Advertisement

ಕೈದಿಗಳ ನಿರ್ವಹಣೆಯೇ ಇಲಾಖೆಗೆ ಸವಾಲು! ಜೈಲಿನಲ್ಲಿ ಕೈದಿಗಳುಂಟು, ಸಿಬಂದಿಯೇ ಇಲ್ಲ!

11:20 PM Feb 25, 2023 | Team Udayavani |

ಬೆಂಗಳೂರು: ರಾಜ್ಯದ ಲ್ಲಿರುವ 54 ಕಾರಾಗೃಹಗಳಲ್ಲಿ ಕೈದಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಸದ್ಯ ಮಿತಿಗಿಂತ ಹೆಚ್ಚುವರಿಯಾಗಿ ಬರೊಬ್ಬರಿ 973 ಕೈದಿಗಳು ಕಂಬಿ ಎಣಿಸುತ್ತಿದ್ದಾರೆ. ಆದರೆ, 1,015 ಜೈಲು ಸಿಬಂದಿ ಕೊರತೆ ಎದುರಾಗಿರುವುದರಿಂದ ಪೊಲೀಸ್‌ ಇಲಾಖೆಗೆ ಕಾರಾಗೃಹಗಳ ನಿರ್ವಹಣೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Advertisement

ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಬೇರೆಡೆ ಕಳುಹಿಸಲು ಅವಕಾಶಗಳಿಲ್ಲ. ಜೈಲಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊಠಡಿ, ಹಾಸಿಗೆ, ಶೌಚಾಲಯ, ಕುಡಿವ ನೀರು, ಆಹಾರ ಸೇರಿದಂತೆ ಇತರ ಮೂಲ ಸೌಲಭ್ಯ ಒದಗಿಸಲಾಗುತ್ತಿದೆ. ಹೀಗಾಗಿ ಪ್ರಸ್ತುತವಿರುವ ಕಾರಾಗೃಹ ಕಟ್ಟಡದ ಕೊಠಡಿಗಳಲ್ಲಿ ಕೈದಿಗಳು ತೀರಾ ಇಕ್ಕಟ್ಟಿನಲ್ಲಿ ಇರುವ ಸ್ಥಿತಿ ಬಂದೊದಗಿದೆ. ಕೆಲವು ವರ್ಷಗಳಿಂದ ಹೊಂದಾಣಿಕೆ ಮಾಡಿಕೊಂಡೇ ದಿನ ದೂಡಿರುವ ಕೈದಿಗಳು ಇದೀಗ ಕೊಠಡಿ, ಸ್ನಾನಗೃಹದಂತಹ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ. 973 ಹೆಚ್ಚುವರಿ ಕೈದಿಗಳ ನಿರ್ವಹಣೆಗೆ ರಾಜ್ಯ ಪೊಲೀಸ್‌ ಇಲಾಖೆಯೂ ಹೆಣಗಾಡುತ್ತಿದೆ. ತಾಲೂಕು ಕಾರಾಗೃಹಗಳಲ್ಲಿ ಕೈದಿಗಳ ಪ್ರಮಾಣ ಮಿತಿಯಲ್ಲಿದ್ದು, ಗ್ರಾಮೀಣ ಭಾಗಗಳು ಅಪರಾಧ ಪ್ರಕರಣಗಳಿಂದ ಮುಕ್ತವಾಗುವ ಕಡೆಗೆ ಹೆಜ್ಜೆ ಹಾಕುತ್ತಿವೆ ಎಂಬ ಅಂಶಗಳಿಗೆ ಪುಷ್ಠಿ ನೀಡುತ್ತದೆ.

ಮಂಗಳೂರಲ್ಲೂ ಮಿತಿಗಿಂತ ಹೆಚ್ಚು
ಕರ್ನಾಟಕದ 54 ಕಾರಾಗೃಹಗಳಲ್ಲಿ ಗರಿಷ್ಠ 15,426 ಕೈದಿಗಳಿಗೆ ಇರಲು ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಕೈದಿಗಳ ಪ್ರಮಾಣವು 16,339ಕ್ಕೆ ಏರಿಕೆಯಾಗಿದೆ. ಇವರ ನಿರ್ವಹಣೆಗೆಂದೇ ಕಾರಾಗೃಹ ಇಲಾಖೆಯಲ್ಲಿ ಒಟ್ಟು 3,985 ಹುದ್ದೆ ಸೃಜಿಸಲಾಗಿದೆ. ಈ ಪೈಕಿ 2,970 ಸಿಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಮಿತಿ ಮೀರಿದರೂ 1,015 ಜೈಲು ಸಿಬಂದಿ ಹುದ್ದೆಗಳು ಕೆಲವು ವರ್ಷಗಳಿಂದ ಖಾಲಿ ಇವೆ. ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜ್ಯದಲ್ಲೇ ಮಿತಿಗಿಂತ ಹೆಚ್ಚು ಕೈದಿಗಳಿದ್ದರೆ, ಕಲಬುರಗಿ, ಮಂಗಳೂರು ಅನಂತರದ ಸ್ಥಾನ ದಲ್ಲಿವೆ.

ವಿಚಾರಣಾಧೀನ
ಕೈದಿಗಳೇ ಅಧಿಕ
ಕೊಲೆ, ಕೊಲೆಯತ್ನ, ಹಲ್ಲೆ, ದರೋಡೆ, ಕಳ್ಳತನ, ಅತ್ಯಾಚಾರ, ವಂಚನೆ ಸೇರಿದಂತೆ ಸಾವಿರಾರು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಶೇ. 72ರಷ್ಟು ವಿಚಾರಣಾಧೀನ ಕೈದಿಗಳಿದ್ದು, ಈ ಆರೋಪಿಗಳು ನ್ಯಾಯಾಲಯದ ವಿಚಾರಣೆಗಾಗಿ ಕಾಯುತ್ತಿದ್ದಾರೆ. ಇನ್ನುಳಿದ ಶೇ.28 ರಷ್ಟು ಶಿಕ್ಷೆಗೊಳಗಾದ ಅಪರಾಧಿ ಗಳಿದ್ದಾರೆ.

ಕಾರಾಗೃಹ ಇಲಾಖೆಯು ಕೈದಿಗಳ ನಿರ್ವಹಣೆಗಾಗಿ ಈಗಾಗಲೇ ಸಾಕಷ್ಟು ಕ್ರಮ ಕೈಗೊಂಡಿದೆ. ಕರ್ನಾಟಕ ಮಾತ್ರವಲ್ಲದೆ ದೇಶದ ಬೇರೆ ರಾಜ್ಯದ ಕೆಲವು ಜೈಲುಗಳಲ್ಲೂ ಮಿತಿಗಿಂತ ಹೆಚ್ಚು ಕೈದಿಗಳಿದ್ದಾರೆ.
– ಮನೀಶ್‌ ಖರ್ಬಿಕರ್‌,
ಎಡಿಜಿಪಿ, ರಾಜ್ಯ ಕಾರಾಗೃಹ ಇಲಾಖೆ

Advertisement

 

Advertisement

Udayavani is now on Telegram. Click here to join our channel and stay updated with the latest news.

Next