Advertisement

Bandaru-ಕೊಕ್ಕಡ ಬೆಸೆಯುವ ಮೈಪಾಲ ಸೇತುವೆ ಸಿದ್ಧ

12:55 PM Aug 14, 2024 | Team Udayavani |

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಬಂದಾರು ಮತ್ತು ಕೊಕ್ಕಡ ಗ್ರಾಮಗಳನ್ನು ಸಂಪರ್ಕಿಸುವ ಮೈಪಾಲ ಎಂಬಲ್ಲಿ ನೇತ್ರಾವತಿ ನದಿಗೆ ನಿರ್ಮಿಸಲಾದ 72 ಕೋಟಿ ವೆಚ್ಚದ ನೂತನ ಕಿಂಡಿಅಣೆಕಟ್ಟು ಸಹಿತ ಸೇತುವೆಯ ಕಾಮಗಾರಿ ಒಂದೂವರೆ ವರ್ಷದೊಳಗೆ ಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧವಾಗಿದೆ. ಇದರಿಂದ 12 ಗ್ರಾಮಗಳ ಜನರಿಗೆ ಕೊಕ್ಕಡದ ನಾಡ ಕಚೇರಿಯನ್ನು ನೇರವಾಗಿ ಸಂಪರ್ಕಿಸಲು ಅನುಕೂಲವಾಗಲಿದೆ. ಜತೆಗೆ ನೀರಾವರಿಗೂ ಉಪಯೋಗವಾಗಲಿದೆ.

Advertisement

ಮೈಪಾಲದಲ್ಲಿ ಸೇತುವೆ ನಿರ್ಮಾಣ ಹಲವು ವರ್ಷಗಳ ಬೇಡಿಕೆ. ಗ್ರಾಮ ಪಂಚಾ ಯತ್‌ಗಳಲ್ಲಿ ಹಲವಾರು ಬಾರಿ ನಿರ್ಣಯ ಮಾಡಿ ಕಳುಹಿಸಲಾಗಿತ್ತು. ಜನಪ್ರತಿನಿಧಿಗಳೂ ಮನವಿ ಮಾಡುತ್ತಿದ್ದರು. ಆದರೆ ದೊಡ್ಡ ಮಟ್ಟದ ಬಜೆಟ್‌ ಬೇಕು ಎಂಬ ಕಾರಣಕ್ಕೆ ಅದಕ್ಕೆ ಮಂಜೂರಾತಿ ಸಿಕ್ಕಿರಲಿಲ್ಲ. ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರು ಈ ಭಾಗದಲ್ಲಿ ಚುನಾವಣ ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿನ ಜನರು ಇದೇ ಮನವಿ ಮುಂದಿಟ್ಟಿದ್ದರು. ಶಾಸಕನಾಗಿ ಆಯ್ಕೆಯಾದರೆ ತಮ್ಮ ಬೇಡಿಕೆಯನ್ನು ಈಡೇರಿಸುವುದಾಗಿ ಪೂಂಜ ಅವರು ಭರವಸೆ ನೀಡಿದ್ದರು. ಜನರ ಪ್ರಯತ್ನ ಮತ್ತು ಶಾಸಕರ ಪರಿಶ್ರಮದ ಫ‌ಲವಾಗಿ ಸರಕಾರ 72 ಕೋಟಿ ರೂ. ವೆಚ್ಚದ ಕಿಂಡಿಅಣೆಕಟ್ಟು ಸಹಿತ ಸೇತುವೆಯನ್ನು ಮಂಜೂರುಗೊಳಿಸಲಾಗಿತ್ತು.

ಒಂದೂವರೆ ವರ್ಷದ ಒಳಗೆ ಸೇತುವೆ

2023 ಮಾ.10ರಂದು ಶಾಸಕ ಹರೀಶ್‌ ಪೂಂಜ ಅವರು ಮೈಪಾಲದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಒಂದು ವರ್ಷದಿಂದ ನಿರಂತರ ಕಾಮಗಾರಿ ನಡೆದು ಈಗ ಸೇತುವೆ ಸಿದ್ಧವಾಗಿದೆ.

ನಾಡ ಕಚೇರಿ ಸಂಪರ್ಕಕ್ಕೆ ಅನುಕೂಲ

Advertisement

ಕಣಿಯೂರು, ಬಂದಾರು, ಬೆಳಾಲು, ಮೊಗ್ರು, ಇಳಂತಿಲ, ಉರುವಾಲು, ತೆಕ್ಕಾರು, ಬಾರ್ಯ, ತಣ್ಣೀರುಪಂತ, ಮಚ್ಚಿನ ಸೇರಿದಂತೆ ಸುಮಾರು ಹತ್ತು ಗ್ರಾಮಗಳು ಕೊಕ್ಕಡ ಹೋಬಳಿ ವ್ಯಾಪ್ತಿಗೆ ಬರುತ್ತದೆ. ಯಾವುದೇ ಸರಕಾರಿ ಸವಲತ್ತಿಗೂ ಅವರು ನಾಡಕಚೇರಿ ಇರುವ ಕೊಕ್ಕಡಕ್ಕೆ ಹೋಗಬೇಕಾಗಿದೆ.

ಈ ಭಾಗದ ಜನರು ಕೊಕ್ಕಡಕ್ಕೆ ಹೋಗ ಬೇಕಾದರೆ ಒಂದೋ ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಪಟ್ರಮೆ ಮೂಲಕ, ಇಲ್ಲವೇ ಕುಪ್ಪೆಟ್ಟಿ, ಕಣಿಯೂರು, ಪದ್ಮುಂಜ, ಉಜಿರೆ, ಧರ್ಮಸ್ಥಳ, ಪಟ್ರಮೆ ಅಥವಾ ನಿಡ್ಲೆ ಮೂಲಕ ಸಾಗಬೇಕು. ಇಲ್ಲವೇ ಉಪ್ಪಿನಂಗಡಿ ಮೂಲಕ ಸುತ್ತು ಬಳಸಿ ಹೋಗಬೇಕು. ಭಾಗದ ಜನರು ಕಚೇರಿಯಲ್ಲಿ ಹೋಬಳಿ ಕೇಂದ್ರ ಮಾಡುವಂತೆ ಬೇಡಿಕೆ ಸಲ್ಲಿಸಿದರೂ ಆಗಿರಲಿಲ್ಲ. ಇದೀಗ ಮೈಪಾಲ ಮೂಲಕ ಕೊಕ್ಕಡಕ್ಕೆ ಕೇವಲ ಐದು ಕಿ.ಮೀ. ದೂರವಿದೆ. ಜನರಿಗೆ ಅನುಕೂಲವಾಗಲಿದೆ.

ಶ್ರೀಕಂಠಪ್ಪ ಅವರು ಸಂಸದ ರಾಗಿದ್ದಾಗ ಈ ಭಾಗದಲ್ಲಿ ಗ್ರಾಮ ಸಡಕ್‌ ರಸ್ತೆ ಮಾಡಿದ್ದರು. ಸೇತುವೆ ಬೇಡಿಕೆಗೆ ಹರೀಶ್‌ ಪೂಂಜ ಅವರು ಸ್ಪಂದಿಸಿ ಕಿಂಡಿ ಅಣೆಕಟ್ಟನ್ನು ಒಂದೇ ವರ್ಷದಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ಅಂತರ್ಜಲ ಹೆಚ್ಚಿ ಕೃಷಿಗೆ ಅನುಕೂಲವಾಗಲಿದೆ. ಕೊಕ್ಕಡ ಸಂಪರ್ಕಕ್ಕೆ ಇದು ಹೆದ್ದಾರಿಯಾಗಲಿದೆ.
-ಮಹಾಬಲ ಗೌಡ, ತಾ.ಪಂ. ಮಾಜಿ ಸದಸ್ಯ ಬಂದಾರು

ಸುಮಾರು 25 ವರ್ಷಗಳ ಕಾಲ ನನ್ನ ತಂದೆ ಬೋರೆ ಗೌಡ ಅವರು ಮಳೆಗಾಲದಲ್ಲಿ ದೋಣಿ ನಡೆಸುತ್ತಿದ್ದರು. ಈಗ ಐದು ವರ್ಷದಿಂದ ನಾನು ನಡೆಸುತ್ತೇನೆ. ಈಗ ವಯಸ್ಸಾದ ಕಾರಣಕ್ಕೆ ದೋಣಿ ನಡೆಸುವುದನ್ನು ನಿಲ್ಲಿಸಿದ್ದೇನೆ. ಜಾಸ್ತಿ ನೀರು ಇರುವಾಗ ರಿಸ್ಕ್ ತೆಗೆದುಕೊಂಡು ದಾಟುವುದು ತುಂಬಾ ಕಷ್ಟ.
-ಅಣ್ಣಿ ಗೌಡ ಮೈಪಾಲ, ದೋಣಿ ನಡೆಸುತ್ತಿದ್ದವರು

ಎಷ್ಟು ದೊಡ್ಡ ಸೇತುವೆ?

ಸೇತುವೆಯು 180 ಮೀಟರ್‌ ಉದ್ದ, 7.5 ಮೀಟರ್‌ ಅಗಲ ಮತ್ತು 11.50 ಮೀಟರ್‌ ಎತ್ತರ ಇದ್ದು, 12 ಪಿಲ್ಲರ್‌ಗಳನ್ನು ಹೊಂದಿದೆ.

ಸೇತುವೆಯ ಜತೆಗೆ ಕಿಂಡಿ ಅಣೆಕಟ್ಟು ಇರುವುದರಿಂದ 13 ಕಿಂಡಿಗಳನ್ನು ರಚಿಸಲಾಗಿದೆ.

ಸೇತುವೆಯ ಎರಡು ಬದಿಗೆ ತಡೆಗೋಡೆ ನಿರ್ಮಿಸಲಾಗಿದೆ. ಸೇತುವೆಯ ಇಕ್ಕೆಲಗಳಲ್ಲಿ ಮಣ್ಣಿನ ರಸ್ತೆಗಳಿದ್ದು, ಸೇತುವೆಗೆ ರಸ್ತೆ ಸಂಪರ್ಕಕ್ಕಾಗಿ ಮಣ್ಣು ತುಂಬಿಸುವ ಕಾರ್ಯ ನಡೆದಿದೆ.

ಕಿಂಡಿ ಅಣೆಕಟ್ಟಿನಲ್ಲಿ ಬೇಸಗೆ ಕಾಲದಲ್ಲಿ ನೀರು ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ ನೀರು ನಿಲ್ಲಲು ಫೈಬರ್‌ ತಂತ್ರಜ್ಞಾನದ (ಎಫ್ಆರ್‌ಸಿ) ಹಲಗೆಯುಳ್ಳ ಲಿಫ್ಟ್ ಗೇಟನ್ನು ಅಳವಡಿಸಲಾಗಿದೆ.

ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದ್ದಂತೆ ಆಟೋಮೆಟಿಕ್‌ ಆಗಿ ಗೇಟು ಹಾಕುವ ಹಾಗೂ ನೀರು ಜಾಸ್ತಿ ಬಂದಾಗ ಗೇಟನ್ನು ತೆರೆಯುವ ತಂತ್ರಜ್ಞಾನ ಇಲ್ಲಿರಲಿದೆ.

ಮೈಪಾಲ ಸೇತುವೆಯಿಂದ ಲಾಭವೇನು?

  • ಕೊಕ್ಕಡ ನಾಡಕಚೇರಿಗೆ ಸಂಬಂಧಿಸಿದ 10ಕ್ಕೂ ಮಿಕ್ಕಿ ಗ್ರಾಮಗಳು ನೇತ್ರಾವತಿಯ ಈಚೆ ದಡದಲ್ಲಿವೆ. ಇದೀಗ ಕೊಕ್ಕಡ ಸಂಪರ್ಕಕ್ಕೆ ಅನುಕೂಲ.
  • ಬಂದಾರು, ಪಟ್ರಮೆ ಮೂಲಕ ನೆಲ್ಯಾಡಿ, ಗೋಳಿತೊಟ್ಟು ಹತ್ತಿರದ ಸಂಪರ್ಕವಾಗಲಿರುವುದರಿಂದ ಧರ್ಮಸ್ಥಳ ಹಾಗೂ ಸೌತಡ್ಕ ಕ್ಷೇತ್ರಕ್ಕೆ ಬರುವ ಯಾತ್ರಿಕರಿಗೂ ಪ್ರಯೋಜನ
  • ಕಿಂಡಿಅಣೆಕಟ್ಟಿನಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ಅಭಿವೃದ್ಧಿಯ ಜತೆಗೆ ಸ್ಥಳೀಯ ಕೃಷಿಕರಿಗೆ ಕೃಷಿಗೆ ಅನುಕೂಲ.

– ಎಂ.ಎಸ್‌.ಭಟ್‌

Advertisement

Udayavani is now on Telegram. Click here to join our channel and stay updated with the latest news.

Next