ಧಾರವಾಡ: ಪತ್ರಿಕೋದ್ಯಮ ಕ್ಷೇತ್ರ ಇಂದು ಅಗಾಧವಾಗಿ ಬೆಳೆಯುತ್ತಿರುವ ಯುವ ಸಮುದಾಯಕ್ಕೆ ಆಕರ್ಷಕ ಮಾಧ್ಯಮವಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಸಂಪರ್ಕ ಮತ್ತು ವಾರ್ತಾ ಇಲಾಖೆಯ ಹಿರಿಯ ನಿರ್ದೇಶಕ ಮಂಜುನಾಥ ಡೊಳ್ಳಿನ ಅಭಿಪ್ರಾಯಪಟ್ಟರು.
ಕರ್ನಾಟಕ ಕಲಾ ಮಹಾವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂವಹನ ಕ್ಲಬ್‌ನ ವಾರ್ಷಿಕ ಚಟುಟಿಕೆಗಳ ಸಮಾರೋಪ ಮತ್ತು ಬಿಎ ಅಂತಿಮ ಪತ್ರಿಕೋದ್ಯಮ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ಅನೇಕ ವಿದ್ಯುನ್ಮಾನ ಮತ್ತು ಪತ್ರಿಕೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂದಿನ ಯುವ ಸಮುದಾಯ ಈ ಕ್ಷೇತ್ರಕ್ಕೆ ಬರುವ ಸಂಖೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಇಂದಿನ ವಿದ್ಯಾರ್ಥಿಗಳು ಪ್ರಸಕ್ತ ವಿದ್ಯಮಾನಗಳ ಜತೆಗೆ ಸಾಹಿತ್ಯದತ್ತ ಒಲವು ಬೆಳೆಸಿಕೊಂಡು ಭಾಷೆಯ ಮೇಲೆ ಪ್ರಭುತ್ವ ಹೊಂದಿರಬೇಕು ಎಂದರು.
ಉಪಪ್ರಾಚಾರ್ಯ ಡಾ|ರಾಜೇಶ್ವರಿ ಮಹೇಶ್ವರಯ್ಯ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಾಹಿತ್ಯ ಅಧ್ಯಯನದಿಂದ ಭಾಷೆಯ ಹಿಡಿತ ಸಾಧಿಸಬೇಕು ಎಂದರು. ಪ್ರಾಚಾರ್ಯ ಡಾ|ಎಸ್.ಎಸ್.ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೋದ್ಯಮದ ವಿಭಾಗದ ಉಪನ್ಯಾಸಕ ಡಾ|ಪ್ರಭಾಕರ ಕಾಂಬಳೆ ಮಾತನಾಡಿದರು.
ಮೇ 30ರಂದು ನಿವೃತ್ತಿ ಹೊಂದುತ್ತಿರುವ ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|ಎಸ್.ಎಸ್. ಕಟ್ಟಿಮನಿ ಅವರನ್ನು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದ ವಿಭಾಗದ ಸಂವಹನ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಪತ್ರಿಕೋದ್ಯಮ ವಿಭಾಗದ ಬಿ.ಎ. ಅಂತಿಮ ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು. ಅವರಿಗೆ ಗುಲಾಬಿ ಹೂ ಮತ್ತು ಪೆನ್ನು ನೀಡುವ ಮೂಲಕ ಶುಭ ಹಾರೈಸಲಾಯಿತು. ರವಿಚಂದ್ರನ್ ಸ್ವಾಗತಿಸಿದರು. ಮಂಜುನಾಥ ಪರಿಚಯಿಸಿದರು. ಐಶ್ವರ್ಯ ರಾಜಪುರೋಹಿತ, ಸೈದಾಬಿ ಹೂಲಿ ನಿರೂಪಿಸಿದರು. ಅಂಕಿತಾ ಕುಲಕರ್ಣಿ ವಂದಿಸಿದರು.