Advertisement

ಮೂಲ್ಕಿ ಸಮೀಪ ನಿಂತ ಲಾರಿಗೆ ಬಸ್‌ ಢಿಕ್ಕಿ: ಓರ್ವ ಸಾವು ; ಹಲವರಿಗೆ ಗಾಯ

08:43 PM Mar 31, 2017 | Team Udayavani |

ಮೂಲ್ಕಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕ್ಷೀರ ಸಾಗರದ ಬಳಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು, ಇನ್ನೋರ್ವ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಹಲವು ಪ್ರಯಾಣಿಕರಿಗೆ ಸಣ್ಣಸ್ವರೂಪದ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಹೆದ್ದಾರಿ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಮಂಗಳೂರಿನಿಂದ ಮಣಿಪಾಲಕ್ಕೆ ತೆರಳುತ್ತಿದ್ದ ಖಾಸಗಿ ಎಕ್ಸ್‌ಪ್ರಸ್‌ ಬಸ್ಸು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

Advertisement

ಅಪಘಾತದಲ್ಲಿ ಮೃತಪಟ್ಟವರನ್ನು ನಾರಾವಿಯ ಈದು ಸಮೀಪದ ನಿವಾಸಿ ಎಲ್ಸನ್‌ ಜಾಯ್‌
ಡಿ’ಸೋಜಾ (26) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ರಾಕೇಶ್‌ ಕೇರಳ, ಪಿನೀಶ್‌ ಲಾಲ್‌ ಕೇರಳ, ಕಾರ್ಕಳ ಹಿರ್ಗಾನದ ಅಶೋಕ್‌, ಶಿರ್ವ ಮಂಚಕಲ್‌ ನಿವಾಸಿ ಮಂಜುನಾಥ್‌, ಉದ್ಯಾವರದ ರೊನಾಲ್ಡ್‌ ಮತ್ತು ಬೆಳಪುವಿನ ಗಣೇಶ್‌ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮುಕ್ಕದಲ್ಲಿರುವ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಢಿಕ್ಕಿ ಹೊಡೆದ ರಭಸಕ್ಕೆ ಎಕ್ಸ್‌ಪ್ರಸ್‌ ಬಸ್ಸಿನ ಎಡಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಈ ಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರಲ್ಲಿ ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ ಉಳಿದವರು ಸಣ್ಣಸ್ವರೂಪದ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಸಿಲ್ಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಿಸಲ್ಪಟ್ಟವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಘಟನೆಗೆ ನಿಖರ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲವಾದರೂ, ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಯನ್ನು ಬಸ್ಸಿನ ಚಾಲಕ ಸರಿಯಾಗಿ ಗಮನಿಸದೇ ಇದ್ದುದೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಅಪಘಾತವಾದ ಬಳಿಕ ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತವಾದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಬಸ್ಸಿನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ಅಪಘಾತದ ಕಾರಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಸಮಯ ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರ ಸುವ್ಯವಸ್ಥೆಗೆ ಅನುವು ಮಾಡಿಕೊಡುತ್ತಿದ್ದಾರೆ. ಅಪಘಾತಕ್ಕೆ ಕಾರಣವಾಗಿರುವ ಸಿಮೆಂಟ್‌ ತುಂಬಿದ್ದ ಲಾರಿಯು ಇಂದು ಬೆಳಗ್ಗೆಯಿಂದಲೇ ಹೆದ್ದಾರಿ ಬಳಿಯಲ್ಲಿ ಕೆಟ್ಟು ನಿಂತಿತ್ತು. ಆದರೂ ಸಂಚಾರಿ ಪೊಲೀಸರು ಈ ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಬ್ಯಾರಿಕೇಡ್‌ ಗಳನ್ನೂ ಸಹ ಹಾಕಿರಲಿಲ್ಲ. ಇದೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

– ಸುದ್ದಿ – ಚಿತ್ರ ಮಾಹಿತಿ: ನರೇಂದ್ರ ಕೆರೆಕಾಡು

Advertisement

ಅಪಘಾತದ ಇನ್ನಷ್ಟು ಚಿತ್ರಗಳು…





Advertisement

Udayavani is now on Telegram. Click here to join our channel and stay updated with the latest news.

Next