Advertisement

Malpe ಬೀಚ್‌ಗೆ ಪ್ರವಾಸಿಗರ ದಾಂಗುಡಿ; ಹೆಚ್ಚಲಿ ಸೌಕರ್ಯ

02:47 PM Dec 13, 2024 | Team Udayavani |

ಮಲ್ಪೆ: ಪ್ರಕೃತಿದತ್ತ ಸೌಂದರ್ಯದಿಂದ ನಳನಳಿಸುತ್ತಿರುವ ರಮಣೀಯ ತಾಣ ಮಲ್ಪೆ ಬೀಚ್‌ಗೆ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಇಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಮಾತ್ರ ಹಾಗೆಯೇ ಮುಂದುವರಿದಿದೆ.

Advertisement

ವಿಶಾಲವಾದ ಕಡಲ ತೀರವಾಗಿರುವ ಇಲ್ಲಿ ಸಾಹಸ ಪ್ರಿಯರಿಗೆ, ಮಕ್ಕಳಿಗೆ ಮತ್ತು ಕುಟುಂಬಕ್ಕೆ ಪೂರಕವಾಗುವಂತೆ ನಾನಾ ಮನರಂಜನೆಗಳು ಇರುವುದರಿಂದ ಪ್ರವಾಸಿಗರು ಮಲ್ಪೆ ಬೀಚ್‌ನ್ನು ಆಯ್ಕೆ ಮಾಡುತ್ತಾರೆ. ಉಡುಪಿ ನಗರದ ಪಕ್ಕದಲ್ಲೇ ಇರುವುದು, ಇಲ್ಲಿಂದಲೇ ಸೈಂಟ್‌ ಮೇರಿಸ್‌ ದ್ವೀಪಕ್ಕೆ ಹೋಗಲು ವ್ಯವಸ್ಥೆ ಇರುವುದರಿಂದ ಪ್ರವಾಸಿಗರ ಫೇವರಿಟ್‌ ಅನಿಸಿದೆ.

ಈ ಬೀಚ್‌ ಪ್ರವಾಸೋದ್ಯಮವನ್ನೇ ನಂಬಿಕೊಂಡು ನೂರಾರು ಅಂಗಡಿಗಳು, ಸಾಹಸ ಕ್ರೀಡೆಗಳು ರೂಪುಗೊಂಡಿವೆ. ಸಾವಿರಾರು ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ, ಸರಕಾರಕ್ಕೆ ಆದಾಯವನ್ನೂ ತರುತ್ತಿದೆ. ಆದರೆ, ಇಲ್ಲಿಗೆ ಬಂದ ಪ್ರವಾಸಿಗರಿಗೆ ಸೂಕ್ತವಾದ ವ್ಯವಸ್ಥೆಗಳ ಕೊರತೆಗಳು ಹಿಂದಿನಿಂದಲೂ ಇದ್ದು ಅವುಗಳನ್ನು ಸರಿಪಡಿಸುವ ಕೆಲಸ ವೇಗವರ್ಧನೆ ಪಡೆದಿಲ್ಲ.

ಪ್ರವಾಸಿಗರ ಸಂಖ್ಯೆ ಹೆಚ್ಚಾದಾಗ ಮೂಲಭೂತ ಸೌಕರ್ಯಗಳಾದ ವಾಹನ ಪಾರ್ಕಿಂಗ್‌, ಶೌಚಾಲಯ, ಸ್ನಾನ ಗೃಹದ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಮುಂದಿನ ಹಲವು ದಶಕಗಳ ದೂರದೃಷ್ಟಿ ಇಟ್ಟುಕೊಂಡು ತಜ್ಞರ ಸಮಿತಿ ರಚಿಸಿ ಮೂಲ ಸೌಕರ್ಯ ಅಭಿವೃದ್ಧಿಯ ಯೋಜನೆ ಹಾಕಿಕೊಳ್ಳಬೇಕು ಎನ್ನುತ್ತಾರೆ ಇಲ್ಲಿನ ಸ್ಥಳೀಯರು ಮತ್ತು ಪ್ರವಾಸಿಗರು.

ಪ್ರಮುಖ ಸಮಸ್ಯೆಗಳು ಏನೇನು?
ವಾಹನ ಪಾರ್ಕಿಂಗ್‌ ದೊಡ್ಡ ಸವಾಲು
ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರು ಬಂದಾಗ ಪಾರ್ಕಿಂಗ್‌ಗೆ ಜಾಗವಿಲ್ಲದೆ ರಸ್ತೆಯುದ್ದಕ್ಕೂ ನಿಲ್ಲಿಸಲಾಗುತ್ತದೆ. ಅನೇಕ ಬಾರಿ ರಸ್ತೆ ತಡೆಯಾಗಿದೆ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ವಾರಾಂತ್ಯ ಹಾಗೂ ವಿಶೇಷ ರಜಾದಿನಗಲ್ಲಿ ಪ್ರವಾಸಿಗರು ವಾಹನ ನಿಲ್ಲಿಸಲು ಜಾಗವಿಲ್ಲದೆ ನಿರಾಶರಾಗಿ ವಾಪಸು ಹೋಗುತ್ತಿದ್ದಾರೆ.

Advertisement

ಶೌಚಾಲಯ, ಸ್ನಾನದ ಗೃಹ
ವಾರಾಂತ್ಯ ಮತ್ತು ರಜಾದಿನಗಳಲ್ಲಿ ಸಮುದ್ರದಲ್ಲಿ ಮೋಜು ಮಾಡಿದ ಬಳಿಕ ಸ್ನಾನ ಮತ್ತು ಬಟ್ಟೆ ಬದಲಿಸಲು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಹೀಗಾಗಿ ಹೆಚ್ಚುವರಿ ವ್ಯವಸ್ಥೆಗಳನ್ನು ಮಾಡಬೇಕಾಗಿದೆ. ಶೌಚಾಲಯಗಳ ಕೊರತೆಯಂತೂ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಡುತ್ತಿದೆ.

ಅಡುಗೆ ಮಾಡಲು ಪ್ರತ್ಯೇಕ ಜಾಗ
ಕೆಲವು ಪ್ರವಾಸಿಗರು ರಸ್ತೆಯ ಬದಿಯಲ್ಲಿ ಅಡುಗೆ ಮಾಡಿ ಅಲ್ಲಿಯೇ ಊಟ ಮಾಡುತ್ತಾರೆ. ಇಂತವರಿಗಾಗಿ ಒಂದು ಪ್ರತ್ಯೇಕ ಸ್ಥಳ ನಿಗದಿ ಮಾಡಿ ಕುಡಿಯುವ ನೀರು, ಊಟ ಮಾಡಲು ಆಸನ, ಬೆಳಕು, ಕಸದ ತೊಟ್ಟಿಯ ವ್ಯವಸ್ಥೆ ಆಗಬೇಕಾಗಿದೆ.

ಮಾಡಬೇಕಾದ ತುರ್ತು ಕೆಲಸಗಳು
-ಮಲ್ಪೆ ಸೀ-ವಾಕ್‌ನಿಂದ ತೊಟ್ಟಂ ಪೊಟ್ಟಳಿವೆ ವರೆಗೆ ಬೀಚ್‌ ಸ್ವತ್ಛತೆ, ವಿದ್ಯುತ್‌ ದೀಪ
-ಹೆಚ್ಚುವರಿ ಶೌಚಾಲಯ, ಪ್ರವಾಸಿ ಮಾಹಿತಿ ಕೇಂದ್ರ ಸ್ಥಾಪನೆ, ಪೊಲೀಸ್‌ ಹೊರಠಾಣೆ
-ಮೂರು ಕಡೆ ಸ್ವಿಮ್ಮಿಂಗ್‌ ಝೋನ್‌, ಇಡೀ ತೀರದ ಸಮಗ್ರ ಬಳಕೆಗೆ ಯೋಜನೆ
-ಪ್ರಥಮ ಚಿಕಿತ್ಸಾ ಕೇಂದ್ರ, ಆ್ಯಂಬುಲೆನ್ಸ್‌, ಪ್ರಮುಖ ಭಾಗಗಳಲ್ಲಿ ಸಿಸಿ ಕೆಮರಾ
-ಮಳೆಯಿಂದ ರಕ್ಷಣೆ ಪಡೆಯಲು ವ್ಯವಸ್ಥೆ, ಬಟ್ಟೆ ಬದಲಾಯಿಸಲು ಹೆಚ್ಚುವರಿ ಸ್ಥಳ

ಪ್ರವಾಸಿಗರ ರಕ್ಷಣೆಗೆ ಹೆಚ್ಚಿನ ಆದ್ಯತೆ ಬೇಕು
ಮುಡೇಶ್ವರ ಕಡಲ ತೀರದಲ್ಲಿ ನಾಲ್ವರು ವಿದ್ಯಾರ್ಥಿನಿಯರು ನೀರುಪಾಲಾದ ಘಟನೆ ಹಿನ್ನೆಲೆಯಲ್ಲಿ ಮಲ್ಪೆಯಲ್ಲೂ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಈಗ ಮಲ್ಪೆಯಲ್ಲಿ 25ಕ್ಕೂ ಅಧಿಕ ರಕ್ಷಣಾ ಕಾರ್ಯಕರ್ತರು ಇದ್ದಾರೆ. ಇವರಿಗೆ ಜೆಟ್‌ಸ್ಕಿ, ಲೈಫ್‌ಬಾಯ್‌, ರಿಂಗ್‌, ಜಾಕೆಟ್‌, ಟ್ಯೂಬು, ಲೈಫ್‌ ಸೇವಿಂಗ್‌ ಹುಕ್‌, ಪ್ರಥಮ ಚಿಕಿತ್ಸೆ ಕಿಟ್‌ ಸೇರಿದಂತೆ ಕೆಲವೊಂದು ಜೀವ ರಕ್ಷಕ ಸಾಧನಗಳು ಅಗತ್ಯವಿದೆ.

ರಕ್ಷಣ ಕಾರ್ಯ: ತರಬೇತಿ ನೀಡಿ ಯುವಕರ ನೇಮಕ
ಮಲ್ಪೆಯಲ್ಲಿ ಸ್ಪೀಡ್‌ಬೋಟ್‌ ಮತ್ತು ದೊಡ್ಡ ಪ್ರವಾಸಿ ಬೋಟ್‌ ಜತೆಗೆ ವಾಟರ್‌ ನ್ಪೋರ್ಟ್‌, ಫ್ಲೋಟಿಂಗ್‌ ಜೆಟ್ಟಿಯಲ್ಲಿ ಪ್ರತ್ಯೇಕ ಲೈಫ್‌ಗಾರ್ಡ್‌ ಗಳು ರಕ್ಷಣಾ ಕೆಲಸದಲ್ಲಿ ನಿರತರಾಗಿದ್ದಾರೆ. ನಾಲ್ವರು ಜೀವರಕ್ಷಕ ಸಿಬಂದಿ, ಮೂವರು ಪ್ರವಾಸಿ ಮಿತ್ರರು, ಐಲ್ಯಾಂಡಿನಲ್ಲಿ ಇಬ್ಬರು, ಸೀವಾಕ್‌ನಲ್ಲಿ ಒಬ್ಬ ಪ್ರವಾಸಿ ಮಿತ್ರರಿದ್ದಾರೆ. ಹೆಚ್ಚುವರಿ ಜೀವ ರಕ್ಷಕರನ್ನು ನೇಮಿಸುವ ನಿಟ್ಟಿನಲ್ಲಿ ಮುಂದಿನ ವಾರದಿಂದ 25ರಿಂದ 40ರ ವಯೋಮಿತಿಯ ಯುವಕರಿಗೆ ತರಬೇತಿ ನೀಡಲಾಗುತ್ತದೆ. ಇದರಲ್ಲಿ ಆಯ್ಕೆಯಾದ ವರನ್ನು ಸರಕಾರದ ವತಿಯಿಂದ ನೇಮಕ ಮಾಡಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ.

ತೀರದ ಸಂಪೂರ್ಣ ಬಳಕೆಯಾಗಲಿ
ಮುಖ್ಯ ಬೀಚ್‌ನ ದಕ್ಷಿಣ ಭಾಗದ ಇಂಟರ್‌ಲಾಕ್‌ ರಸ್ತೆಯ ಪೂರ್ವದಿಕ್ಕಿಗೆ ಸುಮಾರು ಒಂದು ಕಿ.ಮೀ. ರಸ್ತೆಯುದ್ದಕ್ಕೂ ವಾಹನಗಳನ್ನು ಸಾಲಾಗಿ ಪಾರ್ಕ್‌ ಮಾಡಲು ವ್ಯವಸ್ಥೆ ಬೇಕು. ಇಲ್ಲಿ 200-250 ವಾಹನ ನಿಲ್ಲಿಸಬಹುದು. ಪ್ರವಾಸಿಗರಿಗೂ ಅಲ್ಲಿಯೇ ಇಳಿದು ತೀರಕ್ಕೆ ಹೋಗಲು ಅನೂಕೂಲವಾಗುತ್ತದೆ. ಒಂದೇ ಕಡೆ ದಟ್ಟಣೆ ಬದಲು ಒಂದೂವರೆ ಕಿ. ಮೀ. ತೀರದ ಉದ್ದಕ್ಕೂ ವಿಹರಿಸಬಹುದು ಎಂದು ಸ್ಥಳೀಯರಾದ ಪಾಂಡುರಂಗ ಮಲ್ಪೆ ತಿಳಿಸಿದ್ದಾರೆ.

ಮಾಸ್ಟರ್‌ ಪ್ಲಾನ್‌ ಸಿದ್ಧ
ಮಲ್ಪೆ ಬೀಚ್‌ಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲಿನ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಈಗಾಗಲೇ ಮಾಸ್ಟರ್‌ ಪ್ಲಾನ್‌ ಮಾಡಲಾಗಿದೆ. ವಾಹನ ಪಾರ್ಕಿಂಗ್‌, ಹೆಚ್ಚುವರಿ ಶೌಚಾಲಯಕ್ಕೆ ಮಾಡುವ ಬಗ್ಗೆ ಹಂತ ಹಂತವಾಗಿ ಮಾಡಲಾಗುವುದು. ಬೀಚ್‌ನ ಸ್ವತ್ಛತೆ, ಸುರಕ್ಷ ಕ್ರಮ ಸೇರಿದಂತೆ ಕೆಲವೊಂದು ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
-ಯಶ್‌ಪಾಲ್‌ ಸುವರ್ಣ, ಶಾಸಕರು, ಉಡುಪಿ

ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಅಗತ್ಯ
ಬೀಚ್‌ನಲ್ಲಿ ವಾಹನ ಪಾರ್ಕಿಂಗ್‌ಗೆ ಸರಕಾರಿ ಜಾಗ ಇರದ ಕಾರಣ ಈಗಿರುವ ಪಾರ್ಕಿಂಗ್‌ ಏರಿಯಾದಲ್ಲಿ 5-6 ಲೇಯರ್‌ನ ಮಲ್ಟಿ ಸ್ಟೋರ್‌ ಪಾರ್ಕಿಂಗ್‌ ಮಾಡುವ ಯೋಜನೆ ಇದೆ. ಇದರಲ್ಲಿ 2500 ವಾಹನ ನಿಲ್ಲಿಸಬಹುದು. ಹೆಚ್ಚುವರಿಯಾಗಿ 2-3 ಶೌಚಾಲಯಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ನಾಲ್ವರು ಜೀವರಕ್ಷಕ ಸಿಬಂದಿ, ಬೀಚ್‌ ಮತ್ತು ಐಲ್ಯಾಂಡಿನಲ್ಲಿ ತಲಾ ಇಬ್ಬರು ಪ್ರವಾಸಿ ಮಿತ್ರರು, ಸೀವಾಕ್‌ನಲ್ಲಿ ಒಬ್ಬರನ್ನು ನೇಮಿಸಲಾಗಿದೆ.
-ಕುಮಾರ್‌ ಸಿ.ಯು., ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಉಡುಪಿ

-ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next