Advertisement

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

03:34 PM Nov 08, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ವಕ್ಫ್ ಆಸ್ತಿ ವಿವಾದ ಈಗ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇದು ಬಾಗಲಕೋಟೆ ಜಿಲ್ಲೆಗೂ ವ್ಯಾಪಿಸಿದ್ದು, ಸರಕಾರಿ ಕಚೇರಿಗಳು, ವಸತಿ ನಿಲಯಗಳು, ಆಶ್ರಯ ಯೋಜನೆ ಮನೆಗಳು, ಮಿನಿ ವಿಧಾನಸೌಧ, ನೀರಾವರಿ ಕಚೇರಿಗಳೂ ವಕ್ಫ್ ಆಸ್ತಿ ಎಂದು ದಾಖಲೀಕರಿಸಲಾಗಿದೆ.

Advertisement

ಹೌದು, ವಕ್ಫ್ ಬೋರ್ಡ್‌ ನೋಟಿಸ್‌ ಕುರಿತು ವಿಜಯಪುರದಲ್ಲಿ ಆಹೋರಾತ್ರಿ ಹೋರಾಟ ನಡೆದಿದ್ದು, ಜಿಲ್ಲೆಯ ಕೆಲ ನಾಯಕರು, ರೈತ ಮುಖಂಡರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಜತೆಗೆ ಜಿಲ್ಲೆಯ ರೈತರು, ತಮ್ಮ ತಮ್ಮ ಆಸ್ತಿಯ ಪಹಣಿ ಪರಿಶೀಲಿಸುವಂತೆ ಬಿಜೆಪಿ ಕರೆ ನೀಡಿದ್ದು, ರೈತರು, ಭೂಮಿ ಕೇಂದ್ರಗಳತ್ತ ದೌಡಾಯಿಸುತ್ತಿದ್ದಾರೆ. ಮತ್ತೂಂದೆಡೆ ಸರ್ಕಾರಿ ಕಚೇರಿಗಳೇ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ದಾಖಲಾಗಿರುವುದು ಬಹಿರಂಗವಾಗಿದೆ.

1200 ಆಶ್ರಯ ಮನೆಗಳು: ಬಾಗಲಕೋಟೆ ತಾಲೂಕಿನ ಶಿರೂರ ಪಟ್ಟಣದ ಮೊರಾರ್ಜಿ ವಸತಿ ಶಾಲೆ, ಪಕ್ಕದಲ್ಲಿನ ಬಾಲಕಿಯರ ವಸತಿ ಶಾಲೆ, ಸುಮಾರು 1200 ಆಶ್ರಯ ಮನೆಗಳು, ಹೆಸ್ಕಾಂ ಕಚೇರಿ, ಬಾದಾಮಿಯ ಮಿನಿ ವಿಧಾನಸೌಧ, ಮಲಪ್ರಭಾ ಬಲದಂಡೆ ಕಾಲುವೆ (ಎಂಎಲ್‌ಬಿಸಿ) ಕಚೇರಿಯ ಕಟ್ಟಡಗಳು ಹೀಗೆ ವಿವಿಧ ಸರ್ಕಾರಿ ಕಚೇರಿಗಳ ಜಾಗ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದಾಗಿವೆ.

ಬಾದಾಮಿ ಪಟ್ಟಣದ ಸರ್ವೇ ನಂ: 192ರಲ್ಲಿನ ನಿರ್ಮಾಣ ಹಂತದ ಮಿನಿ ವಿಧಾನಸೌಧ ಕಟ್ಟಡ, ಮಲಪ್ರಭಾ ಎಡದಂಡೆ ಕಾಲುವೆ ಇಂಜಿನಿಯರಿಂಗ್‌ ವಿಭಾಗದ ಕಚೇರಿ ಜಾಗದ ಪಹಣಿಯಲ್ಲಿ ವಕ್ಫ್ ಎಂದು ಹೆಸರು ನಮೂದಾಗಿದೆ. ಕಾಲಂ ನಂ 9 ರಲ್ಲಿ
ಸ್ವಾಧೀನದಾರರು, ಕಬ್ಜೆದಾರರು ಎಂದು ದಾಖಲಾಗಿದೆ. ಇನ್ನು ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದ ಸರ್ವೆ ನಂ:92 ರಲ್ಲಿ ಬರುವ 54 ಎಕರೆ 2 ಗುಂಟೆ ಜಾಗ ವಕ್ಫ್ ಆಸ್ತಿ ಎಂದು ಇಸ್ಲಾಮಿಯಾ ತಂಜೀಮ್‌ ಕಮೀಟಿ ವಾದ ಮಾಡುತ್ತಿದೆ. ಈ ಸರ್ವೆ ನಂಬರ್‌ನಲ್ಲಿ ಹೆಸ್ಕಾಂ, ಮೊರಾರ್ಜಿ ವಸತಿ ಶಾಲೆ, ಡಾ|ಅಂಬೇಡ್ಕರ್‌ ಬಾಲಕಿಯರ ವಸತಿ ಶಾಲೆ, 1200 ಆಶ್ರಯ ಯೋಜನೆ ಮನೆಗಳಿವೆ. ಇವು ವಕ್ಫ್ ಆಸ್ತಿದ್ದು, ಈ ಜಾಗೆ ತೆರವುಗೊಳಿಸಿ ಎಂದು ವಕ್ಫ್ ಇಸ್ಲಾಮಿಯಾ ತಂಜೀಮ್‌ ಕಮೀಟಿ, ಜಿಲ್ಲಾಧಿಕಾರಿ ಹಾಗೂ ವಕ್ಫ್ ಬೋರ್ಡ್‌ಗೆ ಅರ್ಜಿ ಸಲ್ಲಿಸಿದೆ.

ಆತಂಕಗೊಂಡ ಜನ: ಶಿರೂರಿನ 1200ಕ್ಕೂ ಹೆಚ್ಚು ಆಶ್ರಯ ಮನೆಗಳ ಆಸ್ತಿ ನಮ್ಮದು ಎಂದು ವಕ್ಫ್ ಇಸ್ಲಾಮಿಯಾ ತಂಜೀಮ್‌ ಕಮೀಟಿ, ಜಿಲ್ಲಾಧಿಕಾರಿಗಳ ಕೋರ್ಟ್‌ ಎದುರು ವಾದಿಸಿದ್ದು, ಸುದೀರ್ಘ‌ ವಿಚಾರಣೆಯ ಬಳಿಕ ಕಮೀಟಿಯ ಅರ್ಜಿ ತಿರಸ್ಕೃರಿಸಲಾಗಿದೆ. ಆದರೆ, ಗ್ರಾಮಸ್ಥರಿಗೆ ನೇರವಾಗಿ ಯಾವುದೇ ನೊಟೀಸ್‌ ಬಂದಿಲ್ಲವಾದರೂ, ಈ ಜಾಗೆಯಲ್ಲಿ ಆಶ್ರಯ ಮನೆ ಕಟ್ಟಿದ ತಾ.ಪಂ. ಹಾಗೂ ಇತರ ಇಲಾಖೆಗಳಿಗೆ ನೋಟಿಸ್‌ ಬಂದಿವೆ ಎನ್ನಲಾಗಿದೆ.

Advertisement

ಹೈಕೋರ್ಟ್‌ ಮೆಟ್ಟಿಲು: ಶಿರೂರಿನ ಯಾವುದೇ ಮನೆ ಉತಾರದಲ್ಲಿ ಎಲ್ಲೂ ವಕ್ಫ್ ಎಂದು ನಮೂದಾಗಿಲ್ಲ. ಆದರೆ ಇಸ್ಲಾಮಿಯಾ ತಂಜೀಮ್‌ ಕಮೀಟಿ 54 ಎಕರೆ ಜಾಗೆ ವಕ್ಫ್ ಆಸ್ತಿ ವಕ್ಫ್ ತನ್ನ ಸುಪರ್ಧಿಗೆ ತೆಗೆದುಕೊಂಡು ನಮಗೆ ನೀಡಬೇಕೆಂದು ಡಿಸಿ ,ತಾಪಂ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದೆ. ತಾಪಂನಿಂದ 2023 ರ ಅವಧಿಯಲ್ಲಿ ನೊಟೀಸ್‌ ಬಂದಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಇನ್ನು ಈ ವಿವಾದ ಧಾರವಾಡ ಹೈಕೋರ್ಟ್‌ಗೆ ಹೋಗಿದ್ದು ಅಲೆದಾಟ ಶುರುವಾಗಿದೆ. ಸರಕಾರ, ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ನಮಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇಸ್ಲಾಮಿಯಾ ತಂಜೀಮ್‌ ಕಮೀಟಿ ಮನವಿಯಂತೆ ವಕ್ಫ್ ಎಂದು ಉಲ್ಲೇಖ ಮಾಡಲು ಹೊರಟರೆ, ನಾವು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಶಿರೂರ ಪಟ್ಟಣದ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಡಳಿತ ಕೂಡಲೇ ಮಧ್ಯೆ ಪ್ರವೇಶಿಸಿ, ವಕ್ಫ್ ಆಸ್ತಿ ಎಂಬ ಆತಂಕ-ಗೊಂದಲ ದೂರು ಮಾಡಬೇಕು. ನಾವು ಯಾವುದೇ ಕಾರಣಕ್ಕೂ ಆಸ್ತಿ ಬಿಡಲು ಸಾಧ್ಯವಿಲ್ಲ. ತಕ್ಷಣ ಕ್ರಮ ಕೈಗೊಳ್ಳಲಿದ್ದರೆ, ನಾವು ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧರಿದ್ದೇವೆ.
●ಯಲ್ಲಪ್ಪ ಭಗವತಿ,
ಶಿರೂರ ಪಟ್ಟಣದ ನಿವಾಸಿ

ಬಾದಾಮಿ ತಾಲೂಕಿನ ನೀರಬೂದಿಹಾಳದಲ್ಲಿ ಹಲವಾರು ವರ್ಷಗಳಿಂದ ಹಿಂದೂ ರುದ್ರಭೂಮಿ ಇದೆ. ಅದರ ಪಹಣಿಯಲ್ಲೂ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಸರ್ಕಾರ, ಈ ವಕ್ಫ್ ನೋಟಿಸ್‌ ಹಿಂದಕ್ಕೆ ಪಡೆಯುವುದಾಗಿ ಮಾತ್ರ ಹೇಳಿದೆ. ಎಲ್ಲ ಪಹಣಿಗಳೂ ತಿದ್ದುಪಡಿಯಾಗಬೇಕು. ಇಂದೇ ಒಂದು ಇಂಚು ಜಾಗೆಯೂ ವಕ್ಫ್‌ ಗೆ ಬಿಟ್ಟುಕೊಡಲು ಸಾಧ್ಯವಿಲ್ಲ.
●ಬಸವರಾಜ ಯಂಕಂಚಿ,
ವಿಭಾಗ ಸಹ ಪ್ರಭಾರಿ, ಬಿಜೆಪಿ

■ ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next