೂಲಕ ರಾಜ್ಯದ ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ನ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಕಡಲನಗರಿ ವೇದಿಕೆಯಾಗುತ್ತಿದೆ.
ಬಿಜೆಪಿಯ ಉತ್ತರ ಕನ್ನಡ ಹಾಗೂ ಕೊಡಗಿನಿಂದ ಆಯೋಜಿಸಿರುವ “ಜನ ಸುರಕ್ಷಾ ಯಾತ್ರೆ’ಯ ಸಮಾರೋಪ ಸಂಜೆ 5.30ಕ್ಕೆ ನೆಹರೂ ಮೈದಾನದಲ್ಲಿ ಮಂಗಳವಾರ ನಡೆಯಲಿದ್ದು, ಯೋಗಿ ಆದಿತ್ಯನಾಥ್ ಭಾಗವಹಿಸುತ್ತಿರುವುದು ವಿಶೇಷ. ಇದೇದಿನ ಜೆಡಿಎಸ್ ಕೂಡ ನಗರದ ಹೊಟೇಲ್ “ತಾಜ್ ಗೇಟ್‌ವೇ’ಯಲ್ಲಿ ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸಂವಾದ ಹಾಗೂ ಪುರಭವನದಲ್ಲಿ ಪಕ್ಷದ ಸಮಾವೇಶ ಮತ್ತು ಇತರ ಪಕ್ಷಗಳಿಂದ ನಾಯಕರು ಮತ್ತು ಕಾರ್ಯಕರ್ತರ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪಾಲ್ಗೊಳ್ಳುತ್ತಿದ್ದಾರೆ. ಒಂದೇ ದಿನ 2 ಪಕ್ಷಗಳ ಪ್ರಮುಖ ನಾಯಕರು ಮಂಗಳೂರಿಗೆ ಆಗಮಿಸುತ್ತಿರುವುದು ಮತ್ತೂಂದು ವಿಶೇಷವಾಗಿದೆ.
ಬಿಜೆಪಿ ಸ್ಟಾರ್ ಪ್ರಚಾರಕ ಯೋಗಿ ಆದಿತ್ಯನಾಥ್ ಹೊರತಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರದ ಸಚಿವರು, ಬಿಜೆಪಿ ಸಂಸದರು ಆಗಮಿಸುತ್ತಿದ್ದಾರೆ. ಬಿಜೆಪಿಯಿಂದ ನಗರದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದ ವರೆಗೆ ಬೃಹತ್ ಪಾದಯಾತ್ರೆ ನಡೆಯಲಿದೆ. ಆ ಬಳಿಕ ಅಲ್ಲಿ ಬೃಹತ್ ಸಮಾವೇಶ ನಡೆಯಲಿದೆ.
ಮಂಗಳೂರಿನಲ್ಲಿ ಜೆಡಿಎಸ್‌ನ ಸೌಹಾರ್ದ ಸಮಾವೇಶಕ್ಕೆ ಸುಮಾರು ಒಂದು ತಿಂಗಳ ಹಿಂದೆಯೇ ದಿನಾಂಕ ನಿಗದಿಯಾಗಿ ಕಾರಣಾಂತರಗಳಿಂದ ರದ್ದುಗೊಂಡಿತ್ತು. ಮಂಗಳವಾರ ಬೆಳಗ್ಗೆ 9.30ಕ್ಕೆ ತಾಜ್ ಹೊಟೇಲ್‌ನಲ್ಲಿ ಕುಮಾರಸ್ವಾಮಿ ಅವರೊಂದಿಗೆ ಸಂವಾದ ನಡೆಯಲಿದೆ. ಪುರಭವನದಲ್ಲಿ ಸಂಜೆ 4 ಗಂಟೆಗೆ ನಡೆಯುವ ಪಕ್ಷದ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ಕೆ. ಆಶ್ರಫ್ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಹಲವು ಮಂದಿ ಜೆಡಿಎಸ್ ಸೇರ್ಪಡೆಯಾಗುತ್ತಾರೆ ಎಂದು ಪಕ್ಷದ ಜಿಲ್ಲಾ ನಾಯಕರು ಹೇಳಿದ್ದಾರೆ.