Advertisement

ಪತ್ನಿಯನ್ನು ಕೊಲ್ಲಲು ಅಸ್ಸಾಂನಿಂದ ಚಾಕು ತಂದಿದ್ದ ಪತಿ!

08:44 AM Jul 10, 2021 | Team Udayavani |

ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಅಸ್ಸಾಂನಿಂದ ಬಂದು ಆಕೆಯ ಕೊಲೆಗೆ ಯತ್ನಿಸಿದ ಆರೋಪಿಯನ್ನು ಮಾರತ್ತಹಳ್ಳಿ ಪೊಲೀಸರು 24 ಗಂಟೆಯಲ್ಲೇ ಬಂಧಿಸಿದ್ದಾರೆ.

Advertisement

ಅಸ್ಸಾಂ ಮೂಲದ ಭುಜ್ರತ್‌ ಅಲಿ (34) ಬಂಧಿತ. ಆರೋಪಿ ಗುರುವಾರ ತಡರಾತ್ರಿ ಪತ್ನಿ ಅನ್ವರಾ ಬೇಗಂ ಮುಖಕ್ಕೆ ಇರಿದು ಪರಾರಿಯಾಗಿದ್ದ. ನಂತರ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಮಾರತಹಳ್ಳಿ ‌ ಪೊಲೀಸರು ಶುಕ್ರವಾರ ಸಂಜೆ ಕೆ.ಆರ್‌.ಪುರ ರೈಲ್ವೆ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಸ್ಸಾಂ ಮೂಲದ ಭಜ್ರತ್‌ ಅಲಿ 14 ವರ್ಷಗಳ ಹಿಂದೆ ಅನ್ವರಾ ಬೇಗಂಳನ್ನು ಮದುವೆಯಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ. ಅಸ್ಸಾಂನಲ್ಲಿಯೇ ದಂಪತಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಈ ಮಧ್ಯೆ ಆರೋಪಿ ವಿಪರೀತ ಮದ್ಯ ವ್ಯಸನಿಯಾಗಿದ್ದು, ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ.

ಮತ್ತೂಂದೆಡೆ ಪತ್ನಿ ಅನ್ವರಾ ಬೇಗಂಗೆ ಮತ್ತೂಬ್ಬ ವ್ಯಕ್ತಿಯ ಪರಿಚಯವಾಗಿದ್ದು, ಆತನ ಜತೆ ಹೆಚ್ಚು ಸಲುಗೆಯಿಂದ ಇದ್ದಳು ಎಂದು ಹೇಳಲಾಗಿದೆ. ಈ ವಿಚಾರ ತಿಳಿದ ಆರೋಪಿ, ಮದ್ಯದ ಅಮಲಿನಲ್ಲಿ ಆಕೆಗೆ ನಿತ್ಯ ಹಲ್ಲೆ ನಡೆಸುತ್ತಿದ್ದ. ಅದರಿಂದ ಬೇಸತ್ತಿದ್ದ ಬೇಗಂ, ಪತಿಯಿಂದ ದೂರವಾಗಲು ನಿರ್ಧರಿಸಿದ್ದಳು.

ಇದನ್ನೂ ಓದಿ:ಪ್ರವಾಸಿ ತಾಣಗಳಲ್ಲಿ ಹೆಚ್ಚುತ್ತಿರುವ ಜನ, ನಿಯಮಗಳತ್ತ ನಿರ್ಲಕ್ಷ್ಯ : 3ನೇ ಅಲೆಗೆ ಆಹ್ವಾನ?

Advertisement

ಈ ನಡುವೆ ಆಕೆಯ ಸ್ನೇಹಿತ ಕೆಲಸ ಅರಸಿ ಬೆಂಗಳೂರಿಗೆ ಹೋಗುತ್ತಿದ್ದು, ತನ್ನೊಂದಿಗೆ ಬರುವಂತೆ ಕೇಳಿಕೊಂಡಿದ್ದ. ಆದರೆ, ಈ ವಿಚಾರ ಪತಿ ಭುಜ್ರತ್‌ ಅಲಿಗೆ ತಿಳಿದಿರಲಿಲ್ಲ. ಪತಿಯ ದೌರ್ಜನ್ಯದಿಂದ ಆಕ್ರೋಶಗೊಂಡಿದ್ದ ಬೇಗಂ, ಪತಿಗೆ ಬೆಂಗಳೂರಿಗೆ ಕೆಲಸಕ್ಕೆಂದು ಹೋಗುತ್ತಿದ್ದು,ಕೆಲ ದಿನಗಳ ಬಳಿಕ ನಿನ್ನನ್ನುಕರೆಸಿಕೊಳ್ಳುತ್ತೇನೆ ಎಂದು ಮಕ್ಕಳ ಜತೆ ಬೆಂಗಳೂರಿಗೆ ಬಂದು ಮಾರತ್ತಹಳ್ಳಿಯ ಶೆಡ್‌ವೊಂದರಲ್ಲಿ ವಾಸವಾಗಿದ್ದು, ಹೌಸ್‌ ಕಿಂಪಿಂಗ್‌ ಕೆಲಸ ಮಾಡಿಕೊಂಡಿದ್ದಳು. ಆದರೆ, ಪತಿಗೆ ಈ ವಿಚಾರ ತಿಳಿಸಿರಲಿಲ್ಲ. ಹೀಗಾಗಿ ಆರೋಪಿ, ಪತ್ನಿಯ ಸಂಬಂಧಿಕರಿಗೆ ಆಕೆಯ ವಿಳಾಸ ನೀಡುವಂತೆ ಕೇಳಿದ್ದಾನೆ. ಆದರೆ, ಈತನ ದೌರ್ಜನ್ಯ ಕಂಡಿದ್ದ ಯಾರು ವಿಳಾಸ ನೀಡಿರಲಿಲ್ಲ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಊರಿನ ಮುಖ್ಯಸ್ಥರ ಮಧ್ಯಸ್ಥಿಕೆ: ಬಳಿಕ ಆರೋಪಿ ತನ್ನ ಊರಿನಲ್ಲಿ ಪಂಚಾಯಿತಿ ಕರೆದು ಮುಖ್ಯಸ್ಥ ರಿಗೆ ತನ್ನ ಪತ್ನಿಯ ವಿಳಾಸ, ಮೊಬೈಲ್‌ ನಂಬರ್‌ ಕೊಡಿಸಿ, ಆಕೆ ಜತೆ ಸಂಸಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಿದ್ದ. ಕೆಲ ದಿನಗಳ ಬಳಿಕ ಊರಿನ ಮುಖ್ಯಸ್ಥರು ಆಕೆಯ ಬೆಂಗಳೂರು ವಿಳಾಸ ಕೊಟ್ಟಿದ್ದರು. ಈ ಸಂಬಂಧ ಒಂದೂವರೆ ತಿಂಗಳ ಹಿಂದೆ ಪತ್ನಿಯನ್ನು ಹುಡುಕಿಕೊಂಡು ಬಂದಿದ್ದ ಆರೋಪಿ, ಆಕೆಯ ಮನವೊಲಿಸಿ ಇಲ್ಲಿಯೇ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಆರೋಪಿ, ಪತ್ನಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಆದರೆ, ಪತ್ನಿ ಬೇಗಂ ನಿರಾಕರಿಸಿದ್ದಳು ಎಂದು ಹೇಳಲಾಗಿದೆ. ಅದರಿಂದ ಮತ್ತೆ ಆಕ್ರೋಶಗೊಂಡಿದ್ದ ಆರೋಪಿ, ಮದ್ಯ ಸೇವಿಸಿ ಮತ್ತೆ ಜಗಳ ಆರಂಭಿಸಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಅಸ್ಸಾಂನಲ್ಲೇ ಚಾಕು ಖರೀದಿ: ಅಸ್ಸಾಂನಲ್ಲೇ ಪತ್ನಿಯ ಕೊಲೆಗೆ ನಿರ್ಧರಿಸಿದ್ದ ಆರೋಪಿ ಅಲ್ಲಿಯೇ ಚಾಕುವೊಂದನ್ನು ಖರೀದಿಸಿದ್ದಾನೆ. ಅದನ್ನು ಯಾವಾಗಲೂ ತನ್ನೊಂದಿಗೆ ಇಟ್ಟುಕೊಂಡಿದ್ದ. ಗುರುವಾರ ತಡರಾತ್ರಿ1 ಗಂಟೆ ಸುಮಾರಿಗೆ ಪತ್ನಿಗೆ ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಕೇಳಿದ್ದಾನೆ. ಆಗಲೂ ಆಕೆ ನಿರಾಕಸಿದಾಗ ಚಾಕುವಿನಿಂದ ಆಕೆಯ ಮುಖಕ್ಕೆ ಚುಚ್ಚಿದ್ದಾನೆ. ತೀವ್ರ ರಕ್ತಸ್ರಾವವಾದಿಂದ ಆಕೆ ಕೆಳಗೆ ಬಿದ್ದ ಕೂಡಲೇ ಪತ್ನಿ ಸತ್ತಿದ್ದಾಳೆ ಎಂದು ಭಾವಿಸಿ ಸ್ಥಳದಿಂದ ಅರೆ ಬೆತ್ತಲಾಗಿ ಪರಾರಿಯಾಗಿದ್ದಾನೆ. ಮುಂಜಾನೆ ಐದು ಗಂಟೆ ಸುಮಾರಿಗೆ ಪೊಲೀಸರಿಗೆ ವಿಚಾರ ತಿಳಿದು ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ.

ಗಾಯಗೊಂಡಿದ್ದ ಬೇಗಂನನ್ನು  ಆಸ್ಪತ್ರೆಗೆ ದಾಖಲಿಸಿ ಆಕೆಯನ್ನು ವಿಚಾರಣೆ ನಡೆಸಿದಾಗ ಪತಿಯೇ ಕೃತ್ಯ ಎಸಗಿದ್ದಾನೆ ಎಂದು ಆತನ ಮೊಬೈಲ್‌ ನಂಬರ್‌ಕೊಟ್ಟಿದ್ದಳು. ಆದರೆ, ಅದು ಸ್ವಿಚ್ಡ್ ಆಫ್ ಆಗಿತ್ತು. ಬಳಿಕ ಮೊಬೈಲ್‌ನಲ್ಲಿ ಆತನ ಫೋಟೋ ಸಿಗುತ್ತಿದ್ದಂತೆ ಎಲ್ಲೆಡೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಆರೋಪಿ ಕೃತ್ಯ ಎಸಗಿ ಅರೆಬೆತ್ತಲಾಗಿ ಪರಾರಿಯಾಗಿದ್ದು, ಸಮೀಪದ ಮಾರುಕಟ್ಟೆಗೆ ಹೋಗಿ ಒಂದು ಟೀ ಶರ್ಟ್‌ಖರೀದಿಸಿ ಹಾಕಿಕೊಂಡು ನೇರವಾಗಿ ಕೆ.ಆರ್‌.ಪುರಂ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾನೆ. ಅದೇ ವೇಳೆ ಪೊಲೀಸರ ವಿಚಾರಣೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಕೆ.ಆರ್‌.ಪುರಂ ಕಡೆ ಹೋಗುತ್ತಿರುವ ಮಾಹಿತಿ ನೀಡಿದ್ದರು. ಕೂಡಲೇ ರೈಲ್ವೆ ನಿಲ್ದಾಣದಲ್ಲಿ ಶೋಧಿಸಿದಾಗ ಅಸ್ಸಾಂ ತೆರಳಲು ಟಿಕೆಟ್‌ ಖರೀದಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಕ್ರಮ ಸಂಬಂಧ: ಕೊಲೆ ಯತ್ನ?: ಆರೋಪಿಯ ವಿಚಾರಣೆಯಲ್ಲಿ ಆಕೆಗೆ ಪರಪುರುಷನ ಜತೆ ಅಕ್ರಮ ಸಂಬಂಧ ಇತ್ತು. ಹೀಗಾಗಿ ಆಕೆಯನ್ನು ಕೊಲೆಗೈಯಲು ಅಸ್ಸಾಂನಿಂದ ಬಂದಿದ್ದೆ ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಮತ್ತೂಂದೆಡೆ ಪತ್ನಿ ಬೇಗಂಕೂಡ ಆತನ ಜತೆ ಜೀವನ ನಡೆಸಲು ಇಷ್ಟವಿಲ್ಲದರಿಂದ ಹೊಸ ಜೀವನ ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದೆ ಎಂದಿದ್ದಾಳೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next