Advertisement

ಪೂರ್ವಸಿದ್ಧತೆ ಸಾಲದೆ ಸೋಲು

06:30 AM Apr 01, 2018 | Team Udayavani |

ಮಲ್ಯಾಡಿ ಶಿವರಾಮ ಶೆಟ್ಟಿ ಅವರು ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು. ಹಿಂದಿನ ಬಾರಿ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. 1978ರಿಂದ 2013ರ ವರೆಗೆ ಕುಂಭಾಶಿ ಮಂಡಲ ಪಂಚಾಯತ್‌ ಉಪಾಧ್ಯಕ್ಷರಾಗಿ, ತೆಕ್ಕಟ್ಟೆ ಗ್ರಾ.ಪಂ.ನ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯನಾಗಿ ಸತತ 35 ವರ್ಷಗಳ ಕಾಲ ಜನಸೇವೆ ಮಾಡಿ, ಈಗ ಪಕ್ಷದ ಪದಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

Advertisement

ಹಿಂದಿನ ಚುನಾವಣೆಯಲ್ಲಿ  ನಿಮಗೇಕೆ ಸೋಲಾಯ್ತು ?
    ನಮ್ಮ ಎದುರಾಳಿ ಬಿಜೆಪಿ ಆಗಬೇಕಿತ್ತು. ಆದರೆ ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟರು ಎದುರಾದರು. ಬಿಜೆಪಿ ಕೇವಲ 16,000 ಮತಗಳಷ್ಟೇ ಪಡೆಯಲು ಶಕ್ತವಾಯಿತು. ವಿಜೇತ ಅಭ್ಯರ್ಥಿ ನಮಗಿಂತ 39,000 ಮತಗಳ ಅಂತರ ಹೊಂದಿದ್ದರು. ಬಿಜೆಪಿ ಸಮರ್ಥ ಪೈಪೋಟಿ ನೀಡಬೇಕಿತ್ತು. ಆಗ ನಮಗೆ ತೊಂದರೆಯಾಗುತ್ತಿರಲಿಲ್ಲ.

ರಣತಂತ್ರ ರೂಪಿಸುವಲ್ಲಿ ಕಾಂಗ್ರೆಸ್‌ ವೈಫ‌ಲ್ಯವೇನು?
    ಚುನಾವಣೆಗೆ ಎರಡು ತಿಂಗಳಷ್ಟೇ ಇರುವಾಗ ಅಭ್ಯರ್ಥಿ ಎಂದು ಸೂಚನೆ ಕೊಟ್ಟರು. ಹಾಗಾಗಿ ಪೂರ್ವ ಸಿದ್ಧತೆ ಸಾಕಾಗಲಿಲ್ಲ. ಪ್ರಚಾರದಲ್ಲಿ ವೇಗ ತೆಗೆದುಕೊಳ್ಳಲಾಗಲಿಲ್ಲ.  ಹಾಲಾಡಿಯವರ ಮೇಲಿನ ಗೌರವವೋ, ಅವರಿಗೆ ಸಚಿವ ಸ್ಥಾನ ದೊರೆಯಲಿಲ್ಲ ಎಂಬ ಅನುಕಂಪವೋ, ಬಿಜೆಪಿ ಮೇಲಿನ ಸಿಟ್ಟಿನಲ್ಲಿ ಹೇಗಾದರೂ ಹಾಲಾಡಿಯವರೇ ಗೆಲ್ಲಬೇಕು ಎಂದು ಜನರ ತೀರ್ಮಾನವೋ ಗೊತ್ತಿಲ್ಲ; ಜನ ಅವರನ್ನೇ ಬೆಂಬಲಿಸಿದರು. ನಾವದನ್ನು ಗೌರವಿಸುತ್ತೇವೆ.

ಸೋಲನ್ನು ಹೇಗೆ ಸ್ವೀಕರಿಸಿದಿರಿ?
    ಸೋಲನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ನಮ್ಮದೇ ಸರಕಾರ ಬಂದ ಕಾರಣ ಜನಸಾಮಾನ್ಯರ ಕೆಲಸ ಕಾರ್ಯ ಗಳನ್ನು ಮಾಡಿಸಿಕೊಡುತ್ತಿದ್ದೆ. ಈಗಲೂ ಪಕ್ಷದ ಅಧ್ಯಕ್ಷನಾಗಿದ್ದು ಜನಸೇವೆಯನ್ನು ಮುಂದುವರಿಸಿದ್ದೇನೆ. 

ಈ ಬಾರಿ ಸ್ಪರ್ಧೆಗೇಕೆ ಬೇರೆಯವರಿಗೆ ಅವಕಾಶ?
    “ವ್ಯವಸ್ಥೆ’ಯಲ್ಲಿ ಖರ್ಚುಗಳಿರುತ್ತವೆ. ನನ್ನ ಬಳಿ ಅಷ್ಟು ಹಣ ಇಲ್ಲ. ಚುನಾವಣೆ ವೆಚ್ಚಕ್ಕಾಗಿ ಇತರರ ಜೇಬು ನೋಡುವುದು ನನಗೆ ಹಿತವಿಲ್ಲ. ಇಂಟಕ್‌ಗೆ ಹೇಗೂ ರಾಜ್ಯದಲ್ಲಿ ಮೂರ್ನಾಲ್ಕು ಸೀಟು ಕೊಡ ಬೇಕಾಗುತ್ತದೆ. ಆದ್ದರಿಂದ ನಮ್ಮಲ್ಲೇ ಒಂದು ಸೀಟು ಕೊಡಲಾಗುತ್ತಿದೆ.

Advertisement

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next