Advertisement

Mangalore: ಲೋವರ್‌ ಬೆಂದೂರ್‌ವೆಲ್‌-ಕರಾವಳಿ ವೃತ್ತ ರಸ್ತೆ ಅವ್ಯವಸ್ಥೆ

02:57 PM Nov 07, 2024 | Team Udayavani |

ಮಹಾನಗರ: ಮಂಗಳೂರು ನಗರ ಪ್ರವೇಶಿಸುವ ಅತ್ಯಧಿಕ ವಾಹನ ಓಡಾಡುವ ಕರಾವಳಿ ವೃತ್ತದಿಂದ ಲೋವರ್‌ ಬೆಂದೂರ್‌ವೆಲ್‌ ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ರಸ್ತೆ ಹದಗೆಟ್ಟು ಹಲವು ತಿಂಗಳು ಕಳೆದರೂ ದುರಸ್ತಿಗೊಳಿಸುವ ಗೋಜಿಗೆ ಪಾಲಕೆ ಮುಂದಾಗಿಲ್ಲ.

Advertisement

ಹೊಂಡಗುಂಡಿಯ ರಸ್ತೆಯಿಂದಾಗಿ ವಾಹನ ಸವಾರರು ಸಂಚಾರ ನಡೆಸಲು ಕಷ್ಟಪಡುತ್ತಿದ್ದಾರೆ. ಚತುಷ್ಪಥ ರಸ್ತೆಯ ಎರಡೂ ಭಾಗಗಳಲ್ಲಿರುವ ಹೊಂಡಗುಂಡಿಗಳಿಂದಾಗಿ ಹಲವು ಅಪಘಾತಗಳು ಸಂಭವಿಸಿವೆ.

ನಿತ್ಯ ಟ್ರಾಫಿಕ್‌ ಜಾಮ್‌
ಕೆಲವೇ ಮೀಟರ್‌ಗಳಷ್ಟು ರಸ್ತೆಯ ಅವ್ಯವಸ್ಥೆಯಿಂದಾಗಿ ಸವಾರರು ಸಾಕಷ್ಟು ಹೊತ್ತು ಕಾಯಬೇಕಾದ ಅನಿವಾರ್ಯವಿದೆ. ನಿತ್ಯ ಈ ರಸ್ತೆಯಲ್ಲಿ ಟ್ರಾಫಿಕ್‌ ಬಿಸಿ ತಪ್ಪಿದ್ದಲ್ಲ. ರಸ್ತೆಯಲ್ಲಿ ಬೃಹತ್‌ ಹೊಂಡಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

ಕಾಂಕ್ರೀಟ್‌ ಹಲಗೆಗಳಿಂದ ಅಪಾಯ
ಲೋವರ್‌ ಬೆಂದೂರ್‌ವೆಲ್‌ ಜಂಕ್ಷನ್‌ನಲ್ಲಿ ರಸ್ತೆ ಮಧ್ಯೆ ಕಾಂಕ್ರೀಟ್‌ ಹಲಗೆಗಳ ರೀತಿಯ ಅವ್ಯವಸ್ಥೆ ಕೆಲವು ವರ್ಷಗಳಿಂದ ಇದೆ. ಇದು ರಸ್ತೆಯಿಂದ ಒಳಭಾಗಕ್ಕೆ ಕುಸಿದಿದ್ದು, ರಸ್ತೆಯಲ್ಲಿ ಅಂಚು ನಿರ್ಮಾಣವಾಗಿದೆ. ಇದನ್ನು ಸಮತಟ್ಟುಗೊಳಿಸುವಂತೆ ದ್ವಿಚಕ್ರ ವಾಹನ ಸವಾರರು ಸ್ಥಳೀಯ ಪಾಲಿಕೆ ಸದಸ್ಯರಿಗೆ ಮನವಿ ಮಾಡಿದರೂ ಸ್ಪಂದನೆ ಇಲ್ಲ ಎಂದು ವಿಲ್ಫ್ರೆಡ್ ದೂರಿದ್ದಾರೆ.

ಚುನಾವಣೆ ಬಹಿಷ್ಕಾರ!
ಮಂಗಳೂರು ಮಹಾನಗರ ಪಾಲಿಕೆ ಯಾವುದೇ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಹೊಂಡ ಗುಂಡಿಯ ರಸ್ತೆಯಿಂದಾಗುವ ಸಮಸ್ಯೆ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳಿಗೆ ಹಾಗೂ ಪಾಲಿಕೆಯ ಅಧಿಕಾರಿಗಳಿಗೂ ತಿಳಿಸಲಾಗಿದೆ. ಎಲ್ಲ ಮನವಿಗಳು ಮೂಲೆಗುಂಪಾಗಿವೆ. ರಸ್ತೆ ಅಭಿವೃದ್ಧಿಗೊಳಿಸುವ ಕೆಲಸಕ್ಕೆ ಪಾಲಿಕೆ ಮುಂದಾಗುತ್ತಿಲ್ಲ. ಬೇರೆ ಬೇರೆ ಕಾರಣ ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ. ನಾಲ್ಕೈದು ತಿಂಗಳಲ್ಲಿ ಬರುವ ಚುನಾವಣೆಯಲ್ಲಿ ಇವರಿಗೆ ನಾವು ಉತ್ತರ ನೀಡುತ್ತೇವೆ. ಚುನಾವಣೆ ಬಹಿಷ್ಕಾರವೊಂದೇ ಸಮಸ್ಯೆ ಪರಿಹಾರಕ್ಕೆ ದಾರಿ.
– ಪ್ರಕಾಶ್‌, ಸ್ಥಳೀಯ ನಿವಾಸಿ

Advertisement

ದಿನವಿಡೀ ಈ ಪ್ರದೇಶದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ ಎಂದು ಕಾಸರಗೋಡು ನಿವಾಸಿ ಇಬ್ರಾಹಿಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿ
ಕಾಸರಗೋಡು, ಬಿ.ಸಿ. ರೋಡ್‌, ಬೆಳ್ತಂಗಡಿ, ಪುತ್ತೂರು, ಮುಡಿಪು ಸಹಿತ ಹಲವು ಪ್ರದೇಶಗಳಿಗೆ ತೆರಳುವ ನೂರಾರು ಬಸ್‌ಗಳು ಈ ರಸ್ತೆಯನ್ನು ಅವಲಂಬಿಸಿಕೊಂಡಿವೆ. ಇದರ ಹೊರತಾಗಿ ಶಾಲಾ ಬಸ್‌ಗಳು, ನಗರಕ್ಕೆ ಆಗಮಿಸುವ ಖಾಸಗಿ ವಾಹನಗಳು, ಕೆಲವು ಘನವಾಹನಗಳು ಕೂಡ ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಇದು ದ್ವಿಚಕ್ರ ವಾಹನಗಳಿಗೆ ಸಂಕಷ್ಟ ತಂದೊಡ್ಡಿದೆ. ವೇಗವಾಗಿ ಘನವಾಹನಗಳು ಸಂಚರಿಸುವ ವೇಳೆ ದ್ವಿಚಕ್ರ ವಾಹನಸವಾರರು ತೀರ ಅಪಾಯಕ್ಕೆ ಎದುರಾಗುತ್ತಾರೆ. ಹೊಂಡ ಗುಂಡಿ ತಪ್ಪಿಸಲು ಪ್ರಯತ್ನಿಸಿ ಮುನ್ನುಗ್ಗುವ ವೇಳೆ ದ್ವಿಚಕ್ರ ವಾಹನ ಸ್ಕಿಡ್‌ ಆಗಿರುವ ಉದಾಹರಣೆಗಳಿವೆ. ಮಹಿಳಾ ದ್ವಿಚಕ್ರ ವಾಹನ ಸವಾರೆಯರಂತೂ ಬಸ್‌ಗಳು ಹಾಗೂ ಹುಂಡಗುಂಡಿಗಳ ನಡುವೆ ಇಲ್ಲಿ ಸಂಚರಿಸುವಂತಿಲ್ಲ.

ವರ್ಷಂಪ್ರತಿ ಮಳೆಗಾಲದಲ್ಲಿ ಅವ್ಯವಸ್ಥೆ
ಕರಾವಳಿ ವೃತ್ತದಿಂದ ಲೋವರ್‌ ಬೆಂದೂರ್‌ವೆಲ್‌ವರೆಗೆ ಇರುವ ಡಾಮರು ರಸ್ತೆ ಪ್ರತೀ ವರ್ಷ ಮಳೆಗಾಲದಲ್ಲಿ ತನ್ನ ನಿಜ ಬಣ್ಣ ಬಯಲುಗೊಳಿಸುತ್ತದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದೇ ಹರಸಾಹಸ. ಈ ರಸ್ತೆಯ ಕೆಲವೇ ಮೀ. ವ್ಯಾಪ್ತಿಗೆ ಕಾಂಕ್ರೀಟ್‌ ಅಳವಡಿಸಬೇಕು. ಆ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next