Advertisement

ತಾ..ತ ಎಂಬ ಮಾತು ಕೇಳಿ ವರದಪ್ಪ ಕುಣಿದಾಡಿದ!

12:09 AM Jan 30, 2022 | Team Udayavani |

“ಸರಕಾರಿ ಕಚೇರಿಯಲ್ಲಿ ಅಟೆಂಡರ್‌ ಆಗಿದ್ದು ನಿವೃತ್ತಿ ಹೊಂದಿದವನು ವರದಪ್ಪ. ಶಿವಮೊಗ್ಗ ಸಮೀಪದ ಕುಗ್ರಾಮ ಅವನ ಹುಟ್ಟೂರು. ನಿವೃತ್ತಿಯ ಸಮಯದಲ್ಲಿ ಸಿಕ್ಕ ಹಣದಿಂದ ಮಗಳ ಮದುವೆ ಮಾಡಿದ್ದ. ಗಂಡಿನ ಕಡೆಯವರು ಸುಳ್ಳು ಹೇಳಿ ಸಂಬಂಧ ಬೆಳೆಸಿದ್ದಾರೆ ಎಂದು ತಿಳಿಯುವ ವೇಳೆಗೆ ತಡವಾಗಿ ಹೋಗಿತ್ತು. ಈ ಆಘಾತದಿಂದ ತತ್ತರಿಸಿ ಹೋದ ವರದಪ್ಪನ ಹೆಂಡತಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿದಳು. ಪಿತ್ರಾರ್ಜಿತ ಆಸ್ತಿಯನ್ನು ಮಾರಿ ಹೆಂಡತಿಯ ಆಸ್ಪತ್ರೆ ಖರ್ಚು ಸರಿದೂಗಿಸಲು ವರದಪ್ಪ ಹೆಣಗುತ್ತಿದ್ದಾಗಲೇ, ಆ ಕಡೆ ಜಮೀನೂ ಹೋಯಿತು. ಈ ಕಡೆ ಹೆಂಡತಿಯೂ ಹೋಗಿಬಿಟ್ಟಳು. ಇದಾಗಿ ಕೆಲವೇ ದಿನಕ್ಕೆ ವರದಪ್ಪನ ಮಗಳಿಗೆ ಫಿಟ್ಸ್‌ ಕಾಯಿಲೆ ಜತೆಯಾಯಿತು. ಆಕೆಯ ಗಂಡನ ಉಡಾಫೆ ಮತ್ತಷ್ಟು ಹೆಚ್ಚಿತು. ಈ ಮಧ್ಯೆಯೇ ಆ ದಂಪತಿಗೆ ಹೆಣ್ಣು ಮಗುವಾಯಿತು. ಎರಡು ವರ್ಷ ತುಂಬಿದಾಗಲೂ ಮಗು ಮಾತಾಡದೇ ಉಳಿದಾಗ ಅದು ಮೂಕ- ಕಿವುಡು ಮಗು ಎಂಬುದು ಅರಿವಿಗೆ ಬಂತು. ಮಗುವಿನ ತಂದೆ ಆಗಲೂ ಬದಲಾಗಲಿಲ್ಲ. ಇದನ್ನೆಲ್ಲಾ ಕಂಡ ನಂತರ ಮಗುವನ್ನು ದೊಡ್ಡ ನಗರದಲ್ಲಿ ಬಿಟ್ಟು ಬಂದು ಬಿಡಲು ವರದಪ್ಪ ನಿರ್ಧರಿಸಿದ್ದ.
****
ಮಧ್ಯರಾತ್ರಿಯ ಕತ್ತಲನ್ನು ಸೀಳಿಕೊಂಡು ರೈಲು ಓಡುತ್ತಿತ್ತು. ಪ್ರಯಾಣಿಕರೆಲ್ಲ ನಿದ್ರೆಗೆ ಜಾರಿದಾಗ ಮಗುವನ್ನು ಅಲ್ಲಿಯೇ ಬಿಟ್ಟು ಯಾವುದಾದರೂ ಸ್ಟೇಷನ್‌ನಲ್ಲಿ ಇಳಿದು ಬಿಡಬೇಕು ಎಂದೂ ವರದಪ್ಪ ಯೋಚಿಸಿದ್ದ. ಆದರೆ, ಆ ಜನರಲ್‌ ಬೋಗಿಯಲ್ಲಿ “ಹೌಸ್‌ ಫುಲ್ ‘ ಅನ್ನುವಷ್ಟು ಜನರಿದ್ದರು. ಅಷ್ಟೊಂದು ಜನರನ್ನು ಒಮ್ಮೆಗೇ ಕಂಡು ಬೆಚ್ಚಿದ್ದ ಮಗು, ವರದಪ್ಪನ ಕೈಗಳನ್ನು ಭದ್ರವಾಗಿ ಹಿಡಿದುಕೊಂಡು ನಿದ್ರೆಗೆ ಜಾರಿತ್ತು. ಬೆಳಗಿನ ಜಾವದಲ್ಲೊಮ್ಮೆ ಶೌಚಾಲಯಕ್ಕೆ ಹೋಗ ಬೇಕೆನ್ನಿಸಿ ವರದಪ್ಪ ಎದ್ದು ನಿಂತರೆ, ಆ ಮಗುವೂ ಛಕ್ಕನೆ ಎಚ್ಚರಗೊಂಡು ನನ್ನನ್ನು ಬಿಟ್ಟು ಹೋಗಬೇಡ ಅನ್ನುವಂತೆ ನೋಡ ತೊಡಗಿತು. ಮಗುವಿನ ಆ ನೋಟವನ್ನು ಎದುರಿಸಲಾಗದೆ ವರದಪ್ಪ ತಿರುಗಿ ಕಣ್ಣೊರೆಸಿಕೊಂಡ.

Advertisement

ಮೈಸೂರಿನ ರೈಲು ನಿಲ್ದಾಣ ಅಥವಾ ಬಸ್‌ ನಿಲ್ದಾಣದಲ್ಲಿ ಮಗುವನ್ನು ಬಿಟ್ಟು ಹಿಂತಿರುಗಿ ನೋಡದೆ ಹೋಗಿ ಬಿಡಬೇಕು ಅನ್ನುವುದು ವರದಪ್ಪನ ನಿರ್ಧಾರವಾಗಿತ್ತು. ಆದರೆ ಅದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಆಗ ವರದಪ್ಪನಿಗೆ ಹೊಸದೊಂದು ಐಡಿಯಾ ಬಂತು. ಮಹದೇಶ್ವರ ಬೆಟ್ಟಕ್ಕೆ ಹೋಗುವ ಬಸ್‌ ಹತ್ತಿಬಿಟ್ಟ. ಆ ದಯಾಳು ಮಹದೇಶ್ವರ ಏನಾದ್ರೂ ದಾರಿ ತೋರಿಸ್ತಾನೆ.. ವರದಪ್ಪ ಹೀಗೆಲ್ಲಾ ಯೋಚಿಸುತ್ತಿದ್ದಾ ಗಲೇ ಬಸ್ಸು ಮಹದೇಶ್ವರ ಬೆಟ್ಟ ತಲುಪಿತು.

ಬೆಟ್ಟದಲ್ಲಿ 2 ದಿನ ಕಳೆದರೂ ವರದಪ್ಪ ಅಂದುಕೊಂಡಂತೆ ಏನೂ ಆಗಲಿಲ್ಲ. ಗುಂಪಿನ ಮಧ್ಯೆ ಮಗುವನ್ನು ಬಿಟ್ಟು ಪರಾರಿಯಾಗಲು ಒಂದೆರಡು ಬಾರಿ ಪ್ರಯತ್ನಿಸಿದರೂ, ಹತ್ತೇ ನಿಮಿಷದ ನಂತರ ಆ ಮಗು ಇನ್ನೊಂದು ತಿರುವಿನಿಂದ ಅಳುತ್ತಾ ಬಂದು ವರದಪ್ಪನ ಕೈ ಹಿಡಿದುಕೊಂಡಿತು. ಮುಂದೇನು ಮಾಡುವುದೆಂದು ತಿಳಿಯದೆ ಪೇಚಾಡುತ್ತಿದ್ದಾ ಗಲೇ ಹಿರಿಯರೊಬ್ಬರು ಎದುರು ನಿಂತು ಹೇಳಿದರು: “ಎರಡು ದಿನದಿಂದ ಗಮನಿಸ್ತಾ ಇದ್ದೇನೆ. ನೀವು ಇಬ್ಬರೇ ಇದ್ದೀರಾ. ಮಗುವಿನ ಅಪ್ಪ-ಅಮ್ಮ ಎಲ್ಲಿ? ಯಾವ ಊರು? ಹರಕೆ ಇದೆಯಾ? ಏನು ಸಮಸ್ಯೆ?’
ಇಂಥದೊಂದು ಸಾಂತ್ವನದ ಮಾತಿಗೇ ಕಾದಿದ್ದವನಂತೆ ವರದಪ್ಪ ತನ್ನ ಬದುಕಿನ ಕಥೆ ಹೇಳಿಕೊಂಡ. ಆ ಹಿರಿಯರು- “ಯಜಮಾನ್ರೆ, ದೇವ್ರ ಮೇಲೂ ಭಾರ ಹಾಕಬೇಕು, ಮನುಷ್ಯ ಪ್ರಯತ್ನಾನೂ ಮಾಡ್ಬೇಕು. ನೀವೀಗ ಒಂದ್‌ ಕೆಲ್ಸ ಮಾಡಿ. ಸೀದಾ ಮೈಸೂರಿನ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಆಸ್ಪತ್ರೆಗೆ ಹೋಗಿ. ಅಲ್ಲಿ ಮೂಕ-ಕಿವುಡ ಮಕ್ಕಳಿಗೆ ಮಾತು ಕಲಿಸ್ತಾರೆ. ಇಲ್ಲಿಗೆ ಬಂದು ಆಗಲೇ ಎರಡು ದಿನ ಆಯ್ತು ಅಂತೀರಾ, ಇರಲಿ. ಈ ದುಡ್ಡನ್ನು ಖರ್ಚಿಗೆ ಅಂತ ಇಟ್ಕೊಳ್ಳಿ. ದೇವ್ರು ಎಲ್ರಿಗೂ ದಾರಿ ತೋರಿಸ್ತಾನೆ ಅನ್ನುತ್ತಲೇ ವರದಪ್ಪನ ಜೇಬಿಗೆ ಸಾವಿರ ರೂಪಾಯಿ ತುರುಕಿ ಬೀಳ್ಕೊಟ್ಟರು.
****
“ಅಜ್ಜಾ, ಕಿವುಡು-ಮೂಕ ಮಕ್ಕಳು ಇಲ್ಲಿ ತುಂಬಾ ಇದ್ದಾರೆ. ಅವರಿಗೆಲ್ಲಾ ಚಿಕಿತ್ಸೆ ಕೊಡ್ತೇವೆ. ಮೂಕ ಮಗು ಮಾತು ಕಲಿಯುವುದು ಬಹಳ ತಡವಾಗುತ್ತೆ. ಎರಡು ವರ್ಷ ಆಗಬಹುದು, ಮೂರು ವರ್ಷವೂ ಆಗಬಹುದು. ಅಷ್ಟೂ ದಿನ ನೀವು ಮೈಸೂರಲ್ಲಿ ಉಳಿಯಬೇಕಾಗುತ್ತೆ. ಮಗು ಜೊತೆ ನೀವೂ ಕ್ಲಾಸ್‌ಗೆ ಬರಬೇಕಾಗುತ್ತೆ’-ಆಸ್ಪತ್ರೆಯ ಮುಖ್ಯಸ್ಥೆ ಹೀಗೆಂದಾಗ ವರದಪ್ಪನಿಗೆ ದಿಕ್ಕು ತೋಚ ದಂತಾಯಿತು. ಆತ ಮತ್ತೊಮ್ಮೆ ತನ್ನ ಸಂಕಟದ ಕಥೆ ಹೇಳಿಕೊಂಡು-“ನನ್ನ ಹಣೇಲಿ ಬರೆದಂಗೆ ಆಗಿ ಬಿಡ್ಲಮ್ಮಾ. ಮಗು ಜೊತೆಗೆ ನಾನೇ ಇರುತ್ತೇನೆ. ಅದಕ್ಕೆ ಮಾತು ಬಂದ್ರೆ ಸಾಕು. ನನಗೆ ಪೆನ್ಶನ್‌ ಬರುತ್ತೆ, ಮೂರು ಹೊತ್ತಿನ ಅನ್ನಕ್ಕೆ ತೊಂದರೆ ಇಲ್ಲ. ಹತ್ರದಲ್ಲಿ ಒಂದು ಚಿಕ್ಕ ಮನೆ ಬಾಡಿಗೆಗೆ ಸಿಕ್ಕಿದ್ರೆ ಸಾಕು..’ ಎಂದ. ವರದಪ್ಪನ ವಿಷಯದಲ್ಲಿ ಆಸ್ಪತ್ರೆಯ ಸಿಬ್ಬಂದಿಯೂ ಮುತುವರ್ಜಿ ವಹಿಸಿದ್ದರಿಂದ ಅಲ್ಲಿದ್ದ ಬ್ಯಾಂಕ್‌ಗೆ ಖಾತೆಯನ್ನು ಬಲುಬೇಗ ಟ್ರಾನ್ಸ್ ಫ‌ರ್‌ ಮಾಡಿಸಲು ಸಾಧ್ಯವಾಯಿತು.

ಅದುವರೆಗೂ, ಸಮಸ್ಯೆ ಇರುವುದು ತಮ್ಮ ಮಗುವಿಗೆ ಮಾತ್ರ ಎಂಬುದು ವರದಪ್ಪನ ನಂಬಿಕೆಯಾಗಿತ್ತು. ಆದರೆ, ವರದಪ್ಪನ ಮೊಮ್ಮಗುವಿಗೆ ಇತ್ತಲ್ಲ, ಅದಕ್ಕಿಂತ ನಾಲ್ಕುಪಟ್ಟು ಹೆಚ್ಚಿನ ಸಮಸ್ಯೆ ಹೊಂದಿದ್ದ ಮಕ್ಕಳೂ ಆಸ್ಪತ್ರೆ ಯಲ್ಲಿದ್ದವು. ಅವ ನ್ನೆಲ್ಲಾ ನೋಡುತ್ತಲೇ ಈತ ತನ್ನ ಸಂಕಟ ಮರೆಯುತ್ತಿದ್ದ. ಮೊದಲಿಗೆ, ಆ ಮೂಕ ಮಗುವಿಗೆ ಪರೀಕ್ಷೆ ಮಾಡಿ, ಹಿಯರಿಂಗ್‌ ಏಯ್ಡ್ ಹಾಕಿದರು. ಅನಂತರವೂ ವರ್ಷ ಕಳೆದರೂ ಆ ಮಗು ಕಮಕ್‌-ಕಿಮಕ್‌ ಎನ್ನಲಿಲ್ಲ. ಆಸ್ಪತ್ರೆಯ ಸಿಬಂದಿ ಮಾತ್ರ ನಂಬಿಕೆ ಕಳ್ಕೊಬೇಡಿ, ಕಾಯೋಣ ಅನ್ನುತ್ತಿದ್ದರು. ಅಕಸ್ಮಾತ್‌ ಇಲ್ಲಿ ಚಿಕಿತ್ಸೆ ಕೊಡಿಸಿದಾಗಲೂ ಪ್ರಯೋಜನ ಆಗದಿದ್ದರೆ, ಮಗುವಿಗೆ ಊಟ ದಲ್ಲಿ ಮದ್ದು ಕೊಟ್ಟು ಒಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದೂ ವರದಪ್ಪ ನಿರ್ಧರಿಸಿದ್ದೇ ಆಗ. ಆದರೆ ಅದೊಮ್ಮೆ ಇದ್ದಕ್ಕಿದ್ದಂತೆ ಮ್ಯಾಜಿಕ್‌ ನಡೆಯಿತು. ಏನೋ ಸದ್ದು ಕೇಳಿಸಿದಂತಾಗಿ ಆ ಮಗುವಿನ ಕಣ್ಣು ಅರಳಿದವು. ಕೆನ್ನೆಗಳು ಅದುರಿದವು. ಹಣೆಯ ನೆರಿಗೆ ಮೇಲೆದ್ದಿತು. ಪಕ್ಕದಲ್ಲಿ ಕುಳಿತು ಇದನ್ನು ಗಮನಿಸುತ್ತಿದ್ದ ವರದಪ್ಪ ಗದ್ಗದನಾಗಿ ಬಿಕ್ಕಳಿಸುತ್ತಾ ಕೈಮುಗಿದ.

ಆಮೇಲೆ ಏನಾಯಿತೆಂದರೆ, ತುಂಬಾ ನಿಧಾನಕ್ಕೆ ತೊದಲುತ್ತಾ ಮಾತಾಡಲು ಆ ಮಗುವಿಗೆ ಸಾಧ್ಯವಾಯಿತು. ವಿಶೇಷವೆಂದರೆ, ಉಳಿದೆಲ್ಲಾ ಮಕ್ಕಳಿಗೆ ಅಪ್ಪ-ಅಮ್ಮ ಅನ್ನಲು ಕಲಿಸಿದರೆ, ಈ ಮಗುವಿಗೆ ತಾತಾ ಎನ್ನಲು ಕಲಿಸಲಾಗಿತ್ತು. ಎರಡು ವರ್ಷದ ಅವಧಿಯಲ್ಲಿ ಆತ ಮಾಡಿದ್ದೇ ತಿಂಡಿ. ಬಾಯಿಗಿಟ್ಟಿದ್ದೇ ಊಟ. ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಲು, ಮನುಷ್ಯನಿಗೆ ದೇವರು ಕೊಟ್ಟಿರುವ ವಿಶೇಷ ವರವೇ-ಮಾತು. ಆದರೆ, ವರ್ಷಗಳ ಕಾಲ ಈ ಮಗು ಮಾತಾಡದೇ ಉಳಿದಿದೆಯಲ್ಲ ಅನ್ನಿಸಿದಾಗ ವರದಪ್ಪನಿಗೆ ವಿಪರೀತ ಸಂಕಟವಾಗುತ್ತಿತ್ತು. ತನ್ನ ನೋವನ್ನೆಲ್ಲಾ ಆಸ್ಪತ್ರೆಯ ಸಿಬ್ಬಂದಿ ಬಳಿ, ಜೊತೆಗಿದ್ದ ಪೋಷಕರೊಂದಿಗೆ ಹೇಳಿ ಕೊಳ್ಳುತ್ತಿದ್ದ. ಕಡೆಗೊಂದು ದಿನ, 6ನೇ ವಯಸ್ಸಿನಲ್ಲಿ ಆ ಮಗು ತೊದಲುತ್ತಲೇ ನಿಧಾನವಾಗಿ ತಾ…ತ ಅಂದಾಗ, ವರದಪ್ಪ ಅದು ಆಸ್ಪತ್ರೆ ಅನ್ನುವುದನ್ನೂ ಮರೆತು ನಿಂತಲ್ಲೇ ಕುಣಿದಾಡಿದ. ಮಗುವನ್ನು ಬಾಚಿ ತಬ್ಬಿಕೊಂಡು ಮುತ್ತಿಟ್ಟ. ಮರುಕ್ಷಣವೇ ಶಿವಮೊಗ್ಗದಲ್ಲಿದ್ದ ಮಗಳಿಗೆ ಫೋನ್‌ ಮಾಡಿ- ‘ಮಗೂಗೆ ಮಾತು ಬಂತು, ಚೆನಾಗೇ ಮಾತಾಡ್ತಾಳೆ ನಿನ್ನ ಮಗ್ಳು. ಇನ್ನೊಂದಾರು ತಿಂಗ್ಳು ಟ್ರೀಟ್‌ಮೆಂಟ್‌ ಕೊಡಿಕರ್ಕೊಂಡು ಬರುತ್ತೇನೆ’ ಅಂದ. ಆ ತುದಿಯಲ್ಲಿದ್ದ ತನ್ನ ಮಗಳು ನಗುತ್ತನಗುತ್ತಲೇ ಅಳುತ್ತಿದ್ದುದು ವರದಪ್ಪನ ಒಳಗಣ್ಣಿಗೆ ಕಾಣಿಸಿತು.
****
ಅಂದಹಾಗೆ, ಇದು ಹೆಣೆದ ಕಥೆಯಲ್ಲ, ನಡೆದ ಕಥೆ! ಈಗ, ಶಿವಮೊಗ್ಗದಲ್ಲಿರುವ ವರದಪ್ಪ, ಮಾತು ಬಾರದ ಮಕ್ಕಳಿಗೆ ಮಾತು ಕಲಿಸುವ ಶಾಲೆ ನಡೆಸುತ್ತಿದ್ದಾರೆ. ಅವರದು ಉಚಿತ ಸೇವೆ! ಆ ಮೊಮ್ಮಗಳು ಈಗಲೂ ತಾತನ ಜತೆಗಿದ್ದಾಳೆ. ಮಾತಿನ ಮಲ್ಲಿ ಆಗಿರುವ ಅವಳೀಗ ಆರನೇ ತರಗತಿ! ತಿಂಗಳ ಹಿಂದೆ ವರದಪ್ಪ ಅಕಸ್ಮಿಕವಾಗಿ ಮಾತಿಗೆ ಸಿಕ್ಕರು. ಹೀಗೊಂದು ಶಾಲೆ ನಡೆಸಲು ನಿಮಗೆ ಹೇಗೆ ಸಾಧ್ಯ ಆಯ್ತು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಅವರು ಹೇಳಿದರು:

Advertisement

“ಮೈಸೂರಿನಲ್ಲಿ ಮೊಮ್ಮಗಳ ಜತೆಗೆ ಆಸ್ಪತ್ರೆ ಕಂ ಶಾಲೆಗೆ ಹೋಗುತ್ತಿದ್ದಾಗ ಅಲ್ಲಿನ ಶಿಕ್ಷಕರ ಹಾವ-ಭಾವ, ನಡೆ- ನುಡಿಯನ್ನು ಸೂಕ್ಷ್ಮವಾಗಿ ಗಮನಿಸಿದೆ. ಎರಡು ವರ್ಷಗಳ ಅವಧಿಯಲ್ಲಿ ಮೂಕ-ಕಿವುಡ ಮಕ್ಕಳನ್ನು ಹೇಗೆ ಬ್ಯಾಲೆನ್ಸ್ ಮಾಡಬೇಕು ಅನ್ನುವುದು ಅರ್ಥವಾಯಿತು. ಆರು ತಿಂಗಳು ಹೆಚ್ಚುವರಿಯಾಗಿ ಅಲ್ಲಿಯೇ ಉಳಿದು ಆಸ್ಪತ್ರೆಯ ಸಿಬಂದಿಯಿಂದ ಸಲಹೆ ಪಡೆದೆ. ಮೂಕ ಮಕ್ಕಳನ್ನು ಸಲಹುವ ವಿಷಯದಲ್ಲಿ ಸರ್ಟಿಫಿಕೇಟ್‌ ಕೋರ್ಸ್‌ ಮಾಡಿದೆ! ನನ್ನ ಮೊಮ್ಮಗಳನ್ನು ರಾತೋರಾತ್ರಿ ಎತ್ಕೊಂಡು ಹೊರಟ ದಿನ- “ಈ ಮಗೂನ ದೇವಸ್ಥಾನದ, ಅನಾಥಾಶ್ರಮದ ಹೊರಗೆ ಬಿಟ್ಟು ಹೋಗಿ ಬಿಡಬೇಕು ಅಂತೆಲ್ಲಾ ಯೋಚಿಸಿದ್ದೆ . ಆ ದೇವರು ಯಾವುದೋ ರೂಪದಲ್ಲಿ ಕಾಣಿಸಿಕೊಂಡು ನನಗೆ ದಾರಿ ತೋರಿಸಿದ. ಕೆಟ್ಟದಾಗಿ ಯೋಚಿಸುವುದೂ ಪಾಪವೇ ತಾನೆ? ನಾನು ಮಾಡಿರುವ ಪಾಪಕ್ಕೆ ಪ್ರಾಯಶ್ಚಿತ್ತದ ರೂಪದಲ್ಲಿ ಈಗ ಮೂಕ ಮಕ್ಕಳಿಗೆ ಮಾತು ಕಲಿಸುವ ಕೆಲ್ಸ ಮಾಡ್ತಾ ಇದ್ದೇನೆ…’

-ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next