ಸೇಡಂ: ಅದೊಂದು ತೀರಾ ಬಡ ಕುಟುಂಬ. ತಂದೆ ಕಂಪ್ಯೂಟರ್ ತರಬೇತಿ ಕೆಲಸ ಮಾಡುತ್ತಾ, ತನ್ನಿಬ್ಬರು ಹೆಣ್ಣು ಮಕ್ಕಳನ್ನು ಸಾಕುತ್ತಿರುವ ಹೊತ್ತಿಗೆ ದೊಡ್ಡ ಮಗಳಿಗೆ ಕ್ರಿಕೆಟ್ ಪ್ರೀತಿ ಜೋರಾಗಿತ್ತು. ಪ್ರತೀ ರಜಾದಿನ ಯುವಕರೊಂದಿಗೆ ಸೇರಿ ಕ್ರಿಕೆಟ್ ಆಟ ಆಡುವಷ್ಟು ಈ ಕ್ರೀಡೆಯಲ್ಲಿ ಆಸಕ್ತಿ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ, ಮದುವೆ ಮಾಡಿ ಮುಗಿಸುವುದು ಬಹುತೇಕ ತಂದೆಯಂದಿರ ಸ್ವಭಾವ. ಆದರೆ ಈ ತಂದೆ ಮಗಳ ಕ್ರಿಕೆಟ್ ಪ್ರೀತಿಯನ್ನು ನೋಡಿ, ಇರುವ ಉತ್ತಮ ನೌಕರಿ, ಊರು ಬಿಟ್ಟು ದೂರದ ಹೈದರಾಬಾದ್ ಸೇರಿದರು! ಅದೂ ಮಗಳ ಕ್ರಿಕೆಟ್ ಪ್ರಗತಿಗಾಗಿ.
ಇದು ಎಲ್ಲೋ ಬೆಂಗಳೂರು, ಮಂಗಳೂರಿನ ಕಥೆಯಲ್ಲ. ಇದು ಕಲ್ಲಿನ ನಗರಿ, ಕಲ್ಯಾಣ ನಾಡಿನ ಸೇಡಂ ತಾಲೂಕಿನ ಕೋಲಕುಂದಾ ಗ್ರಾಮದ ಯುವತಿಯ ಕಥೆ.
ತೆಲುಗನ್ನಡದ ಗ್ರಾಮದ ನಿವಾಸಿ ವೀರೇಶ, ಭಾಗ್ಯ ಮಡಿವಾಳ ದಂಪತಿಯ ಮಗಳು ಮಮತಾ. ಈಕೆ ಈಗ ಭಾರತೀಯ 19 ವಯೋಮಿತಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಗ್ರಾಮಕ್ಕೂ ಕೀರ್ತಿ ತಂದಿದ್ದಾಳೆ. ಅಲ್ಲದೇ 16 ವಯೋಮಿತಿ ತಂಡದಲ್ಲಿ ನಾಲ್ಕು ಬಾರಿ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಇದೆ. ಜೊತೆಗೆ ರಾಷ್ಟ್ರೀಯ ಪಂದ್ಯದ ವೇಳೆ ಒಂದು ಬಾರಿ ತಂಡದ ನಾಯಕಿ ಸಹ ಆಗಿದ್ದಾರೆ.
ಇದನ್ನೂ ಓದಿ:ಭಾರತ ವಿಶ್ವಕಪ್‌ನಿಂದ ಹೊರಬೀಳಲು ಕಾರಣಗಳು ಒಂದೆರಡಲ್ಲ !
ನವೆಂಬರ್‌ನಲ್ಲಿ ಜೈಪುರದಲ್ಲಿ ನಡೆಯುವ 19 ವಯೋಮಿತಿ ಪಂದ್ಯದಲ್ಲಿ ಮಮತಾ ಆಡಲಿದ್ದಾಳೆ. ಮುಂದಿನ ಡಿಸೆಂಬರ್‌ನಲ್ಲಿ ನಡೆಯುವ ವಿಶ್ವಕಪ್ ನಲ್ಲೂ ಆಕೆ ಮಿಂಚುವ ನಿರೀಕ್ಷೆಯಿದೆ. ಮಮತಾ, ರಣಜಿ ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾಳೆ ಎನ್ನುವುದನ್ನು ಇಲ್ಲಿ ಗಮನಿಸಬೇಕು.
ತಂದೆಯೇ ಶ್ರೀರಕ್ಷೆ: ಗುಲ್ಬರ್ಗ ವಿವಿಯಲ್ಲಿ ಕಂಪ್ಯೂಟರ್ ಹಾರ್ಡವೇರ್ ಶಿಕ್ಷಣ ನೀಡುತ್ತಿದ್ದ ವೀರೇಶ ಮಡಿವಾಳ, ತನ್ನ ಮಗಳಲ್ಲಿರುವ ಕ್ರಿಕೆಟ್ ಆಸಕ್ತಿ ಕಂಡು ಆರು ವರ್ಷಗಳ ಹಿಂದೆಯೇ ತನ್ನ ಸ್ವಂತ ಊರು ತಾಲೂಕಿನ ಕೋಲಕುಂದಾ ಬಿಟ್ಟು, ಹೈದ್ರಾಬಾದ್ ಸೇರಿದ್ದರು. ಉಪ್ಪಲ್ ಸ್ಟೇಡಿಯಂನಲ್ಲಿ ಮಗಳಿಗೆ ಕೋಚಿಂಗ್ ಕೊಡಿಸಿದ್ದಾರೆ. ಮಗಳನ್ನು ಎತ್ತರಕ್ಕೆ ಕೊಂಡೊಯ್ಯಬೇಕೆಂಬ ಹಂಬಲದಿಂದ ಅನೇಕ ಚಿಕ್ಕಪುಟ್ಟ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ. ಆದರೆ ಈ ವಿಷಯ ಮಗಳಿಗೆ ತಿಳಿಬಾರದೆಂಬ ಮನಸ್ಥಿತಿಯೂ ಅವರದ್ದಾಗಿದೆ. ಮುಂದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ತನ್ನ ಮಗಳು ಮಿಂಚಲಿ ಎಂಬುದು ಅವರ ಆಶಯ.
ಶಿವಕುಮಾರ ನಿಡಗುಂದಾ