ಮಹಾನಗರ: ಐದು ವರ್ಷಗಳ ಹಿಂದೆ ಘನ ತ್ಯಾಜ್ಯ ನಿರ್ವ ಹಣೆಯಲ್ಲಿ ಅತ್ಯುತ್ತಮ ಮಧ್ಯಮ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಮಂಗಳೂರಿನಲ್ಲಿ ಸದ್ಯ ಸ್ವತ್ಛತೆಯ ಸವಾಲು ಗಂಭೀರವಾಗುತ್ತಿದೆ. ಹಲವು ಕಡೆಗಳಲ್ಲಿ ಕಸ ಎಸೆದು ಬ್ಲ್ಯಾಕ್‌ಸ್ಪಾಟ್ ನಿರ್ಮಾಣವಾಗುತ್ತಿದ್ದು, ಇದನ್ನು ತಡೆಯುವುದು ಸ್ಥಳೀಯಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.
ನಗರದ ರಸ್ತೆ ಬದಿಯಲ್ಲಿ ಕಸ ಎಸೆಯುವವರ ವಿರುದ್ಧ ಮಹಾನಗರ ಪಾಲಿಕೆ ಈಗಾಗಲೇ ಕಠಿನ ನಿಯಮ ಜಾರಿಗೆ ತಂದಿದ್ದರೂ ಇನ್ನೂ ಸಮರ್ಪಕ ವಾಗಿ ಅನುಷ್ಠಾನವಾಗುತ್ತಿಲ್ಲ. ಪರಿಣಾಮ ಚಿಲಿಂಬಿ, ದೇರೆಬೈಲ್, ರಥಬೀದಿ, ಕೊಟ್ಟಾರ, ಅಳಕೆ, ಕುದ್ರೋಳಿ, ಬಂದರು, ಸ್ಟೇಟ್‌ಬ್ಯಾಂಕ್, ದಡ್ಡಲಕಾಡು ಸಹಿತ ಹಲವು ಕಡೆಗಳಲ್ಲಿ ರಸ್ತೆ ಬದಿಯೇ ಕಸ ಬಿದ್ದಿದ್ದು, ಸುತ್ತಮುತ್ತಲಿನ ಪ್ರದೇಶ ಗಲೀಜಿನಿಂದ ಕೂಡಿದೆ.
ಕೆಲವು ದಿನಗಳ ಹಿಂದೆ ಕಸ ಸಂಗ್ರಹ ಮಾಡುವ ಕಾರ್ಮಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಹೆಚ್ಚಿನ ಸಾರ್ವಜನಿಕರು ರಸ್ತೆ ಬದಿಯಲ್ಲಿಯೇ ಕಸ ಎಸೆಯುತ್ತಿದ್ದರು. ಆ ವೇಳೆಯಿಂದ ನಗರದಲ್ಲಿ ಮತ್ತಷ್ಟು ಬ್ಲ್ಯಾಕ್‌ಸ್ಪಾಟ್‌ಗಳು ನಿರ್ಮಾಣವಾಗಿದೆ. ಪಾಲಿಕೆ ವ್ಯಾಪ್ತಿಯ ಎಲ್ಲ ಮನೆಗಳಿಂದ ಹಸಿ, ಒಣ ಕಸ ವಿಂಗಡಣೆ ಮಾಡಿ ನೀಡಲು ಒಂದು ವರ್ಷದ ಹಿಂದೆಯೇ ಸೂಚನೆ ನೀಡಲಾಗಿದ್ದು, ಸದ್ಯ ಶೇ.70ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನೂ ಶೇ.30ರಷ್ಟು ಮನೆ ಮಂದಿ ಕಸ ಬೇರ್ಪಡಿಸಿ ನೀಡುತ್ತಿಲ್ಲ. ಕೆಲವರು ರಸ್ತೆ ಬದಿಯಲ್ಲೇ ಪ್ಲಾಸ್ಟಿಕ್‌ನಲ್ಲಿ ಕಸ ರಾಶಿ ಹಾಕುತ್ತಿರುವುದು ನಗರದಲ್ಲಿ ಕಂಡುಬರುತ್ತದೆ.
ಸುಮಾರು 1.30 ಲಕ್ಷ ರೂ. ದಂಡ ಸಂಗ್ರಹ
ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಕಸ ಎಸೆಯುವುದು /ಹಾಕುವುದು ಕಂಡುಬಂದಲ್ಲಿ ಅವರ ಮೇಲೆ 20,000 ರೂ.ಗೂ ಹೆಚ್ಚಿನ ಭಾರೀ ದಂಡ ವಿಧಿಸಲು ಅವಕಾಶವಿದೆ.
ಕಳೆದ ಆಗಸ್ಟ್ ನಿಂದ ಈ ವರ್ಷ ಜೂನ್ ತಿಂಗಳವರೆಗೆ ಸಾರ್ವಜನಿಕರ ಸ್ಥಳದಲ್ಲಿ ಕಸ ಎಸೆಯು ವಾಗ ಕಾರ್ಯಾಚರಣೆ ನಡೆಸಿದ ಮಹಾನಗರ ಪಾಲಿಕೆಯು ಸುಮಾರು 1.30 ಲಕ್ಷ ರೂ. ಗೂ ಹೆಚ್ಚಿನ ದಂಡ ವಸೂಲು ಮಾಡಿದೆ.
ಸಿ.ಸಿ. ಕ್ಯಾಮರಾ ಕಣ್ಗಾವಲು
ನಗರದ ರಸ್ತೆ ಬದಿ ಕಸ ಎಸೆಯುವುದನ್ನು ತಡೆಯುವ ನಿಟ್ಟಿನಲ್ಲಿ ಪಾಲಿಕೆಯು ನಗರದ ವಿವಿಧ ಕಡೆಗಳಲ್ಲಿ ಸೋಲಾರ್ ಚಾಲಿತ ಸಿಸಿ ಕೆಮರಾ ಅಳವಡಿಸಿದೆ. ಅದ ರಂತೆ ಸದ್ಯ ನಗರದ 12 ಕಡೆಗಳಲ್ಲಿ ಸ್ವಯಂ ಚಾಲಿತ ಸಿಸಿ ಕೆಮರಾ ಅಳವಡಿಕೆ ಮಾಡಲಾಗಿದೆ. ಈ ಕ್ಯಾಮರಾ ಕಂಬವನ್ನು ಒಂದು ಕಡೆಯಿಂದ ಮತ್ತೂಂದು ಕಡೆಗೆ ಸ್ಥಳಾಂತರ ಮಾಡಲೂ ಸಾಧ್ಯವಿದೆ. ಆದರೂ ಕೆಲವೊಂದು ಬ್ಲ್ಯಾಕ್‌ಸ್ಪಾಟ್ ಪ್ರದೇಶದಲ್ಲಿ ಸಿಸಿ ಕೆಮ ರಾ ಇಲ್ಲ. ಇದರಿಂದ ಕಸ ಎಸೆಯುವವರ ಪತ್ತೆಗೆ ತೊಡಕಾಗಿದೆ. ಆ ಪ್ರದೇಶವನ್ನು ಸುಂದರಗೊಳಿಸಿ ಮಿನಿ ಗಾರ್ಡನ್ ನಿರ್ಮಿಸುವ ಮುಖೇನ ಸ್ವಚ್ಛತೆಗೆ ಗಮನ ನೀಡಲು ಪಾಲಿಕೆ ಮುಂದಾಗಿದೆ. ಅಂತಹ ಪ್ರದೇಶದಲ್ಲಿಯೂ ಕೆಲವೊಬ್ಬರು ಕಸ ಎಸೆಯುತ್ತಿದ್ದಾರೆ. ಸಾರ್ವ ಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಕಂಡು ಬಂದರೆ ಸಾರ್ವಜನಿಕರು ಪಾಲಿಕೆಯ ಹೆಲ್ಪ್ ಲೈನ್ 0824-2220306 ಸಂಪರ್ಕಿಸಬಹುದಾಗಿದೆ.
ಸಾರ್ವಜನಿಕರಿಗೆ ಅರಿವು: ನಗರದಲ್ಲಿ ಕಸ ಎಸೆದು ಬ್ಲ್ಯಾಕ್‌ಸ್ಪಾಟ್ ನಿಯಂತ್ರಣ ತಡೆಯುವಲ್ಲಿ ಪಾಲಿಕೆ ಗಮನಹರಿಸುತ್ತಿದೆ. ಈಗಾಗಲೇ ನಗರದ 12 ಕಡೆಗಳಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ. ಬ್ಲ್ಯಾಕ್‌ಸ್ಪಾಟ್‌ಗಳನ್ನು ಸುಂದರಗೊಳಿಸಿಲಾಗಿದೆ. ಸ್ವಚ್ಛತೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದ್ದು, ದಂಡ ವಿಧಿಸಲಾಗುತ್ತಿದೆ. –
ಶಬರಿನಾಥ ರೈ, ವಲಯ ಆಯುಕ್ತರು
ಮಲಿನವಾಗುತ್ತಿದೆ ನದಿ ತೀರ
ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಸಿಟಿ ಯಲ್ಲಿ ಕೆಲವರು ತೋಡು, ಚರಂಡಿಗೆ ಕಸ ಎಸೆಯುತ್ತಿದ್ದು, ಈ ಕಸ ನೇರವಾಗಿ ನದಿ ಸೇರುತ್ತಿದೆ. ಇದರಿಂದಾಗಿ ನಗರದ ಫಲ್ಗುಣಿ ಮತ್ತು ನೇತ್ರಾವತಿ ನದಿ ದಡ ಮಲಿನಗೊಂಡಿದೆ. ಮಳೆ ಸಂದರ್ಭ ಹೊಳೆ, ತೋಡಿನ ಮೂಲಕ ಫಲ್ಗುಣಿ ನದಿ ಸೇರಿದ ತ್ಯಾಜ್ಯ ಬರೋಬ್ಬರಿ 11 ಲೋಡ್‌ಗೂ ಅಧಿಕವಾಗಿತ್ತು. ಪರಿಸರಾಸಕ್ತರು ಇತ್ತೀಚೆಗೆಯಷ್ಟೇ ನದಿ ಸ್ವಚ್ಛತೆಗೊಳಿಸಿದ್ದರು.