ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡುವ ಕೇಂದ್ರ ಸರಕಾರದ ಯೋಜನೆಯನ್ವಯ ಶುಕ್ರವಾರ ತಡ ರಾತ್ರಿ 12 ಗಂಟೆಗೆ ವಿಮಾನ ನಿಲ್ದಾಣವು ಗೌತಮ್ ಅದಾನಿ ಒಡೆತನದ ಅದಾನಿ ಸಮೂಹ ಸಂಸ್ಥೆಗೆ ಹಸ್ತಾಂತರವಾಗಿದೆ.
ಈ ಮೂಲಕ ಮಂಗಳೂರು ವಿಮಾನ ನಿಲ್ದಾಣದ ಹೆಸರು ಇನ್ನುಮುಂದೆ “ಅದಾನಿ ಮಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್’ ಎಂಬುದಾಗಿ ಬದಲಾಗಿದೆ. ವಿಮಾನಗಳ ಹಾರಾಟ ಹೊರತುಪಡಿಸಿ ಉಳಿದೆಲ್ಲಾ ರೀತಿಯ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ಇನ್ನು ಅದಾನಿ ಸಮೂಹ ಸಂಸ್ಥೆ ನಿರ್ವಹಿಸಲಿದೆ.
ವಿಮಾನ ನಿಲ್ದಾಣ ಹಸ್ತಾಂತರಕ್ಕೆ ಸಂಬಂಧಿಸಿದ ಒಡಂಬಡಿಕೆ ಪತ್ರವನ್ನು ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್ ಅವರು, ಅದಾನಿ ಮಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿ.ನ ಸಿಇಒ ಅಶುತೋಷ್ ಚಂದ್ರ ಮತ್ತು ಅದಾನಿ ಏರ್‌ಪೋರ್ಟ್‌ಗಳ ಸಿಇಒ ಬೆಹಾಡ್ ಝಂಡಿ ಅವರಿಗೆ ಹಸ್ತಾಂತರಿಸಿದರು. ಈ ವೇಳೆ, ಪ್ರಮುಖರಾದ ಆರ್. ಮಾಧವನ್ ಹಾಗೂ ಬಿ.ಕೆ. ಮಲ್ಹೋತ್ರ ಉಪಸ್ಥಿತರಿದ್ದರು.
50 ವರ್ಷಗಳ ಲೀಸ್‌ಗೆ ಅದಾನಿ ಸಂಸ್ಥೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ಹಸ್ತಾಂತರಿಸಲಾಗಿದ್ದು, ಒಂದು ವರ್ಷದ ಅವಧಿಗೆ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಅದಾನಿ ಸಂಸ್ಥೆಗಳು ಸಮಾನಾಂತರವಾಗಿ ಕಾರ್ಯ ನಿರ್ವಹಿಸಲಿವೆ.
ಹೆಸರು ಬದಲಾವಣೆ: ಹಸ್ತಾಂತರವಾದ ತತ್‌ಕ್ಷಣದಿಂದಲೇ ವಿಮಾನ ನಿಲ್ದಾಣದ ಹೆಸರು “ಅದಾನಿ ಮಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್’ ಎಂಬುದಾಗಿ ಬದಲಾವಣೆಗೊಂಡಿದೆ.
ವಿಮಾನ ನಿಲ್ದಾಣದ ಒಳಗೆ ಹಾಗೂ ಹೊರಗಡೆ ಅದಾನಿ ಏರ್‌ಪೋರ್ಟ್ ನಾಮ ಫಲಕ ಹಾಕಲಾಗಿದ್ದು, ವಿಮಾನ ನಿಲ್ದಾಣದ ಆಗಮನ ಮತ್ತು ನಿರ್ಗಮನ ರಸ್ತೆಯ ದ್ವಾರ ಇರುವ ಕೆಂಜಾರು ಬಜಪೆ ಹೆದ್ದಾರಿಯಲ್ಲಿಯೂ ಅದಾನಿ ಏರ್‌ಪೋರ್ಟ್ ನಾಮಫಲಕ ಅಳವಡಿಸಲಾಗಿದೆ.
ಹಸ್ತಾಂತರದ ಬಳಿಕ ಮುಂಜಾನೆ 1.45 ಕ್ಕೆ ಮಂಗಳೂರಿನಿಂದ ದುಬಾಯಿಗೆ ಪ್ರಯಾಣಿಸಿದ ಮೊದಲ ವಿಮಾನದ ಪ್ರಯಾಣಿಕರಿಗೆ ಸಿಹಿ ಹಂಚುವ ಮೂಲಕ ಅದಾನಿ ಸಂಸ್ಥೆಯ ಪ್ರಮುಖರು ಸಂಭ್ರಮವನ್ನು ಹಂಚಿಕೊಂಡರು.