ಲಾಹೋರ್: ತನ್ನ ಪತ್ನಿಯನ್ನು ಬ್ಲಾಕ್ಮೇಲ್ ಮಾಡಿ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯಿಸಿದ ಆರೋಪದ ಮೇಲೆ ಪತಿ ಕುಪಿತನಾಗಿ ಪೊಲೀಸ್ ಪೇದೆಯ ಮೂಗು, ಕಿವಿ ಮತ್ತು ತುಟಿಗಳನ್ನು ಕತ್ತರಿಸಿರುವ ಪೈಶಾಚಿಕ ಘಟನೆ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ ಸೋಮವಾರ ನಡೆದಿದೆ.
ಲಾಹೋರ್ನಿಂದ ಸುಮಾರು 200 ಕಿಮೀ ದೂರದಲ್ಲಿರುವ ಜಾಂಗ್ ಜಿಲ್ಲೆಯಲ್ಲಿ ಭಾನುವಾರ ಮುಹಮ್ಮದ್ ಇಫ್ತಿಕರ್ ಎಂಬ ಪ್ರಮುಖ ಆರೋಪಿ ತನ್ನ ಸಹಚರರೊಂದಿಗೆ ಮೂಗು, ಕಿವಿ ಮತ್ತು ತುಟಿಗಳನ್ನು ಕತ್ತರಿಸುವ ಮೊದಲು ಕಾನ್ಸ್ಟೆಬಲ್ ಖಾಸಿಂ ಹಯಾತ್ಗೆ ತೀವ್ರ ಚಿತ್ರಹಿಂಸೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ಹಯಾತ್ ತನ್ನ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ ಇಫ್ತಿಕರ್, 12 ಸಹಚರರೊಂದಿಗೆ ಸೇರಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಆತನನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ತೀವ್ರ ಚಿತ್ರಹಿಂಸೆ ನೀಡಿ ಆತನ ದೇಹದ ಭಾಗಗಳನ್ನು ಕತ್ತರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾನ್ಸ್ಟೆಬಲ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.
ಕಳೆದ ತಿಂಗಳು, ಪಾಕಿಸ್ಥಾನ ದಂಡ ಸಂಹಿತೆಯ ಮಹಿಳೆಯ ಮೇಲೆ ಹಲ್ಲೆ, ಸುಲಿಗೆ, ಅಶ್ಲೀಲತೆ ಅಡಿಯಲ್ಲಿ ಕಾನ್ಸ್ಟೆಬಲ್ ಹಯಾತ್ ವಿರುದ್ಧ ಇಫ್ತಿಕರ್ ಪ್ರಕರಣ ದಾಖಲಿಸಿದ್ದ.
ಹಯಾತ್ ತನ್ನ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ, ತನ್ನ ಹೆಂಡತಿಯನ್ನು ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದ ಎಂದು ಇಫ್ತಿಕರ್ ಹೇಳಿಕೊಂಡಿದ್ದಾನೆ. ಹಯಾತ್ ನನ್ನು ತನ್ನ ಪತ್ನಿ ಭೇಟಿಯಾದಾಗ ದೇಹ ಸಂಬಂಧ ನಡೆಸುವಂತೆ ಬಲವಂತಪಡಿಸಿದ್ದ ಮತ್ತು ಆತ ಕೃತ್ಯದ ವಿಡಿಯೋ ಮಾಡಿ ನಂತರ ಆಕೆಗೆ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದ ಎಂದು ಇಫ್ತಿಕರ್ ಹೇಳಿಕೊಂಡಿದ್ದ.