ದಿನ್‌ಹಾಟಾ, ಪಶ್ಚಿಮ ಬಂಗಾಲ : ರಾಜ್ಯದ ಅಭಿವೃದ್ಧಿಗೆ ತನ್ನನ್ನು ಸ್ಪೀಡ್ ಬ್ರೇಕರ್ ಗೆ ಹೋಲಿಸಿದ ಪ್ರಧಾನಿ ನರೇಂದ್ರ ಮೋದಿಗೆ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದು “ಮೋದಿ ಎಕ್ಸ್‌ಪೈರಿ ಪಿಎಂ’ ಎಂದು ವ್ಯಂಗ್ಯವಾಡಿದ್ದಾರೆ.
ಕೂಚ್ ಬಿಹಾರ್ ಜಿಲ್ಲೆಯಲ್ಲಿ ಇಂದು ಬುಧವಾರ ಸಾರ್ವಜನಿಕ ಭಾಷಣ ಮಾಡುತ್ತಿದ್ದ ಮಮತಾ ಬ್ಯಾನರ್ಜಿ, ‘ರಾಜ್ಯದ ಜನರ ಕಲ್ಯಾಣಕ್ಕೆ ನನ್ನ ಸರಕಾರ ಹಲವಾರು ಕೆಲಸಗಳನ್ನು ಮಾಡಿದೆ; ರಾಜ್ಯದ ರೈತರ ಆದಾಯವನ್ನು ನನ್ನ ಆಡಳಿತೆಯಲ್ಲಿ ಮೂರು ಪಟ್ಟು ಏರಿಸಲಾಗಿದೆ’ ಎಂದು ಹೇಳಿದರು.
ಪ್ರಧಾನಿ ಮೋದಿಯನ್ನು ‘ಎಕ್ಸ್‌ಪೈರಿ ಬಾಬು’ ಮತ್ತು ‘ಎಕ್ಸ್‌ಪೈರಿ ಪಿಎಂ’ ಎಂದು ಲೇವಡಿ ಮಾಡಿದ ಮಮತಾ, ಮೋದಿಗೆ ಧೈರ್ಯವಿದ್ದರೆ ನನ್ನೊಂದಿಗೆ ನೇರವಾಗಿ ಟಿವಿ ಚರ್ಚೆ ನಡೆಸಲಿ ಎಂದು ಸವಾಲು ಹಾಕಿದರು.
“ನಾನು ಮೋದಿ ಅಲ್ಲ; ಆದುದರಿಂದ ನಾನು ಸುಳ್ಳು ಹೇಳುವುದಿಲ್ಲ” ಎಂದು ಗುಡುಗಿದ ಮಮತಾ, ‘ಪಶ್ಚಿಮ ಬಂಗಾಲದ ಟಿಎಂಸಿ ಸರಕಾರದ ಕಾರ್ಯ ನಿರ್ವಹಣೆ ಬಗ್ಗೆ ಪ್ರಧಾನಿ ಮೋದಿ ಸುಳ್ಳುಗಳ ಸರಮಾಲೆಯನ್ನೇ ಹೆಣೆದಿದ್ದಾರೆ’ ಎಂದು ಆರೋಪಿಸಿದರು.
ಮೋದಿ ಆಡಳಿತಾವಧಿಯಲ್ಲಿ ದೇಶದಲ್ಲಿ 12,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಮತಾ ಹೇಳಿದರು.