ಸವದತ್ತಿ: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ನೀರುಣಿಸುತ್ತಿರುವ ಮಲಪ್ರಭಾ ನದಿ ಬರಿದಾಗುವ ಸ್ಥಿತಿ ತಲುಪಿದ್ದು, ಜನ ಜಾನುವಾರುಗಳಿಗೆ; ರೈತರ ಬೆಳೆಗಳಿಗೆ ನೀರಿನ ಅಭಾವ ಎದುರಾಗಿ ಬೇಸಿಗೆಯ ಬೇಗೆಗೆ ಬೆಂದು ಹೋಗಿದ್ದಾರೆ.
ಸವದತ್ತಿ ತಾಲೂಕಿನಲ್ಲಿರುವ ಮಲಪ್ರಭಾ ನದಿಗೆ ನಿರ್ಮಾಣ ಮಾಡಲಾಗಿರುವ ನವಿಲುತೀರ್ಥ ಅಣೆಕಟ್ಟು 38 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯ ಹೊಂದಿದ್ದರೂ ಭಾರೀ ಪ್ರಮಾಣದ ಹೂಳು ತುಂಬಿದ್ದರಿಂದ ಆಣೆಕಟ್ಟು ಭರ್ತಿಯಾದರೂ ಕೇವಲ 14ರಿಂದ 16ಟಿಎಂಸಿ ನೀರು ಮಾತ್ರ ಸಂಗ್ರಹವಾಗುತ್ತಿದೆ.
ಮಲಪ್ರಭಾ ಆಣೆಕಟ್ಟು 154.53 ಮೀ. ಉದ್ದ ಹಾಗೂ 40.23 ಮೀ. ಎತ್ತರವಿದೆ. ಇದರ ಹಿನ್ನೀರಿನಲ್ಲಿ 13,578 ಹೆಕ್ಟೇರ್ ಪ್ರದೇಶ ಮುಳುಗಡೆಯಾಗಿದೆ. ಇದರ ಎಡದಂಡೆ ಕಾಲುವೆ 150 ಕಿಮೀ ಉದ್ದವಿದ್ದು, ಇದರಿಂದ 53,136 ಹೆಕ್ಟೇರ್ ಪ್ರದೇಶ ನೀರಾವರಿಗೊಳಗಾಗಿದೆ. ಬಲದಂಡೆ ಕಾಲುವೆಯು 142 ಕಿಮೀ ಉದ್ದವಿದ್ದು, 1,39,921 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತ್ತಿದೆ. ಆದರೆ ನೀರಿನ ಪ್ರಮಾಣ ಇಳಿಮುಖವಾಗಿದ್ದರಿಂದ ಸುಮಾರು 80-90 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನದಿ ನೀರು ತಲುಪಿದೆ. ಸದ್ಯಕ್ಕೆ 2038.15 ಅಡಿ ನೀರಿನ ಸಂಗ್ರಹವಿದ್ದು ಸುಮಾರು 7 ಟಿಎಂಸಿ ಅಡಿ ನೀರು ಸಂಗ್ರಹವೆಂದು ಅಂದಾಜಿಸಬಹುದು. ಇದರಲ್ಲಿ ನಿತ್ಯ 164 ಕ್ಯೂಸೆಕ್ ನೀರು ಕುಡಿಯಲು ಹರಿಬಿಡಲಾಗುವುದು.
ಕಣಕುಂಬಿಯಿಂದ ನದಿಗೆ ಅಡ್ಡಲಾಗಿ ಒಟ್ಟಾರೆ 7 ತಡೆಗೋಡೆ ಕಮ್ ಬಾಂದಾರ ಗಳನ್ನು ಕುಡಿಯುವ ನೀರಿನ ಸಂಗ್ರಹಣೆಗೆ ನಿರ್ಮಿಸಲಾಗಿತ್ತು. ಆದರೆ ಈಗ ಆ ಎಲ್ಲವೂ ಖಾಲಿಯಾಗಿವೆ. ಕಳೆದ ಮಳೆಗಾಲದಲ್ಲಿ ಮಳೆ ಕೈಕೊಟ್ಟಿದ್ದರಿಂದ ಮಲಪ್ರಭೆ ಸಂಪೂರ್ಣವಾಗಿ ಭರ್ತಿಯ ಹಂತ ತಲುಪಿರಲಿಲ್ಲ. ಸದ್ಯ ಮಲಪ್ರಭೆ ಒಡಲು ಖಾಲಿಯಾಗುತ್ತಿರುವುದು ಈ ಭಾಗದ ಜನರಲ್ಲಿ ಆತಂಕ ಸೃಷ್ಠಿಸಿದೆ.
ಹೂಳಿನಿಂದ ನೀರಿನ ಸಂಗ್ರಹ ಕುಂಠಿತ: 1969ರಲ್ಲಿ ನಿರ್ಮಾಣವಾದ ಇಂದಿರಾ (ನವಿಲು ತೀರ್ಥ) ಅಣೆಕಟ್ಟಿನ ಒಟ್ಟು ನೀರಿನ ಸಾಮರ್ಥ್ಯ 37.731 ಟಿಎಂಸಿ. 1973 ರಲ್ಲಿ ಪ್ರಥಮ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು ಇಲ್ಲಿಯವರೆಗೆ ಒಟ್ಟು 7 ಬಾರಿ ಭರ್ತಿಯಾದ ದಾಖಲೆಯಿದೆ. ಈವರೆಗೂ ಸುಮಾರು 2.5 ಟಿಎಂಸಿ ಹೂಳು ಶೇಖರಣೆಯಾಗಿರಬಹುದು ಎನ್ನಲಾಗುತ್ತಿದೆ. ಆಣೆಕಟ್ಟು ನಿರ್ಮಾಣವಾದಾಗಿನಿಂದ ಹೂಳು ತೆಗೆಯುವ ಪ್ರಯತ್ನಕ್ಕೆ ಮುಂದಾಗದೇ ಇರುವುದು ಖೇದಕರ ಸಂಗತಿ. ಹೂಳು ತೆಗೆಸುವ ಕಾರ್ಯಕ್ಕೆ ಅಣೆಕಟ್ಟು ನಿರ್ಮಾಣ ಮಾಡಬೇಕಾದಾಗ ಎಷ್ಟು ಹಣ ವ್ಯಯಿಸಲಾಗಿತ್ತೋ ಅಷ್ಟು ಹಣ ವ್ಯಯಿಸಬೇಕಾಗುತ್ತದೆ. ಆದರೆ ಈ ಕುರಿತು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೂಳಿನ ಕುರಿತು 10 ವರ್ಷಕ್ಕೊಮ್ಮೆ ಸಮೀಕ್ಷೆ ನಡೆಯಬೇಕು. ಆದರೆ ನವಿಲು ತೀರ್ಥಕ್ಕೆ ಯಾವುದೇ ಸರ್ವೆ ನಡೆದಿಲ್ಲ.
ಚುನಾವಣೆ ಸಂದರ್ಭದಲ್ಲಿ ಎಲ್ಲ ರಾಜಕಾರಣಿಗಳು ಕಳಸಾ ಬಂಡೂರಿ ಮಹದಾಯಿ ವಿಚಾರವನ್ನೆತ್ತಿ ತಮ್ಮ ಪಕ್ಷದ ಅಸ್ತಿತ್ವಕ್ಕೆ ಹೆಣಗಾಡುತ್ತಾರೆ. ಆದರೆ ಆ ಹೋರಾಟವನ್ನು ಬಿಟ್ಟು ಎಲ್ಲರೂ ಸೇರಿ ಆಣೆಕಟ್ಟಿನಲ್ಲಿ ಸಂಗ್ರಹವಾದ ಹೂಳನ್ನು ತೆಗೆಸಿದ್ದರೆ ಬರ ಪರಿಸ್ಥಿತಿಯಲ್ಲೂ 4 ಜಿಲ್ಲೆ, 13 ತಾಲೂಕಿನ ಜನ ಜಾನುವಾರುಗಳಿಗೆ ಸತತ 9 ತಿಂಗಳು ನೀರು ಹರಿಸುವ ಸಾಮರ್ಥ್ಯ ನವಿಲು ತೀರ್ಥ ಅಣೆಕಟ್ಟಿಗೆ ಇದೆ.
ಬೇಸಿಗೆ ದಿನಗಳಲ್ಲಿ ಈ ಹೂಳೆತ್ತುವ ಕಾರ್ಯ ಪ್ರಾರಂಭಿಸಬೇಕಿತ್ತು. ಆದರೆ ಕುಡಿಯುವ ನೀರಿನ ಸಂಗ್ರಹವಿದ್ದುದರಿಂದ ಮುಂದಿನ ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಹೂಳೆತ್ತುವ ಕಾರ್ಯ ಪ್ರಾರಂಭಿಸಿದರೆ ಈ ಭಾಗದ ಜನರು ಮತ್ತು ರೈತರಿಗೆ ನೀರಿನ ಅಭಾವ ಉಂಟಾಗದು. ಹೇಳಿಕೊಳ್ಳುವಷ್ಟು ಹೂಳು ಆಣೆಕಟ್ಟಿನಲ್ಲಿಲ್ಲ. ಹೂಳೆತ್ತುವ ಕಾರ್ಯ ನಡೆಯಬೇಕೆಂದಲ್ಲಿ ಸರಕಾರವೇ ಅಂತಿಮ. ಎಲ್ಲ ಮಾಹಿತಿ ಆಧಾರದ ಮೇಲೆ ಸರಕಾರವೇ ಕ್ರಮ ಜರುಗಿಸಬೇಕು.
•ಡಿ.ಎಸ್. ಕೊಪ್ಪದ