Advertisement

ಮಂಗಳೂರು-ಮುಂಬಯಿ ಕೆಎಸ್‌ಆರ್‌ಟಿಸಿ ಬಸ್‌ ಸ್ಥಗಿತ!

11:45 AM Aug 13, 2018 | |

ಮಂಗಳೂರು: ವಾಣಿಜ್ಯ ನಗರಿ ಮುಂಬಯಿಗೆ ಸಂಪರ್ಕ ಕಲ್ಪಿಸುತ್ತಿದ್ದ ಏರ್‌ ಇಂಡಿಯಾ ವಿಮಾನ ಸೇವೆ ಆಗಲೇ ಸ್ಥಗಿತ ಗೊಂಡಿದೆ. ಮಂಗಳೂರು – ಮುಂಬಯಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವೂ ಒಂದು ತಿಂಗಳ ಹಿಂದೆಯೇ ಸ್ಥಗಿತಗೊಂಡು ಪ್ರಯಾ ಣಿಕರಿಗೆ ಗಾಯದ ಮೇಲೆ ಬರೆ ಎಳೆದಿದೆ.

Advertisement

ಮಳೆ ಹಾಗೂ ಆರ್ಥಿಕ ನಷ್ಟದ ನೆಪ ಮುಂದಿಟ್ಟುಕೊಂಡು ಮಂಗಳೂರು- ಮುಂಬಯಿ ಬಸ್‌ ಸ್ಥಗಿತಗೊಳಿಸಿರುವ ಕೆಎಸ್‌ಆರ್‌ಟಿಸಿ, ಸೆ. 1ರಿಂದ ಅದನ್ನು ಪುನಾರಂಭಗೊಳಿಸುವುದಾಗಿ ತಿಳಿಸಿದ್ದರೂ ನೆಚ್ಚಿಕೊಳ್ಳುವಂತಿಲ್ಲ. ಹಬ್ಬದ ಸೀಜನ್‌ ಆರಂಭವಾಗುತ್ತಿದ್ದು, ರೈಲುಗಳಲ್ಲಿ ಮುಂಗಡ ಬುಕ್ಕಿಂಗ್‌ ಕೂಡ ಸಿಗುವುದು ಕಷ್ಟವಾಗಿರುವಾಗ ಪ್ರಯಾಣಕ್ಕೆ ಖಾಸಗಿ ಬಸ್‌ಗಳನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ.

ಮಂಗಳೂರು-ಮುಂಬಯಿ ಮಧ್ಯೆ ಸಾವಿರಾರು ಜನ ಸಂಚರಿಸುತ್ತಾರೆ. ಆದರೆ, ಈ ಮಾರ್ಗವಾಗಿ ಸಾರಿಗೆ ಸಂಸ್ಥೆಯ ಒಂದೇ ಒಂದು ಸುಖಾಸೀನ ಬಸ್‌ ಇಲ್ಲ! ಮುಂಬಯಿ ಮಾತ್ರವಲ್ಲದೆ, ಉತ್ತರ ಕರ್ನಾಟಕ ಭಾಗಕ್ಕೆ ತೆರಳುತ್ತಿದ್ದ ಸುಖಾಸೀನ ಬಸ್‌ಗಳಿಗೂ ಸಂಸ್ಥೆ ಕತ್ತರಿ ಹಾಕಿದೆ.

ವರ್ಷದ ಹಿಂದೆ ಮಂಗಳೂರು-ಮುಂಬಯಿ ಮಧ್ಯೆ ಸಾರಿಗೆ ಸಂಸ್ಥೆಯ ಐದು ವೋಲ್ವೋ ಬಸ್‌ಗಳು ಸಂಚರಿಸುತ್ತಿದ್ದವು. ಒಂದೊಂದಾಗಿ ಕಡಿತಗೊಂಡು ಇತ್ತೀಚೆಗೆ ಎರಡು ಬಸ್‌ಗಳಿಗೆ ಸೀಮಿತವಾಗಿತ್ತು. ಇದರಲ್ಲಿ ಒಂದು “ಪರ್ಮನೆಂಟ್‌’ ಹಾಗೂ ಇನ್ನೊಂದು “ಸೀಸನಲ್‌’ ಎಂದು ಕಾರ್ಯನಿರ್ವಹಣೆಗೆ ನಿರ್ಧರಿಸಲಾಗಿತ್ತು. ಆಮೇಲೆ ಒಂದೇ ಬಸ್‌ ಸಂಚರಿಸಲು ಶುರು ಮಾಡಿತು. ಕೊನೆಗೆ ಬುಕ್ಕಿಂಗ್‌ ಇದ್ದರೆ ಮಾತ್ರ ಸಂಚಾರ ಎನ್ನಲಾಯಿತು. ಈಗ ಬುಕ್ಕಿಂಗ್‌ ಕಡಿಮೆ ಎಂಬ ಕಾರಣವೊಡ್ಡಿ ಸಂಚಾರ ಸ್ಥಗಿತಗೊಳಿಸಿದೆ. ಹೀಗಾಗಿ, ರೈಲು ಹಾಗೂ ಸುಮಾರು 25ರಷ್ಟಿರುವ ಖಾಸಗಿ ಬಸ್‌ಗಳೇ ಪ್ರಯಾಣಿಕರಿಗೆ ಆಸರೆ.

ಬೇಡಿಕೆ ಸಮಯದಲ್ಲಿ ಪ್ರಯಾಣದರವನ್ನು ಏಕಾಏಕಿ ಏರಿಸುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣ. ಖಾಸಗಿ ಬಸ್‌ಗಳಲ್ಲಿ 1,300 ರೂ. ಇದ್ದಾಗಲೂ ಕೆಎಸ್‌ಆರ್‌ಟಿಸಿ 1,500ರಿಂದ 2000 ರೂ. ತನಕ ದರ ವಿಧಿಸುತ್ತಿತ್ತು ಎಂಬ ಆರೋಪವಿದೆ. ಸೀಜನ್‌ನಲ್ಲಿ 20ರಿಂದ 25 ಸೀಟ್‌ಗಳ ಬುಕ್ಕಿಂಗ್‌ ಇರುತ್ತಿತ್ತು. ಉಳಿದ ಅವಧಿಯಲ್ಲೂ 10-15 ಜನ ಟಿಕೆಟ್‌ ಕಾದಿರಿಸುತ್ತಿದ್ದರು. ಸಾರಿಗೆ ಸಂಸ್ಥೆ ಲೆಕ್ಕಾಚಾರದ ಪ್ರಕಾರ 350 ಕಿ.ಮೀ.ಗೆ ಕನಿಷ್ಠ 700ರಿಂದ 800 ರೂ. ಟಿಕೆಟ್‌ ಇದೆ. ಮುಂಬೈಗೆ 1,000 ಕಿ.ಮೀ. ಇದ್ದು, ಕನಿಷ್ಠ 2,000 ರೂ. ನಿಗದಿ ಮಾಡಬೇಕು. ಅದಕ್ಕಿಂತ ಕಡಿಮೆ ದರವಿದ್ದರೂ ಜನ ಬರುತ್ತಿಲ್ಲ ಎಂಬುದು ಸಂಸ್ಥೆಯ ವಾದ.
ಈ ಮಧ್ಯೆ, ಸೆ. 1ರಿಂದ ಕೆಎಸ್‌ಆರ್‌ಟಿಸಿವೋಲ್ವೋ ಮುಂಬಯಿ ಸಂಚಾರ ಇದೆ ಎಂದು ಆನ್‌ಲೈನ್‌ನಲ್ಲಿ ತಿಳಿಸಲಾಗಿದೆ. ಬುಕ್ಕಿಂಗ್‌ ಆಗದಿ ದ್ದರೆ ಮತ್ತೆ ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದೂ ಮೂಲಗಳು  ತಿಳಿಸಿವೆ. ಮುಂಬಯಿ ಟಿಕೆಟ್‌ ಆನ್‌ಲೈನ್‌ ಮೂಲಕ ಆಗುತ್ತಿದ್ದದ್ದು ಕಡಿಮೆ. ಏಜೆಂಟರ ಮೂಲಕವೇ ನಡೆಯುತ್ತಿತ್ತು. ಆದರೆ, ಸಂಸ್ಥೆಯ ಕೇಂದ್ರ ಕಚೇರಿಯ ಸೂಚನೆ ಮೇರೆಗೆ ಏಜೆಂಟರಿಂದ ಬುಕ್ಕಿಂಗ್‌ ಕೈಬಿಟ್ಟು, ಆನ್‌ಲೈನ್‌ ಮೂಲಕ ನಡೆಯಲು ಶುರುವಾಯಿತು. ಏಜೆಂಟರು ಖಾಸಗಿ ಬಸ್‌ಗಳಿಗೆ ಆದ್ಯತೆ ನೀಡಿದ್ದರಿಂದ ಪ್ರಯಾಣಿಕರ ಕೊರತೆ ಕಾಡುವಂತಾಯಿತು.

Advertisement

20ಕ್ಕೂ ಅಧಿಕ ಬಸ್‌ ಸೇವೆ ಕಡಿತ!
ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ನಿರ್ವಹಿಸುವ 20ರಷ್ಟು ಬಸ್‌ಗಳು ಮಳೆ ಹಾಗೂ ನಷ್ಟದ ಕಾರಣ ಸಂಚಾರ ನಿಲ್ಲಿಸಿವೆ. ಹುಬ್ಬಳ್ಳಿ-ಬೆಳಗಾವಿ ಮಧ್ಯೆ ನಿತ್ಯ ಸಂಚರಿಸುತ್ತಿದ್ದ ಏಕೈಕ ವೋಲ್ವೋ ಬಸ್‌ ಕೂಡ ರದ್ದು ಗೊಂಡಿದೆ. ಬೆಂಗಳೂರಿಗೂ ಬುಕ್ಕಿಂಗ್‌ ಆಧಾರದಲ್ಲಿ ವೋಲ್ವೋ ಬಸ್‌ಗಳನ್ನು ಓಡಿಸಲಾಗುತ್ತಿದೆ. ಕಲಬುರಗಿ, ಬಳ್ಳಾರಿ ಭಾಗದ ವೋಲ್ವೋ ಸಂಚಾರದಲ್ಲಿ ಕಡಿತ ಮಾಡಲಾಗಿದೆ. ಧಾರವಾಡಕ್ಕೆ ನಾನ್‌ ಎಸಿ ಸ್ಲಿàಪರ್‌ ಒಂದು ಬಸ್‌ ಮಾತ್ರ ಸಂಚರಿಸುತ್ತಿದೆ. ಈ ಬಾಗಗಳಿಗೆ 20ಕ್ಕೂ ಅಧಿಕ ವೇಗದೂತ ಬಸ್‌ಗಳು ಓಡಾಡುತ್ತಿವೆ. ತಡೆಹಿಡಿದ ಬಸ್‌ಗಳ ಸಂಚಾರ ಯಾವಾಗ ಶುರುವಾಗುತ್ತದೆ ಎಂದು ಪ್ರಶ್ನಿಸಿದರೆ, ಉತ್ತರ ಸಿಕ್ಕಿಲ್ಲ. 

ಏರ್‌ ಇಂಡಿಯಾ ಸೇವೆಯೂ ಇಲ್ಲ !
ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಜು. 12ರಿಂದ ಸೆ. 30ರ ವರೆಗೆ 81 ದಿನಗಳ ಮಂಗಳೂರು- ಮುಂಬಯಿ ನಡುವಣ ವಿಮಾನ ಸೇವೆ ರದ್ದುಗೊಳಿಸಿದೆ. ಈ ವಿಮಾನದಲ್ಲಿ ಕಡಿಮೆ ದರದಲ್ಲಿ ಪ್ರಯಾಣ ಸಾಧ್ಯವಿತ್ತು.

*ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next