ಮಾನ್ವಿ: ಈ ನೆಲದ ಜ್ಞಾನ ಶಿಕ್ಷಕರು ತಿಳಿದಾಗ ಮಾತ್ರ ಮಕ್ಕಳಿಗೆ ತಿಳಿಸಲು ಸಾಧ್ಯ. ಆಗ ಮಾತ್ರ ವಿದ್ಯಾರ್ಥಿಗಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಹಿರಿಯ ಸಾಹಿತಿ ಜಯಲಕ್ಷ್ಮೀ ಮಂಗಳಮೂರ್ತಿ ಹೇಳಿದರು.
ಪಟ್ಟಣದ ನೇತಾಜಿ ಶಾಲೆಯಲ್ಲಿ ತಾಲೂಕು ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವರ್ತಮಾನದಲ್ಲಿ ಮೌಲ್ಯಯುತ ಶಿಕ್ಷಣ ನೀಡುವ ಅಗತ್ಯವಿದೆ. ಶಾಲೆಗಳಲ್ಲಿ ಮಕ್ಕಳು ತಮ್ಮನ್ನು ತಾವು ಅರಿತುಕೊಳ್ಳುವ ಶಕ್ತಿ ತುಂಬುವ ನಿಟ್ಟಿನಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ. ಇಂದಿನ ದಿನಗಳಲ್ಲಿ ಮಕ್ಕಳನ್ನು ಜಾಗತಿಕವಾಗಿ ವಿಶ್ವಮಾನವನನ್ನಾಗಿ ಬೆಳೆಸುವ ಅಗತ್ಯವಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಗಿರಿಧರ ಪೂಜಾರಿ “ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರು ಮತ್ತು ಶಿಕ್ಷಣದ ಪಾತ್ರ’ ಕುರಿತು ಮಾತನಾಡಿದರು. ನಂತರ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಜಾನಪದ ಹಾಡುಗಳಿಗೆ ನೃತ್ಯ ಪ್ರದರ್ಶನ ನಡೆಯಿತು. ಎಸ್‌ವಿಎಸ್ ಶಾಲೆ ಮಾನ್ವಿ ಪ್ರಥಮ, ಗುರುಕುಲ ಶಾಲೆ ಮಾನ್ವಿ ದ್ವಿತೀಯ, ಸರ್ಕಾರಿ ಹಿರಿಯ ಶಾಲೆ ಅಮರಾವತಿ ತೃತೀಯ ಸ್ಥಾನ ಪಡೆದವು. ಈ ವೇಳೆ ಪರಿಷತ್ತಿನ ಜಿಲ್ಲಾ ಘಟಕಾಧ್ಯಕ್ಷೆ ದಾನಮ್ಮ, ತಾಲೂಕು ಅಧ್ಯಕ್ಷೆ ಕೆ. ವಿಜಯಲಕ್ಷ್ಮೀ, ಕಾರ್ಯದರ್ಶಿ ಅನುರಾಧ, ತಾಲೂಕು ಘಟಕದ ಅಧ್ಯಕ್ಷ ತಾಯಪ್ಪ ಹೊಸೂರು, ಖಜಾಂಚಿ ಡಾ| ಅಂಬಿಕಾ ನಾಗಲಾಂಬಿಕೆ, ನಾಗರತ್ನಮ್ಮ ಬೆಟ್ಟದೂರು, ನೇತಾಜಿ ಸಂಸ್ಥೆ ಅಧ್ಯಕ್ಷ ನರಸಿಂಹ ಇದ್ದರು.