Advertisement

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

01:31 PM Dec 19, 2024 | Team Udayavani |

ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರ ಅಂಬೇಡ್ಕರ್‌ ಹೇಳಿಕೆ ಬಳಿಕ ಆರಂಭವಾದ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವಿನ ಹೋರಾಟ ಇದೀಗ ತಿರುವು ಪಡೆದಿದೆ. ಪ್ರತಿಭಟನೆಯ ವೇಳೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಬಿಜೆಪಿ ಸಂಸದರೊಬ್ಬರನ್ನು ತಳ್ಳಿದ್ದಾರೆ ಎಂದು ಆರೋಪಿಸಲಾಗಿದ್ದು, ಗಾಯಗೊಂಡಿರುವ ಸಂಸದರನ್ನು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ (ಡಿ.19) ನಡೆದಿದೆ.

Advertisement

ಸಂಸತ್ತಿನ ಮಕರ ದ್ವಾರದ ಬಳಿ ಈ ಘಟನೆ ನಡೆದಿದೆ. ಬಿಜೆಪಿ ಸಂಸದ ಪ್ರತಾಪ್‌ ಚಂದ್ರ ಸಾರಂಗಿ ಮತ್ತು ಮುಕೇಶ್‌ ರಾಜಪುತ್‌ ಅವರು ಗಾಯಗೊಂಡಿದ್ದಾರೆ.

ಗಾಯಗೊಂಡಿರುವ ಬಿಜೆಪಿ ಸಂಸದ ಮುಖೇಶ್ ರಜಪೂತ್ ಸ್ಥಿತಿ ಗಂಭೀರವಾಗಿದೆ. ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಸಾರಂಗಿ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪ್ರತಾಪ್ ಚಂದ್ರ ಸಾರಂಗಿ ಅವರ ತಲೆಗೆ ಗಾಯವಾಗಿದೆ. ರಾಹುಲ್‌ ಗಾಂಧಿ ಅವರು ಸಂಸದರೊಬ್ಬರನ್ನು ತಳ್ಳಿದರು. ಆ ಸಂಸದರು ನನ್ನ ಮೇಲೆ ಬಿದ್ದರು. ಇದರಿಂದ ನಾನು ಕೆಳಗೆ ಬಿದ್ದೆ. ನಾನು ಮೆಟ್ಟಿಲುಗಳ ಬಳಿ ನಿಂತಿದ್ದಾಗ ರಾಹುಲ್ ಗಾಂಧಿ ಬಂದು ನನ್ನ ಮೇಲೆ ಬಿದ್ದ ಸಂಸದರನ್ನು ತಳ್ಳಿದರು ಎಂದು ಸಾರಂಗಿ ಹೇಳಿದ್ದಾರೆ.

ಬಿಜೆಪಿ ಸಂಸದರ ಆರೋಪಗಳಿಗೆ ಪ್ರತಿಕ್ರಿಯಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿ ಸಂಸದರು ಸಂಸತ್ ಭವನದ ಪ್ರವೇಶವನ್ನು ತಡೆಯಲು ಪ್ರಯತ್ನಿಸಿದರು ಮತ್ತು ನನ್ನನ್ನು ತಳ್ಳಿದ್ದಾರೆ ಎಂದು ಆರೋಪಿಸಿದರು. “ನಾನು ಸಂಸತ್ತಿಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದೆ ಮತ್ತು ಬಿಜೆಪಿ ಸಂಸದರು ನನ್ನನ್ನು ತಡೆದರು, ನನ್ನನ್ನು ತಳ್ಳಿದರು ಮತ್ತು ನನಗೆ ಬೆದರಿಕೆ ಹಾಕಿದರು” ಎಂದು ಘಟನೆಯ ನಂತರ ರಾಹುಲ್ ಗಾಂಧಿ ಸುದ್ದಿಗಾರರಿಗೆ ತಿಳಿಸಿದರು.

Advertisement

“ಇದು ಸಂಸತ್ತಿನ ಪ್ರವೇಶ ದ್ವಾರ. ನಮಗೆ ಒಳಗೆ ಹೋಗುವ ಹಕ್ಕಿದೆ. ಆದರೆ ಬಿಜೆಪಿ ಸದಸ್ಯರು ನಮ್ಮನ್ನು ತಡೆದರು” ಎಂದು ರಾಹುಲ್‌ ಹೇಳಿದರು.

ಸಂಸತ್ತಿನ ಮಕರ ದ್ವಾರದ ಬಳಿ ಪ್ರತಿಭಟನಾ ನಿರತ ಇಂಡಿಯಾ ಬ್ಲಾಕ್ ಸಂಸದರು ಬಿಜೆಪಿ ಸಂಸದರನ್ನು ಎದುರಾದರು. ಎರಡೂ ಕಡೆಯವರು ಘೋಷಣೆಗಳನ್ನು ಕೂಗಿ, ಪರಸ್ಪರ ಬೈಯಲು ಯತ್ನಿಸಿದರು. ಸಂಸದರು ಸಂಸತ್ ಭವನದತ್ತ ತೆರಳುತ್ತಿದ್ದಂತೆ ಹೈಡ್ರಾಮಾ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next