ರಿಯಾಯಿತಿ ಬೆಲೆಯಲ್ಲಿ ಜನರಿಗೆ ಅಕ್ಕಿ, ಗೋಧಿ ಹಿಟ್ಟು, ಬೇಳೆಕಾಳು ಸಹಿತ ಆಹಾರ ಧಾನ್ಯಗಳನ್ನು ವಿತರಿಸುವ ತನ್ನ ಬಲು ಮಹತ್ವಾಕಾಂಕ್ಷೆಯ “ಭಾರತ್ ಬ್ರ್ಯಾಂಡ್’ ಯೋಜನೆಯನ್ನು ದೇಶಾದ್ಯಂತ ಎಲ್ಲ ಸೂಪರ್ ಬಜಾರ್ ಮತ್ತು ಸಾಮಾನ್ಯ ಕಿರಾಣಿ ಅಂಗಡಿಗಳಿಗೂ ವಿಸ್ತರಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಸದ್ಯ ಭಾರತ್ ಬ್ರ್ಯಾಂಡ್ನಡಿ ಪೂರೈಸಲಾಗುವ ಆಹಾರ ಧಾನ್ಯಗಳ ಮಾರಾಟಕ್ಕಾಗಿ ಅಂಗಡಿಯವರಿಗೆ ಕಮಿಷನ್ ನಿಗದಿಪಡಿಸುವ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಇದು ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ. ಇದೇ ವೇಳೆ ಆನ್ಲೈನ್ ಮೂಲಕ ಭಾರತ್ ಬ್ರ್ಯಾಂಡ್ನ ಆಹಾರ ಧಾನ್ಯಗಳನ್ನು ಖರೀದಿಸಲು ಜನರಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಸರ್ಕಾರದ ಉದ್ದೇಶಿತ ಯೋಜನೆ ನಿರೀಕ್ಷೆಯಂತೆ ಕಾರ್ಯರೂಪಕ್ಕೆ ಬಂದದ್ದೇ ಆದಲ್ಲಿ ಜನಸಾಮಾನ್ಯರ ಮೇಲಣ ಬೆಲೆ ಏರಿಕೆಯ ಹೊರೆ ಕಡಿಮೆ ಯಾಗಲಿದೆ.
ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಹಿಟ್ಟು ಮತ್ತು ಅಕ್ಕಿಯ ಬೆಲೆ ವಿಪರೀತ ಏರಿಕೆ ಕಂಡಾಗ ಕೇಂದ್ರ ಸರಕಾರ ಬೆಲೆ ಸ್ಥಿರೀಕರಣ ನಿಧಿಯನ್ನು ಬಳಸಿ, ಈ ಭಾರತ್ ಬ್ರ್ಯಾಂಡ್ ಯೋಜನೆಯನ್ನು ಪರಿಚಯಿಸಿತ್ತು. ನಿರ್ದಿಷ್ಟ ತೂಕದ ಪ್ಯಾಕೆಟ್ಗಳಲ್ಲಿ ಮುಕ್ತ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಅಕ್ಕಿ ಮತ್ತು ಗೋಧಿ ಹಿಟ್ಟನ್ನು ಭಾರತ್ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಸರಕಾರಕ್ಕೆ ಗ್ರಾಹಕರ ಬೇಡಿಕೆಗೆ ತಕ್ಕಷ್ಟು ಆಹಾರಧಾನ್ಯಗಳ ಪೂರೈಕೆ ಕಷ್ಟಸಾಧ್ಯವಾಗಿ ಪರಿಣಮಿಸಿತ್ತು. ಈ ಯೋಜನೆಯ ಯಶಸ್ಸಿನಿಂದ ಪ್ರೇರಣೆ ಪಡೆದು ಈಗ ಭಾರತ್ ಬ್ರ್ಯಾಂಡ್ನಡಿ ಅಕ್ಕಿ, ಗೋಧಿಹಿಟ್ಟು, ಕಡಲೆ, ಹೆಸರು ಸಹಿತ ವಿವಿಧ ಬೇಳೆಕಾಳುಗಳನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾರಂಭಿಸಿದೆ. ಮುಕ್ತ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ ವಾಗು ತ್ತಿರುವ ಭಾರತ್ ಬ್ರ್ಯಾಂಡ್ನ ಆಹಾರಧಾನ್ಯಗಳಿಗೆ ಬೇಡಿಕೆ ವ್ಯಕ್ತವಾಗುತ್ತಿದೆ.
ಕಿರಾಣಿ ಅಂಗಡಿಗಳಿಗೂ ಭಾರತ್ ಬ್ರ್ಯಾಂಡ್ನಡಿ ಆಹಾರ ಧಾನ್ಯಗಳನ್ನು ಪೂರೈಸುವ ಕೇಂದ್ರದ ನಿರ್ಧಾರ ಬಡ ಮತ್ತು ಜನಸಾಮಾನ್ಯರಿಗೆ ಅತ್ಯಂತ ಸಂತಸ ತಂದಿದೆ. ಈ ನಿರ್ಧಾರ ವಸ್ತುಶಃ ಕಾರ್ಯಾನುಷ್ಠಾನಗೊಂಡದ್ದೇ ಆದಲ್ಲಿ ಭಾರತ್ ಬ್ರ್ಯಾಂಡ್ನ ಆಹಾರಧಾನ್ಯಗಳಿಗಾಗಿ ಜನರು ಕಿರಾಣಿ ಅಂಗಡಿಗಳಿಗೆ ಮುಗಿ ಬೀಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಭಾರತ್ ಬ್ರ್ಯಾಂಡ್ನಡಿಯಲ್ಲಿ ಭಾರೀ ಪ್ರಮಾಣದಲ್ಲಿ ಆಹಾರಧಾನ್ಯಗಳನ್ನು ಮಾರುಕಟ್ಟೆಗೆ ಪೂರೈಸುವ ವ್ಯವಸ್ಥೆಯನ್ನು ಮಾಡಬೇಕು. ಗ್ರಾಹಕರ ಬೇಡಿಕೆಗೆ ತಕ್ಕಷ್ಟು ಆಹಾರ ಧಾನ್ಯಗಳನ್ನು ಪೂರೈಸಲು ಸರಕಾರಕ್ಕೆ ಸಾಧ್ಯವಾಗದಿದ್ದಲ್ಲಿ ಸರಕಾರದ ಉದ್ದೇಶವೇ ನಿರರ್ಥಕವಾದೀತು. ಹೀಗಾಗಿ ಈ ಬಾರಿ ಸರಕಾರ ಹೆಚ್ಚಿನ ಪೂರ್ವ ತಯಾರಿ ಮಾಡಿಕೊಳ್ಳಬೇಕು.
ಭಾರತ್ ಬ್ರ್ಯಾಂಡ್ನಡಿ ಲಭ್ಯವಿರುವ ಆಹಾರಧಾನ್ಯಗಳು ಮತ್ತು ಬೇಳೆಕಾಳು ಗಳನ್ನು ಸಾಕಷ್ಟು ಪ್ರಮಾಣದಲ್ಲಿ ತನ್ನ ಗೋದಾಮುಗಳಲ್ಲಿ ದಾಸ್ತಾನಿರಿಸಿಕೊಳ್ಳುವ ಮೂಲಕ ಮಾರಾಟದ ಸಂದರ್ಭದಲ್ಲಿ ಪೂರೈಕೆ ಕೊರತೆಯ ಸಮಸ್ಯೆ ಕಾಡದಂತೆ ಎಚ್ಚರ ವಹಿಸಬೇಕು. ಸಾಧ್ಯವಾದಷ್ಟು ರೈತರಿಂದ ನೇರ ಖರೀದಿಸಿದಲ್ಲಿ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಲಭಿಸಲು ಸಾಧ್ಯ. ಇನ್ನು ಸೂಪರ್ ಬಜಾರ್ ಮತ್ತು ಕಿರಾಣಿ ಅಂಗಡಿಗಳಿಗೆ ಈ ರಿಯಾಯಿತಿ ಬೆಲೆಯ ಆಹಾರಧಾನ್ಯಗಳನ್ನು ಮಾರುಕಟ್ಟೆಗೆ ಪೂರೈಕೆ ಮಾಡಲಾಗುತ್ತಿರುವುದರಿಂದ ಇದು ಕಾಳಸಂತೆಕೋರರು ಮತ್ತು ಮಧ್ಯ ವರ್ತಿಗಳ ಪಾಲಾಗದಂತೆ ಸರಕಾರ ನಿಗಾ ಇರಿಸಬೇಕು. ಇದೇ ವೇಳೆ ಭಾರತ್ ಬ್ರ್ಯಾಂಡ್ನ ಆಹಾರಧಾನ್ಯಗಳು ಸರಕಾರ ನಿಗದಿಪಡಿಸಿದ ಬೆಲೆಯಲ್ಲಿಯೇ ಗ್ರಾಹಕರಿಗೆ ಲಭಿಸುವುದನ್ನು ಖಾತರಿಪಡಿಸುವ ಹೊಣೆಗಾರಿಕೆಯೂ ಇಲಾಖೆ ಮೇಲಿದೆ. ಇವೆಲ್ಲದರತ್ತ ಕೇಂದ್ರ ಸರಕಾರ ಲಕ್ಷ್ಯ ಹರಿಸಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದಲ್ಲಿ ಮಾತ್ರವೇ ಜನಸಾಮಾನ್ಯರಿಗೆ ರಿಯಾಯಿತಿ ಬೆಲೆಯಲ್ಲಿ ಆಹಾರ ಧಾನ್ಯ ಪೂರೈಸುವ ಯೋಜನೆ ಸಾರ್ಥಕಗೊಳ್ಳಲು ಸಾಧ್ಯ.