ಮಲ್ಪೆ: ದೀಪಾವಳಿ, ಕನ್ನಡ ರಾಜ್ಯೋತ್ಸವ, ವಾರಾಂತ್ಯ ಹೀಗೆ ಸರಣಿ ರಜೆಯ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳತ್ತ ಜನರು ದೌಡಾಯಿಸುತ್ತಿದ್ದಾರೆ. ಶುಕ್ರವಾರ ಮಲ್ಪೆ, ಪಣಂಬೂರು ಸಹಿತ ಪ್ರಮುಖ ಬೀಚ್ಗಳಲ್ಲಿ ಅಪಾರ ಸಂಖ್ಯೆಯ ಪ್ರವಾಸಿಗರು ಕಂಡುಬಂದರು.
ಬೀಚ್ಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ವಾಹನ ದಟ್ಟಣೆಯೂ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಅ. 31 ನರಕ ಚತುದರ್ಶಿ, ನ.1 ಕನ್ನಡ ರಾಜ್ಯೋತ್ಸವ, ನ. 2 ದೀಪವಾಳಿ ಬಲಿಪಾಡ್ಯ ನ. 3 ರವಿವಾರದ ಹಿನ್ನೆಲೆಯಲ್ಲಿ ಸರಕಾರಿ, ಖಾಸಗಿ ನೌಕರರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸತತ ನಾಲ್ಕು ರಜೆ ಸಿಕ್ಕಿದ್ದು, ಹಬ್ಬದ ಸಡಗರವನ್ನು ಕುಟುಂಬದೊಂದಿಗೆ ಕಳೆಯಲು ಜನರು ಕಡಲತೀರಕ್ಕೆ ಆಗಮಿಸುತ್ತಿದ್ದಾರೆ.
ಶುಕ್ರವಾರ ಬೆಳಗ್ಗಿನಿಂದ ಅಪಾರ ಸಂಖ್ಯೆಯಲ್ಲಿ ಜನರು ಕಡಲತೀರಕ್ಕೆ ಅಗಮಿಸುತ್ತಿದ್ದುದರಿಂದ ಮಲ್ಪೆ ಬೀಚ್ನಲ್ಲಿ ಕಾಲಿಡಲೂ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗಿನಿಂದಲೇ ಪ್ರವಾಸಿಗರ ವಾಹನಗಳು ಸಾಲು ಸಾಲಾಗಿ ಮಲ್ಪೆ ಕಡೆ ಬಂದಿದ್ದು, ಬೆಂಗಳೂರು, ಮೈಸೂರು, ಮಂಡ್ಯ ಹಾಸನ ಜಿಲ್ಲೆಗಳ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸೀವಾಕ್ ಮತ್ತು ಪಡುಕರೆ ಬೀಚ್ನಲ್ಲೂ ಜನಸಂದಣಿ ಕಂಡು ಬಂದಿದೆ.
ಪಾರ್ಕಿಂಗ್ ಪ್ರದೇಶ ಭರ್ತಿ ವಾಹನ ದಟ್ಟಣೆಯಿಂದ ಮಲ್ಪೆ ಬೀಚ್ನ ಪಾರ್ಕಿಂಗ್ ಏರಿಯಗಳಲ್ಲಿ ವಾಹನ ನಿಲುಗಡೆಗೆ ಜಾಗದ ಸಮಸ್ಯೆ ಎದುರಾಗಿತ್ತು. ಬೀಚ್ನ ಸ್ವಾಗತಗೋಪುರದಿಂದ ಕಡಲತೀರದ ಬದಿಯ ಇಂಟರ್ಲಾಕ್ ರಸ್ತೆಯ ಎರಡೂ ಬದಿ ಹನುಮಾನ್ ನಗರದವರೆಗೂ ವಾಹನಗಳನ್ನು ಪಾರ್ಕ್ ಮಾಡಲಾಗಿತ್ತು. ಇತ್ತ ಶಿವಪಂಚಾಕ್ಷರಿ ಭಜನ ಮಂದಿರದ ಮುಖ್ಯ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಸೀವಾಕ್ ಪಾರ್ಕಿಂಗ್ ಪ್ರದೇಶವೂ ಭರ್ತಿಯಾಗಿತ್ತು.
ರಸ್ತೆಯಲ್ಲಿ ವಾಹನ ದಟ್ಟಣೆ ಶುಕ್ರವಾರ ಬೆಳಗ್ಗೆ ಕರಾವಳಿ ಸರ್ಕಲ್ – ಮಲ್ಪೆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ ಆದಿವುಡುಪಿ, ಕಲ್ಮಾಡಿ ಮುಂತಾದೆಡೆಯೂ ಸಂಚಾರ ವ್ಯತ್ಯಯವಾಗಿತ್ತು. ಇತ್ತ ಕಲ್ಯಾಣಪುರ, ಕೊಡವೂರು ಮಾರ್ಗವಾಗಿ ಸಿಟಿಜನ್ ಸರ್ಕಲ್ ಮಾರ್ಗದಲ್ಲೂ ವಾಹನಗಳ ದಟ್ಟಣೆ ಕಂಡು ಬಂತು. ಶನಿವಾರ, ರವಿವಾರ ಇನ್ನಷ್ಟು ಹೆಚ್ಚಿನ ಜನರ ನಿರೀಕ್ಷೆ ದೀಪಾವಳಿ ಪಾಡ್ಯ ಮತ್ತು ವಾರಾಂತ್ಯದ ಎರಡು ದಿನ ಇನ್ನಷ್ಟು ಹೆಚ್ಚಿನ ಜನರು ಬೀಚ್ಗೆ ಆಗಮಿಸುವ ನಿರೀಕ್ಷೆ ಇದೆ. ಶನಿವಾರ ಮಲ್ಪೆ ಬೀಚ್ ಫ್ರೆಂಡ್ಸ್ ವತಿಯಿಂದ ಬೀಚ್ನಲ್ಲಿ ದೀಪಾವಳಿ ಸಡಗರ ಕಾರ್ಯಕ್ರಮವೂ ನಡೆಯಲಿದೆ.