ಮಹಾನಗರ: ಕೆಲವು ದಿನಗಳ ಹಿಂದೆ ಮಂಗಳೂರು ನಗರದಲ್ಲಿ ಬಿರುಸಿನ ಮಳೆಯಾಗಿ ಅವಾಂತರ ಸೃಷ್ಟಿಯಾಗಿತ್ತು. ಹೆಚ್ಚಿನ ಕಡೆಗಳಲ್ಲಿ ರಾಜಕಾಲುವೆ ಅವ್ಯವಸ್ಥೆಯಿಂದಾಗಿ ಈ ಸಮಸ್ಯೆ ಉದ್ಭವಿಸಿದ್ದು, ಇದೀಗ ಆದ್ಯತೆ ಮೇರೆಗೆ ನಗರದ ಕೆಲವು ರಾಜಕಾಲುವೆಗಳಲ್ಲಿ ಮತ್ತೆ ಹೂಳೆತ್ತಲು ಪಾಲಿಕೆ ಮುಂದಾಗಿದೆ.
ಕೆಲವು ದಿನಗಳ ಹಿಂದೆ ನಗರದಲ್ಲಿ ಸುರಿದ ಬಿರುಸಿನ ಮಳೆಗೆ ಪಾಂಡೇಶ್ವರ, ಸುಭಾಷ್ ನಗರ, ಶಿವನಗರ, ಪಡೀಲ್ ಸಹಿತ ಸುತ್ತಲಿನ ಪರಿಸರದಲ್ಲಿ ಅವಾಂತರ ಸೃಷ್ಟಿಯಾಗಿತ್ತು.
ರಾಜಕಾಲುವೆಯಲ್ಲಿ ಹೂಳು, ಪ್ಲಾಸ್ಟಿಕ್, ತ್ಯಾಜ್ಯ ತುಂಬಿ ನೀರು ಸರಾಗವಾಗಿ ಹರಿಯದೆ ಸುತ್ತಮುತ್ತಲು ನೆರೆಗೆ ಕಾರಣವಾಗಿತ್ತು. ಇದೀಗ ಮುಂಜಾಗ್ರತೆ ದೃಷ್ಟಿಯಿಂದ ಆ ಭಾಗದ ರಾಜಕಾಲುವೆಗಳ ಹೂಳೆತ್ತಲು ಪಾಲಿಕೆ ತಯಾರಿ ನಡೆಸಿದೆ. ಇದೀಗ ಪಡೀಲ್ ಪರಿಸರದ ರಾಜಕಾಲುವೆಯಲ್ಲಿ ಹೂಳೆತ್ತುವ ಕಾಮಗಾರಿ ಆರಂಭಗೊಂಡಿದೆ.
ಪಡೀಲ್ ಪರಿಸರದ ಎರಡು ಭಾಗದಲ್ಲಿ ರಾಜಕಾಲುವೆ ಹರಿಯುತ್ತಿದ್ದು, ಮಳೆಗಾಲಕ್ಕೂ ಮುನ್ನ ಮತ್ತು ಒಂದು ಮಳೆಯ ಬಳಿಕ ರಾಜಕಾಲುವೆ ಹೂಳೆತ್ತಲಾಗಿತ್ತು. ಆದರೆ ಜು. 30ರಂದು ಸುರಿದ ಮಳೆ ಮತ್ತೆ ಹೂಳು ತುಂಬಿ ಕೃತಕ ನೆರೆಗೆ ಕಾರಣವಾಗಿತ್ತು. ಇದೀಗ ಮತ್ತೆ ಹೂಳೆತ್ತುವ ಕಾರ್ಯ ಆರಂಭವಾಗಿದೆ. ಅಲ್ಲದೆ, ಸುತ್ತಲಿನ ಪ್ರದೇಶದ ಸ್ವಚ್ಛತೆಯೂ ಶುರುವಾಗಿದೆ.
ಕಾರ್ಪೋರೆಟರ್ ಚಂದ್ರಾವತಿ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಮುಂಗಾರು ಮಳೆ ಆರಂಭ ಗೊಂಡ ಬಳಿಕ ಎರಡು ಬಾರಿ ಸುರಿದ ಬಿರುಸಿನ ಮಳೆಗೆ ಪಡೀಲ್ ಪರಿಸರದಲ್ಲಿ ನೆರೆ ಸೃಷ್ಟಿಯಾಗಿ ಅವಾಂತರ ಸೃಷ್ಟಿಯಾಗಿತ್ತು. ಇದೀಗ, ರಾಜಕಾಲುವೆಯಲ್ಲಿ ಮತ್ತೆ ಹೂಳೆತ್ತಲಾಗಿದೆ. ಇತ್ತೀಚೆಗೆ ಸುರಿದ ಮಳೆಗೆ ಈ ಭಾಗದಲ್ಲಿ ಸೃಷ್ಟಿಯಾದ ಕೃತಕ ನೆರೆಯಿಂದಾಗಿ ರಸ್ತೆಯಲ್ಲಿ ಮಣ್ಣುಗಳು ಚದುರಿತ್ತು. ಈ ಕುರಿತು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದು, ಮಳೆ ನೀರು ಚರಂಡಿ ಸಾಗಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿದೆ’ ಎನ್ನುತ್ತಾರೆ.
ರಾಜಕಾಲುವೆ ಹೂಳೆತ್ತಲು ಕ್ರಮ: ಕಳೆದ ಕೆಲ ದಿನಗಳ ಹಿಂದೆ ನಗರದಲ್ಲಿ ಸುರಿದ ಭಾರೀ ಮಳೆಗೆ ನಗರದ ಕೆಲವು ಕಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು. ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯದೆಯೂ ಈ ಸಮಸ್ಯೆ ಉದ್ಭವಿಸುತ್ತಿದೆ. ಈಗಾಗಲೇ ರಾಜಕಾಲುವೆಗಳ ಹೂಳೆತ್ತಿದರೂ ಮುಂಜಾಗ್ರತೆ ದೃಷ್ಟಿಯಿಂದ ಕೆಲವು ಕಡೆಗಳಲ್ಲಿ ಮತ್ತೆ ರಾಜಕಾಲುವೆ ಹೂಳು ತೆಗೆಯಲು ಪಾಲಿಕೆ ಮುಂದಾಗಿದೆ. –
ಪ್ರೇಮಾನಂದ ಶೆಟ್ಟಿ, ಮೇಯರ್, ಮಂಗಳೂರು ಮಹಾನಗರ ಪಾಲಿಕೆ