Advertisement
ಜೂನ್‌ನಿಂದ ಶಾಲಾ ಕಾಲೇಜು ಆರಂಭಗೊಳ್ಳುವ ಹಿನ್ನೆಲೆ ಈ ತಿಂಗಳ ಅಂತ್ಯದ ವಾರಾಂತ್ಯದಲ್ಲಿ ಸ್ಥಳೀಯರು ಸೇರಿದಂತೆ ಹೊರಜಿಲ್ಲೆಯ ಬಹಳಷ್ಟು ಮಂದಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಇವರ ನಿಯಂತ್ರಣಕ್ಕೆ ಜೀವರಕ್ಷಕ ಸಿಬಂದಿ ಶ್ರಮಿಸುತ್ತಿದ್ದಾರೆ.
ಶನಿವಾರ ಬೆಳಗ್ಗೆ ಓರ್ವ ಸಮುದ್ರಪಾಲಾಗಿದ್ದು ಅತನನ್ನು ಜೀವ ರಕ್ಷಕರು ಮತ್ತು ಈಶ್ವರ ಮಲ್ಪೆ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ಷಿಸಲ್ಪಟ್ಟವನು ಬೆಂಗಳೂರು ಚಂದ್ರಪುರದ ಸಚಿನ್ (25) ಎಂದು ಗುರುತಿಸಲಾಗಿದೆ. ಅವರು 6 ಮಂದಿ ಕಾರಿನಲ್ಲಿ ಶುಕ್ರವಾರ ರಾತ್ರಿ ಬಂದಿದ್ದರು. ಶನಿವಾರ ಬೆಳಗ್ಗೆ ಇಬ್ಬರು ಸಮುದ್ರದಲ್ಲಿ ಈಜಾಡುತ್ತಿದ್ದು ಅವರಲ್ಲಿ ಸಚಿನ್ ಅಲೆಗೆ ಕೊಚ್ಚಿ ಹೋಗಿ ಸಮುದ್ರಪಾಲಾಗಿದ್ದ. 10 ನಿಮಿಷಗಳ ಬಳಿಕ ಬಂದ ದೊಡ್ಡ ಅಲೆಯಲ್ಲಿ ಆತ ಪತ್ತೆಯಾಗಿದ್ದಾನೆ. ಉಸಿರಾಡುವ ಸ್ಥಿತಿಯಲ್ಲಿದ್ದ ಆತನನ್ನು ತತ್‌ಕ್ಷಣ ಮಣಿಪಾಲ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿದ್ದು ಸ್ಥಿತಿ ಗಂಭೀರವಾಗಿದೆ. ಸೂಕ್ತ ಕ್ರಮ ಕೈಗೊಳ್ಳಬೇಕು:
ಹವಾಮಾನದ ಏರುಪೇರಿನಿಂದಾಗಿ ಸಮುದ್ರದ ನೀರಿನ ಒತ್ತಡದಲ್ಲಿ ವ್ಯತ್ಯಾಸ ವಾಗುತ್ತದೆ. ಮಲ್ಪೆಯಲ್ಲಿ ಈಗಾಗಲೇ ಒಂದು ವಾರದಲ್ಲಿ ಇಬ್ಬರು ನೀರಿಗೆ ಬಿದ್ದು ಮೃತ ಪಟ್ಟಿದ್ದಾರೆ. ಪ್ರವಾಸಿಗರು ಇಲ್ಲಿನ ಜೀವರಕ್ಷಕರ ಮಾತನ್ನು ಕೇಳುತ್ತಿಲ್ಲ. ಪ್ರವಾಸಿಗರು ನೀರಿಗೆ ಇಳಿಯದಂತೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.