Advertisement
ಮಾರುಕಟ್ಟೆ ಮತ್ತು ಸಮಸ್ಯೆಗಳು ಒಂದೇ ನಾಣ್ಯದ ಎರಡು ಮುಖಗಳು ಎನ್ನುವಷ್ಟರಮಟ್ಟಿಗೆ ಮಾರುಕಟ್ಟೆಗಳ ಸ್ಥಿತಿ ತಲುಪಿದೆ. ಒತ್ತುವರಿ, ಉಪಗುತ್ತಿಗೆ, ಕಸ ವಿಲೇವಾರಿ, ಪ್ಲಾಸ್ಟಿಕ್ ಬಳಕೆ, ಹದಗೆಟ್ಟ ರಸ್ತೆ ಹೀಗೆ ಹಲವಾರು ಸಮಸ್ಯೆಗಳಿಂದ ನಲುಗುತ್ತಿವೆ. ಇದಕ್ಕಾಗಿ ಬಿಬಿಎಂಪಿ ಮೇಜರ್ ಸರ್ಜರಿ ಮಾಡಬೇಕಾದ ಅವಶ್ಯಕತೆ ಇದೆ ಎನ್ನುತ್ತಾರೆ ತಜ್ಞರು.
Related Articles
Advertisement
ವರದಿ ನೀಡುವುದಷ್ಟೇ ಕೆಲಸ: ಮಾರುಕಟ್ಟೆಗಳಲ್ಲಿ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲು ತೆಗೆದುಕೊಳ್ಳಬೇಕಾದ ಕ್ರಮಗಳಬಗ್ಗೆ ತಿಳಿಸುವಂತೆ ಹೈಕೋರ್ಟ್ ಆದೇಶದ ಮೇಲೆ ಅಗ್ನಿಶಾಮಕದಳ ಮಾರುಕಟ್ಟೆಗಳಲ್ಲಿ ಅಗ್ನಿಶಮನ ಸಾಧನ, ಆಂಬ್ಯುಲನ್ಸ್, ಅಗ್ನಿಶಾಮಕ ವಾಹನಗಳಿಗೆ ಜಾಗ ಸೇರಿದಂತೆ 19 ಅಂಶಗಳ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದು ವರದಿ ನೀಡಿತ್ತು.
ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಹೈಕೋರ್ಟ್ ಆದೇಶಿಸಿದೆ. ಆದರೆ, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಪರಿಶೀಲಿಸಿ ಮಾರ್ಗಸೂಚಿಗಳನ್ನು ನೀಡುವುದಕಷ್ಟೇ ಅಗ್ನಿಶಾಮಕ ಇಲಾಖೆಗೆ ಅಧಿಕಾರವಿದೆ. ಇದನ್ನು ಪಾಲಿಸುವುದು ಬಿಬಿಎಂಪಿಯ ಕೆಲಸ. ಮಾರುಕಟ್ಟೆಗಳು ಬಿಬಿಎಂಪಿ ಅಧೀನದಲ್ಲಿ ಇರುವುದರಿಂದ ಅವರೇ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎನ್ನುತ್ತಾರೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು.
ವ್ಯಾಪಾರಿಗಳೂ ಬದ್ಧತೆ ಪ್ರದರ್ಶಿಸಲಿ: ಮಾರುಕಟ್ಟೆ ಸ್ವಚ್ಛತೆಗೆ ಸಂಬಂಧಿಸಿದಂತೆ ಸಾರ್ವಜನಿಕರು, ಬಿಬಿಎಂಪಿ ಅಧಿಕಾರಿಗಳಷ್ಟೇ ಜವಾಬ್ದಾರಿಯು ವ್ಯಾಪಾರಿಗಳ ಮೇಲೂ ಇದೆ. ತಾವಿರುವ ಸುತ್ತಲಿನ ಪ್ರದೇಶ ಸ್ವಚ್ಛವಾಗಿ ಮತ್ತು ನಾವು ಪ್ಲಾಸ್ಟಿಕ್ ಕೈಚೀಲಗಳನ್ನು ಬಳಸುವುದಿಲ್ಲ ಎಂದು ಪಣ ತೊಡಬೇಕಿದೆ.
ಸ್ಥಳ ನೀಡಿ “ಸ್ಮಾರ್ಟ್’ ಕೆಲಸ ಆರಂಭಿಸಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಕೃಷ್ಣರಾಜೇಂದ್ರ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಆದರೆ, ಕಾಮಗಾರಿ ನಡೆಯುವಾಗ ವ್ಯಾಪಾರಿಗಳನ್ನು ಎಲ್ಲಿ ಸ್ಥಳಾಂತರಿಸಬೇಕು ಎನ್ನುವುದರ ಬಗ್ಗೆ ಇನ್ನೂ ಯೋಚಿಸಿಲ್ಲ. “ಹಂತ-ಹಂತವಾಗಿ ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಸಲಾಗುವುದು.
ಏಕಕಾಲಕ್ಕೆ ಕಾಮಗಾರಿ ನಡೆಸುವುದಿಲ್ಲ. ಕಾಮಗಾರಿ ನಡೆಯುವ ಪ್ರದೇಶದಲ್ಲಿ ಇರುವ ವ್ಯಾಪಾರಿಗಳನ್ನು ಮಾರುಕಟ್ಟೆಯ ಇನ್ನೊಂದು ಜಾಗಕ್ಕೆ ಸ್ಥಳಾಂತರಿಸಲಾಗುವುದು’ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ರೀತಿ ಮಾಡಿದರೆ ಮಾದರಿ ಯೋಜನೆಯೂ ಸಮಸ್ಯೆಯಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ. ಹೀಗಾಗಿ, ಕಾಮಗಾರಿ ಪ್ರಾರಂಭಿಸುವ ಮೊದಲು ಇಲ್ಲಿನ ವ್ಯಾಪಾರಿಗಳಿಗೆ ಜಾಗ ನೀಡಿ ಯೋಜನೆ ಪ್ರಾರಂಭಿಸಬೇಕಿದೆ.
ಮೇಯರ್ ಏನಂತಾರೆ?: ನಗರದ ಪಾರಂಪರಿಕ ಮಾರುಕಟ್ಟೆಗಳನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ಮತ್ತು ಗ್ರಾಹಕರೂ ಬಿಬಿಎಂಪಿಯೊಂದಿಗೆ ಸಹಕಾರ ನೀಡಬೇಕು ಎನ್ನುತ್ತಾರೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್.ಕೆ.ಆರ್.ಮಾರುಕಟ್ಟೆ ಮತ್ತು ರಸೆಲ್ ಮಾರುಕಟ್ಟೆಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು. ಎರಡೂ ಮಾರುಕಟ್ಟೆಗಳಿಗೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳು ನಡೆಯಲಿವೆ. ಕೆ.ಆರ್.ಮಾರುಕಟ್ಟೆಯ ಕೆಲವು ಭಾಗಗಳು ತುಂಬಾ ಶಿಥಿಲಗೊಂಡಿದ್ದು, ಅವುಗಳನ್ನು ನೆಲಸಮಗೊಳಿಸಿ, ಮರುನಿರ್ಮಾಣ ಮಾಡಬೇಕಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದರು. ಮಾರುಕಟ್ಟೆ ಒತ್ತುವರಿ ತೆರವು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಪ್ರತಿ ಬಾರಿ ಮಾರುಕಟ್ಟೆ ಪ್ರದೇಶಗಳಿಗೆ ಭೇಟಿ ನೀಡಿದ ದಿನ ಮಾತ್ರ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಸ್ವಚ್ಛತೆ ಕಾಪಾಡಿಕೊಳ್ಳುತ್ತಿದ್ದಾರೆ. ಅದರ ಮರುದಿನ ಮಾರುಕಟ್ಟೆ ಯಥಾಸ್ಥಿತಿ ತಲುಪುತ್ತಿದೆ. ಇದನ್ನು ನಿಭಾಯಿಸುವುದಕ್ಕೆ ದಂಡ ವಿಧಿಸುವುದೊಂದೇ ಉಪಾಯ ಎನ್ನುವ ಸಲಹೆಗಳು ಬರುತ್ತಿವೆ. ಆದರೆ, ವ್ಯಾಪಾರಿಗಳ ಹಿತದೃಷ್ಟಿಯಿಂದ ಈ ಕ್ರಮ ಕಷ್ಟ. ದಂಡ ಪ್ರಯೋಗವೇ ಕೊನೆಯ ಅಸ್ತ್ರ ಎನ್ನುವಂತಾಗಬಾರದು ಎಂದು ಅಭಿಪ್ರಾಯಪಟ್ಟರು. ಕಸದ ಡಬ್ಬಿ ನೀಡುವುದಕ್ಕೆ ಚಿಂತನೆ: ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಪ್ಪಿಸುವ ಉದ್ದೇಶದಿಂದ ಅವರಿಗೆ ಕಸದ ಡಬ್ಬಿಗಳನ್ನು ನೀಡಲು ಚಿಂತಿಸಲಾಗುತ್ತಿದೆ. ಇದಕ್ಕೆ ಯಾವುದಾದರು ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿ ಯೋಜನೆಯ ಮೂಲಕ ನೆರವು ನೀಡಿದರೆ ಈ ಯೋಜನೆಯನ್ನು ಜಾರಿ ಮಾಡಬಹುದು ಎಂದು ಮೇಯರ್ ಹೇಳಿದರು. “ಉದಯವಾಣಿ’ ಅಭಿಯಾನಕ್ಕೆ ಮೆಚ್ಚುಗೆ: “ಉದಯವಾಣಿ’ ನಡೆಸಿದ “ಮಾರುಕಟ್ಟೆಗೆಂದು ಕಾಯಕಲ್ಪ’ ಅಭಿಯಾನಕ್ಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಗರದ ಪಾರಂಪರಿಕ ಮಾರುಕಟ್ಟೆಗಳ ಬಗ್ಗೆ ತಿಳಿಸುವುದರ ಜತೆಗೆ ಅಲ್ಲಿನ ಸಮಸ್ಯೆಗಳನ್ನು “ಉದಯವಾಣಿ’ ಹೊರಗೆಳೆದಿದೆ. ಈ ಸಮಸ್ಯೆಗಳಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. * ಹಿತೇಶ್ ವೈ