Advertisement
ಮಳೆಗಾಲಕ್ಕೆ ಬೇಕಾದ ಆವಶ್ಯಕ ವಸ್ತುಗಳನ್ನು ಮುಂಚಿತವಾಗಿಯೇ ತಂದಿಟ್ಟುಕೊಳ್ಳುವ ಪರಿಸ್ಥಿತಿ ಇಂದಿಗೂ ಇದೆ. ಸಾಮಗ್ರಿಗಳನ್ನೇನೋ ಮುಂಚಿತವಾಗಿಯೇ ತಂದಿಡಬಹುದು ಆದರೆ ಆರೋಗ್ಯ ಹಾಗಲ್ಲವಲ್ಲ; ಅದು ಹೇಗೆ ಯಾವಾಗ ಕೆಡುತ್ತದೆಯೋ ಯಾರಿಗೂ ತಿಳಿಯದು. ಹೀಗಿದ್ದಾಗ ಅನಿವಾರ್ಯ ಸಂಚಾರಕ್ಕೆಂದೇ ಅವರು ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ಪರ್ಯಾಯ ಮಾರ್ಗವೇ ತೆಪ್ಪ.
Related Articles
Advertisement
ಪೇಟೆಗೆ ಹೋದವರು ಮರಳಿ ಬರಲು ಹೊತ್ತಾಗುತ್ತಿತ್ತು. ಮತ್ತೆ ತೆಪ್ಪದ ಮೇಲೆಯೇ ದಾಟಿ ಬರಬೇಕು. ನಮ್ಮ ಸಮಯಕ್ಕೆ ದಾಟಿಸುವವರು ಬೇಕಲ್ಲವೇ. ಅದಕ್ಕಾಗಿಯೇ ಅವರು ಆರುನೂರು ಮೀಟರ್ ದೂರದಲ್ಲಿರುವ ಮನೆಗಳಿಗೆ ಕೇಳಿಸುವ ಹಾಗೆ “ಕೂ’ ಹಾಕಬೇಕಿತ್ತು. ಅದು ಒಮ್ಮೊಮ್ಮೆ ಕೇಳಿಸಿದರೆ ಕೇಳಿಸಿತು ಇಲ್ಲವೆಂದರೆ ಇಲ್ಲ.
ನನಗಿನ್ನೂ ನೆನಪಿದೆ, ನಾನಾಗ ಚಿಕ್ಕವನು. ನನ್ನಪ್ಪ ಅಮ್ಮ, ನಾನು ಪೇಟೆಯಿಂದ ಸಂಜೆಯ ವೇಳೆಗೆ ನದಿಯ ಹತ್ತಿರ ಬಂದು ಎಷ್ಟೇ “ಕೂ’ ಹಾಕಿದರೂ ಯಾವುದೆ ಪ್ರತಿಕ್ರಿಯೆ ಸಿಗದ ದಿನಗಳಿದ್ದವು. ಕೊನೆಗೆ ರಾತ್ರಿ ಮೀನು ಹಿಡಿಯುವವರು ನಮ್ಮನ್ನು ನದಿ ದಾಟಿಸಿದ್ದುಂಟು.
ತೆಪ್ಪ ದಾಟಿಸುವಾಗ ನೀರಿನ ಸುಳಿಗೆ ಸಿಲುಕಿ ಒಮ್ಮೆಲೇ ಕೆಳಕ್ಕೆ ಬಿದ್ದು ಮತ್ತೇ ಮೇಲೆ ಬರುವುದು ಸಹಜ. ಅದರಲ್ಲಿ ಕೂತ ಹೆಣ್ಣುಮಕ್ಕಳಿಗಂತೂ ತೆಪ್ಪ ತೇಲುವಾಗ ಭಯವಾಗಿ ಗಟ್ಟಿಯಾಗಿ ಕಿರುಚಿಕೊಂಡ ಉದಾಹರಣೆಗಳೂ ಇವೆ. ಎಷ್ಟೇ ಭಯವಾದರು ದಾಟುವುದು ಅನಿವಾರ್ಯವಾಗಿತ್ತು.
ನೋಡುಗರಿಗೆ ಇದು ಸಾಮಾನ್ಯವಾದ ನದಿ ದಾಟುವ ತೆಪ್ಪ. ಆದರೆ ಈ ಊರಿಗೂ ತೆಪ್ಪಕ್ಕೂ ಇರುವ ನಂಟು ಅವಿಸ್ಮರಣೀಯ. ನಿಧಾನವಾಗಿ ಇಂದಿಗೆ ಅದರ ಸ್ಥಾನವನ್ನು ಫೈಬರ್ ದೋಣಿಗಳು ಅಲಂಕರಿಸಿದರೂ ತೆಪ್ಪದ ಸಂಚಾರದ ಅಂದಿನ ದಿನಗಳ ನೆನಪು ಎಂದಿಗೂ ಮಾಸಿಹೋಗದು.
–ಸಂಜಯ್ ಸಿದ್ದಿ
ಎಂ.ಎಂ., ಮಹಾವಿದ್ಯಾಲಯ ಶಿರಸಿ