ಕಾಪು : ಕರ್ನಾಟಕ ಸರಕಾರದ ಮಾಜಿ ಮುಖ್ಯ ಸಚೇತಕ, ಮಾಜಿ ಶಾಸಕ ದಿ| ಭಾಸ್ಕರ್ ಶೆಟ್ಟಿ ಅವರ ಪುತ್ರ ಧಾರ್ಮಿಕ, ಸಹಕಾರ, ಸಾಮಾಜಿಕ ಮತ್ತು ಜಾನಪದ ಕ್ಷೇತ್ರದ ಮುಖಂಡ ಮಲ್ಲಾರುಗುತ್ತು ಸುಬ್ರಹ್ಮಣ್ಯ ಶೆಟ್ಟಿ (68) ಅವರು ಜ. 30ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರ ಅಂತಿಮ ಕ್ರಿಯೆಯು ಜ. 30 ರಂದು ರಾತ್ರಿ 9.30 ಕ್ಕೆ ಮಲ್ಲಾರುಗುತ್ತುವಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಪತ್ನಿ ಕಾಪು ಪುರಸಭೆಯ ಸದಸ್ಯೆ ಶಾಂತಲತಾ ಎಸ್. ಶೆಟ್ಟಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕಾಪು ಸಾವಿರ ಸೀಮೆಯ ಒಂದನೇ ಗುತ್ತು ಮನೆತನದ ಗುತ್ತಿನಾರ್ ಆಗಿದ್ದ ಅವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾಗಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಟ್ರಸ್ಟಿಯಾಗಿ, ಮಲ್ಲಾರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾಗಿ, ಕಾಪು ಸಿ.ಎ. ಬ್ಯಾಂಕ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು ಪ್ರಸ್ತುತ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಕಾಪು ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯ ಪೋಷಕರಾಗಿದ್ದ ಅವರು ಮಲ್ಲಾರು ಶ್ರೀ ಬ್ರಹ್ಮ ಬೆದರ್ಕಳ ಗರೊಡಿ, ಧೂಮಾವತಿ ದೈವಸ್ಥಾನದ ಗುತ್ತಿನಾರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದರು. ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳ, ಭೂತ ಕೋಲ ಸಹಿತ ವಿವಿಧ ಆರಾಧನಾ ಸೇವೆಗಳಲ್ಲಿ ಮುಂಚೂಣಿಯ ಸೇವಾಸಕ್ತರಾಗಿದ್ದರು.
ಮಲ್ಲಾರು ಗುತ್ತು ಸುಬ್ರಹ್ಮಣ್ಯ ಶೆಟ್ಟಿ ಅವರ ನಿಧನಕ್ಕೆ ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಹಿರಿಯ ಮುಖಂಡ ಸುರೇಶ್ ಶೆಟ್ಟಿ ಗುರ್ಮೆ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ಎಂ. ಬಂಗೇರ, ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕರ್ನಾಟಕ ಹಾಲು ಮಹಾಮಂಡಲದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಗಣ್ಯರಾದ ಕೆ. ಪಿ. ಆಚಾರ್ಯ, ಡಾ| ಕೆ. ಪ್ರಭಾಕರ ಶೆಟ್ಟಿ, ಕಾಪು ಲೀಲಾಧರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಯಶ್‌ಪಾಲ್ ಸುವರ್ಣ ಮೊದಲಾದವರು ಸಂತಾಪ ಸೂಚಿಸಿದ್ದಾರೆ.