ಬೆಂಗಳೂರು: ಕಾಂಗ್ರೆಸ್‌ನಿಂದ ದೂರವಾಗಿರುವ ಪ್ರಮುಖ ಸಮುದಾಯಗಳನ್ನು ಗಮನದಲ್ಲಿಟ್ಟು ಕೊಂಡು ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಒತ್ತಾಯಿಸಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಿಎಂ ವೀರೇಂದ್ರ ಪಾಟೀಲರ ಬಳಿಕ ಕಾಂಗ್ರೆಸ್‌ನಿಂದ ಲಿಂಗಾಯತ ಸಮುದಾಯ ದೂರವಾಗಿದೆ. ಲಿಂಗಾಯತ ಸಮುದಾಯ ಸೇರಿ ಅನೇಕ ಸಮುದಾಯಗಳು ಕಾಂಗ್ರೆಸ್‌ನಿಂದ ದೂರ ಹೋಗುತ್ತಿವೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪಕ್ಷದ ನಾಯಕತ್ವದ ಜವಾಬ್ದಾರಿ ವಹಿಸುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ಸಮುದಾಯಗಳ ವಿಶ್ವಾಸ ಪಡೆಯುವುದು ಅಗತ್ಯ. ಹೀಗಾಗಿ ಕೆಪಿಸಿಸಿ ಸಾರಥ್ಯ ನೇಮಕ ಯಾವ ರೀತಿಯಲ್ಲಿ ನಡೆದರೆ ಪಕ್ಷಕ್ಕೆ ಅನುಕೂಲ ಎಂಬ ಬಗ್ಗೆ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರಿಗೆ ಸಲಹೆ ನೀಡಲಾಗಿದೆ. ನನ್ನನ್ನೇ ಆಯ್ಕೆ ಮಾಡಿ ಎಂದು ಎಂದಿಗೂ ಲಾಬಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದು ಮಾಸ್ ಲೀಡರ್: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಪರವಾಗಿಯೋ ಮತ್ತಿನ್ಯಾರ ಪರವಾಗಿಯೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನುವುದು ಗೊತ್ತಿಲ್ಲ. ಸಿದ್ದರಾಮಯ್ಯ ಇಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆ ಕಷ್ಟವಿದೆ.
ಪಕ್ಷದಲ್ಲಿರುವ ಏಕೈಕ ಮಾಸ್ ಲೀಡರ್ ಸಿದ್ದರಾಮಯ್ಯ ಅವರ ನಾಯಕತ್ವ ಹಾಗೂ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನಖರ್ಗೆ ಅವರ ಸಲಹೆ ಮತ್ತು ಪ್ರಮುಖ ಸಮುದಾಯಗಳ ನಾಯಕರನ್ನು ಒಳಗೊಂಡಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಸ್ಥಾನಗಳನ್ನು ಹಂಚಿಕೆ ಮಾಡಬೇಕೆಂದರು. ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ ಶಿಕ್ಷಣ-ಉದ್ಯೋಗದಲ್ಲಿ ಶೇ.16 ಮೀಸಲಾತಿ ನೀಡುವಂತೆ ಎಂ.ಬಿ.ಪಾಟೀಲ್ ಇದೇ ವೇಳೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.