Advertisement

ಮಂದಾರ್ತಿ ಮೃಷ್ಟಾನ್ನ

07:31 PM Oct 04, 2019 | Lakshmi GovindaRaju |

ಕರಾವಳಿಯ ಪ್ರಮುಖ ದೇವಿ ಶಕ್ತಿ ಕ್ಷೇತ್ರಗಳಲ್ಲಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇಗುಲವೂ ಒಂದು. ಅಮ್ಮನವರು ನೆಲೆನಿಂತ ಈ ಪವಿತ್ರ ಸ್ಥಳದಲ್ಲಿ ಅನ್ನ ಪ್ರಸಾದ, ಅತ್ಯಂತ ಭಕ್ತಿಪೂರ್ಣವಾಗಿ ಸಾಗುತ್ತದೆ. ಪ್ರಶಾಂತ ಪರಿಸರ, ಪ್ರೀತಿಪೂರ್ವಕ ಮೇಲ್ವಿಚಾರಣೆ, ಶಿಸ್ತಿನ ಭೋಜನ ವ್ಯವಸ್ಥೆ ಇಲ್ಲಿನ ವಿಶೇಷತೆ…

Advertisement

ದೇವರತಿ, ನಾಗರತಿ, ಚಾರುರತಿ, ಮಂದರತಿ ಮತ್ತು ನೀಲರತಿ ಎನ್ನುವ ಪಂಚ ಸರ್ಪಗಳಲ್ಲಿ “ಮಂದರತಿ’ ಎನ್ನುವ ನಾಗ ಸರ್ಪವು ಸೇರಿದ ಜಾಗವೇ ಮಂದಾರ್ತಿಯಾಯಿತು. “ದುರ್ಗಾಪರಮೇಶ್ವರಿ’ ಎಂಬ ಹೆಸರಿನಲ್ಲಿ ನೆಲೆಸಿ ಭಕ್ತಿಯಿಂದ ಆರಾಧಿಸುವವರ ಸಕಲ ದುರಿತಗಳನ್ನು ನಿವಾರಿಸಿ, ಸಕಲಾಭೀಷ್ಟ ಸಿದ್ಧಿಸುವ ಕ್ಷೇತ್ರವಾಗಿದೆ.

ಮಂದಾರ್ತಿ ಕ್ಷೇತ್ರದಲ್ಲಿ ಪ್ರತಿ ದಿನ 4,000ಕ್ಕೂ ಹೆಚ್ಚು ಭಕ್ತರು ಮಧ್ಯಾಹ್ನ ಮತ್ತು ರಾತ್ರಿ ಅನ್ನಪ್ರಸಾದ ಸ್ವೀಕರಿಸುತ್ತಾರೆ. ವಿಶೇಷ ದಿನಗಳಲ್ಲಿ ಈ ಸಂಖ್ಯೆ 5ರಿಂದ 6 ಸಾವಿರ ದಾಟುತ್ತದೆ. ಚಂಪಾ ಷಷ್ಠಿ, ನವರಾತ್ರಿ, ಸಾಮೂಹಿಕ ವಿವಾಹ, ವಾರ್ಷಿಕ ಜಾತ್ರಾ ಸಂದರ್ಭದಲ್ಲಿ ಲಕ್ಷಾಂತರ ಜನರು ಭೋಜನ ಪ್ರಸಾದ ಸೇವಿಸುತ್ತಾರೆ.

ಸುಸಜ್ಜಿತ ಭೋಜನ ಶಾಲೆ: ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಪ್ರಾರಂಭಗೊಂಡಿದ್ದು, 1996ರಲ್ಲಿ. 1.6 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸುಸಜ್ಜಿತ ಭೋಜನ ಶಾಲೆ ಇಲ್ಲಿದೆ. ಮೇಲಿನ ಮಹಡಿಯಲ್ಲೂ ಭೋಜನ ವಿತರಣೆ ವ್ಯವಸ್ಥೆ ಇದೆ. ಒಂದು ಸಲಕ್ಕೆ 1750 ಮಂದಿ ಕುಳಿತು ಊಟ ಮಾಡುವ ಸೌಕರ್ಯವಿದೆ.

ಯಂತ್ರಗಳ ಮೋಡಿ: ತರಕಾರಿ ಹೆಚ್ಚಲು ಸುಸಜ್ಜಿತ ಯಂತ್ರವಿದೆ. ಗ್ಯಾಸ್‌ನ ಸ್ಟೀಮ್‌ ಬಾಯ್ಲರ್‌ ಇದೆ. ಬಡಿಸಲು ತಳ್ಳುಗಾಡಿಗಳ ವ್ಯವಸ್ಥೆ ಇದೆ. ಅನ್ನ, ಪಾಯಸ, ಸಾಂಬಾರು ತಯಾ­ ರಿಕೆಗೆ 3 ದೊಡ್ಡ ಬಾಯ್ಲರ್‌ಗಳಿವೆ.

Advertisement

ಜಾತ್ರಾ ವೈಭವ: ಫೆಬ್ರವರಿಯಲ್ಲಿ ನಡೆಯುವ ಜಾತ್ರೆ ಸಂದರ್ಭದ ಕೆಂಡೋತ್ಸವ, ರಥೋತ್ಸವ, ದೀಪೋತ್ಸವ ದಿನಗಳಂದು ಸುಮಾರು 1.25 ಲಕ್ಷ ಜನ ಭೋಜನ ಸ್ವೀಕರಿಸುತ್ತಾರೆ.

ನಿತ್ಯ ಅನ್ನದಾನ: ಗ್ರಹಣದಂಥ ಅಪರೂಪದ ಸನ್ನಿವೇಶ ಹೊರತುಪಡಿಸಿ ವರ್ಷದ 365 ದಿನವೂ ಅನ್ನದಾನ ನಡೆಯುವುದು ಇಲ್ಲಿನ ವಿಶೇಷ. ದೂರದೂರದ ಭಕ್ತಾದಿಗಳಲ್ಲದೆ, ಹಲವು ಕಡೆಗಳಿಗೆ ಭೇಟಿ ನೀಡುವ ಪ್ರವಾಸಿಗರೂ ಮಧ್ಯಾಹ್ನದ ಊಟಕ್ಕೆ ಮಂದಾರ್ತಿಯನ್ನು ಆಯ್ಕೆ ಮಾಡುವುದು ಕ್ಷೇತ್ರದ ವೈಶಿಷ್ಟ.

ಎಲೆ ಊಟ…: ಶಾಲಾ ಮಕ್ಕಳನ್ನು ಹೊರತುಪಡಿಸಿ, ಉಳಿದ ಎಲ್ಲರಿಗೂ ಬಾಳೆ ಎಲೆಯಲ್ಲಿ ಊಟದ ವ್ಯವಸ್ಥೆಯಿದೆ. ಒಂದು ದಿನದ ಅನ್ನಸಂತರ್ಪಣೆ ಸೇವೆಗೆ ರೂ.25,000 ನಿಗದಿಪಡಿಸಿದ್ದು, ವರ್ಷಕ್ಕೆ 75ರಿಂದ 80 ಮಂದಿ ಸೇವಾಕರ್ತರಿಂದ ಅನ್ನದಾನ ನೆರವೇರುತ್ತದೆ.

ಊಟದ ಸಮಯ
ಮ. 12.15- 3 ಗಂಟೆವರೆಗೆ
ರಾ. 8- 9 ಗಂಟೆವರೆಗೆ

ಭಕ್ಷ್ಯ ಸಮಾಚಾರ
-ನಿತ್ಯವೂ ಅನ್ನ, ಸಾರು, ಸಾಂಬಾರು, ಪಲ್ಯ, ಪಾಯಸ, ಮಜ್ಜಿಗೆ.
-ಕುಂಬಳಕಾಯಿ, ಚೀನಿಕಾಯಿ, ಸೌತೆಕಾಯಿ, ಆಲೂಗಡ್ಡೆ, ಬದನೆ, ಸುವರ್ಣಗಡ್ಡೆ, ಕೊತ್ತಂಬರಿ ಸೊಪ್ಪು… ಇಲ್ಲಿ ಹೆಚ್ಚಾಗಿ ಬಳಕೆಯಾಗುವ ತರಕಾರಿ.
-ಗೋಧಿಕಡಿ, ಅಕ್ಕಿ, ಕಡ್ಲೆಬೇಳೆ, ಹೆಸರು ಬೇಳೆ, ಸಾಬಕ್ಕಿ ಮಿಶ್ರಣದ ಪಾಯಸ.

ದೇವಿಯ ಮಹಿಮೆಯಿಂದ ಪ್ರತಿನಿತ್ಯವೂ ಆಗಮಿಸಿದ ಎಲ್ಲಾ ಭಕ್ತರಿಗೆ, ಜತೆಗೆ ದೇವಸ್ಥಾನದಿಂದ ನಡೆಸಲ್ಪಡುವ ಪ್ರೌಢಶಾಲೆ, ಪ.ಪೂ. ಕಾಲೇಜು ವಿದ್ಯಾರ್ಥಿಗಳಿಗೆ ಅನ್ನದಾನ ನಡೆಯುತ್ತಿದೆ. ಕ್ಷೇತ್ರದ ಅನ್ನದಾನಕ್ಕೆ ವಿಶೇಷ ಹೆಗ್ಗಳಿಕೆಯಿದೆ.
-ಎಚ್‌. ಧನಂಜಯ ಶೆಟ್ಟಿ, ಅನುವಂಶಿಕ ಮೊಕ್ತೇಸರರು, ಶ್ರೀ ಕ್ಷೇತ್ರ ಮಂದಾರ್ತಿ

ಅನ್ನದಾನ ಶ್ರೇಷ್ಠದಾನ. ಅಮ್ಮನ ಸೇವೆ ಎನ್ನುವ ಭಾವನೆಯಿಂದ ಕಳೆದ 23 ವರ್ಷಗಳಿಂದ ಇಲ್ಲಿನ ಅಡುಗೆ ಸೇವೆಯಲ್ಲಿ ನಿರತನಾಗಿದ್ದೇನೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಆಡಳಿತ ಮಂಡಳಿ ಹಾಗೂ ಸರ್ವರ ಸಹಕಾರದಿಂದ ವ್ಯವಸ್ಥಿತವಾಗಿ ಅನ್ನದಾನ ನಡೆಯುತ್ತಿದೆ.
-ಸುಬ್ರಹ್ಮಣ್ಯ ರಾವ್‌ ಕೂಡ್ಲಿ, ಹಿರಿಯ ಬಾಣಸಿಗ

* ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next