Advertisement

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

12:40 AM Jan 07, 2025 | Team Udayavani |

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನ ಜೆಟ್ಟಿಯಲ್ಲಿ ನಿಲ್ಲಿಸಲಾಗಿದ್ದ ಮೀನು ತುಂಬಿರುವ ಬೋಟ್‌ನಲ್ಲಿ ಕಳ್ಳರು ಸುಮಾರು 15 ಸಾವಿರ ರೂ. ಬೆಲೆ ಬಾಳುವ ಉತ್ತಮ ಜಾತಿಯ ಮೀನನ್ನು ಎಗರಿಸಲು ಮುಂದಾಗಿದ್ದ ವೇಳೆ ಬೋಟ್‌ನ ಕಾರ್ಮಿಕರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದ ಘಟನೆ ಶನಿವಾರ ತಡರಾತ್ರಿ ನಡೆದಿದೆ.

Advertisement

ಶನಿವಾರ ರಾತ್ರಿ ಸುಮಾರು 12 ಗಂಟೆ ವೇಳೆಗೆ ಬಂದರಿನಲ್ಲಿ ನಿಲ್ಲಿಸಲಾಗಿದ್ದ ಬೋಟ್‌ಗೆ ಮೂವರು ಬಂದು ಬೋಟ್‌ನ ಕಾರ್ಮಿಕರು ಗಾಢ ನಿದ್ರೆಯಲ್ಲಿರುವುದನ್ನು ಗಮನಿಸಿ ಬೋಟ್‌ನ ಸ್ಟೋರೇಜ್‌ನ ಮುಚ್ಚಳ ತೆರೆದು ಅದರೊಳಗೆ ಒಬ್ಬನನ್ನು ಇಳಿಸಿದ್ದರು. ಅಲ್ಲಿಂದ ಕಳವು ಮಾಡುವಾಗ ಬೋಟ್‌ನ ಕಾರ್ಮಿಕನೋರ್ವನಿಗೆ ಎಚ್ಚರವಾಗಿ ಬೊಬ್ಬೆ ಹಾಕಿದ್ದ. ಬೋಟ್‌ನ ಮೇಲೆ ಇದ್ದವರಲ್ಲಿ ಇಬ್ಬರು ಓಡಿ ಹೋಗಿದ್ದು, ಒಬ್ಬ ಸ್ಟೋರೇಜ್‌ನ ಒಳಗೆ ಸಿಕ್ಕಿ ಹಾಕಿಕೊಂಡಿದ್ದ. ಬೋಟ್‌ನ ಕಾರ್ಮಿಕರು ಆತನನ್ನು ಹಿಡಿದು ವಿಚಾರಿಸಿ ಬೋಟು ಮಾಲಕರಿಗೆ ಒಪ್ಪಿಸಿದ್ದಾರೆ. ಈ ಮೂವರು ಗದಗ ಮೂಲದವರೆನ್ನಲಾಗಿದೆ.

ಹೆಚ್ಚುತ್ತಿದೆ ಮೀನು ಕಳ್ಳತನ
ಕಳೆದ ಎರಡು ವರ್ಷದಿಂದ ಮೀನು ಕಳ್ಳತನ ಮಾಡುವ ಕೃತ್ಯ ಹೆಚ್ಚುತ್ತಿದ್ದು ಕಳೆದ ಎರಡು ತಿಂಗಳಿನಿಂದ ಇದು ನಿತ್ಯ ನಡೆಯುತ್ತಿದೆ. ಇದೀಗ ಕೆಲವೊಂದು ಬೋಟುಗಳಲ್ಲಿ ಸಿಸಿ ಕೆಮರಾ ಅಳವಡಿಸಿದ್ದರಿಂದ ಕಳ್ಳತನ ನಡೆಯುತ್ತಿರುವುದು ಬೆಳಕಿಗೆ ಬರುತ್ತಿದೆ ಎನ್ನಲಾಗುತ್ತದೆ.

ಯಾರೀ ಮೀನು ಕಳ್ಳರು ?
ಮೀನುಗಾರಿಕೆ ಮುಗಿಸಿ ಬಂದ ಬೋಟ್‌ನ ಸ್ಟೋರೇಜ್‌ ಒಳಗೆ ಇರಿಸಲಾಗಿದ್ದ ಮೀನನ್ನು ಮೇಲೆ ತೆಗೆದು ಹಾಕುವವರಿಗೆ ಕೊಟ್ಟು ಪಾರ್ಟಿ ಎನ್ನುತ್ತಾರೆ. ಕೊಟ್ಟು ಪಾರ್ಟಿಯಲ್ಲಿ ಇರುವವರು ಬಹುತೇಕ ಮಂದಿ ಉತ್ತರ ಕರ್ನಾಟಕದವರಾಗಿದ್ದಾರೆ. ಇವರು ತಡರಾತ್ರಿ 2 ಗಂಟೆಗೆ ಬಂದು ಬೋಟ್‌ನ ಒಳಗಡೆಯಿದ್ದ ಮೀನಿನ ಬಾಕ್ಸ್‌ ಮೇಲೆ ತೆಗೆದು ಜೋಡಿಸಿ ಇಡುತ್ತಾರೆ. ಇದೀಗ ಕೊಟ್ಟುವಿಗೆ ಹೆಚ್ಚುವರಿಯಾಗಿ ಬಂದ ಕಾರ್ಮಿಕರು ಈ ಕೃತ್ಯವನ್ನು ಎಸಗುತ್ತಿದ್ದಾರೆ ಎಂದು ಬೋಟು ಕಾರ್ಮಿಕರು, ಮಾಲಕರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next