Advertisement

ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಿ: ಬಾಲಕೃಷ್ಣ

09:10 PM Nov 06, 2019 | Team Udayavani |

ಮೈಸೂರು: ಈದ್‌ ಮಿಲಾದ್‌ ಆಚರಣೆ ಹಾಗೂ ಸುಪ್ರೀಂಕೋರ್ಟ್‌ನಿಂದ ಹೊರ ಬೀಳಲಿರುವ ಅಯೋಧ್ಯೆ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ನಗರ ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ ಶಾಂತಿ ಸಭೆ ನಡೆಸಿದರು. ಮುಂಬರುವ ಈದ್‌ ಮಿಲಾದ್‌ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡಬೇಕು ಹಾಗೂ ಅಯೋಧ್ಯೆ ಪ್ರಕರಣ ಸಂಬಂಧ ನ್ಯಾಯಾಲಯದ ತೀರ್ಪು ಯಾವ ರೀತಿ ಬಂದರೂ ವಿಜಯೋತ್ಸವ ಮೆರವಣಿಗೆ ಅಥವಾ ಪ್ರತಿಭಟನೆ ಮಾಡಬಾರದು ಎಂದು ತಿಳಿಸಲಾಯಿತು.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಬರುವ ವದಂತಿಗಳಿಗೆ ಯಾವುದೇ ಮಾನ್ಯತೆ ನೀಡಬಾರದು. ಪ್ರಚೋಧನಾಕಾರಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಮಾಹಿತಿ, ವದಂತಿ ಹರಡಬಾರದು. ಈ ಬಗ್ಗೆ ಮಸೀದಿಗಳಲ್ಲಿ ಪ್ರಾರ್ಥನೆ ಮುಗಿದ ನಂತರ ಸಮುದಾಯದ ಯುವಕರಿಗೆ ತಿಳಿವಳಿಕೆ ನೀಡಬೇಕು. ಈ ವಿಚಾರದಲ್ಲಿ ಪೊಲೀಸರು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಸಮಾಜದ ಶಾಂತಿಗೆ ಭಂಗವನ್ನುಂಟು ಮಾಡುವ ಯಾವುದೇ ಮಾಹಿತಿ ದೊರೆತಲ್ಲಿ ಕೂಡಲೇ ಹತ್ತಿರದ ಪೊಲೀಸ್‌ ಠಾಣೆಗೆ ಅಥವಾ ಪೊಲೀಸ್‌ ಕಂಟ್ರೋಲ್‌ ರೂಂ ದೂ.100, 2418339ಕ್ಕೆ ಮಾಹಿತಿ ನೀಡಬೇಕೆಂದು ಪೊಲೀಸ್‌ ಆಯುಕ್ತರು ಮನವಿ ಮಾಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಸಮುದಾಯದ ಮುಖಂಡರು ಪೊಲೀಸ್‌ ಆಯುಕ್ತರ ಸೂಚನೆ ಪಾಲಿಸುವುದಾಗಿ ಹಾಗೂ ಮೈಸೂರಿನ ಶಾಂತಿ-ಸುವ್ಯವಸ್ಥೆಗೆ ಸಹಕರಿಸುವುದಾಗಿ ತಿಳಿಸಿದರಲ್ಲದೆ,ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಪೊಲೀಸರಿಗೆ ನೀಡುವುದಾಗಿ ತಿಳಿಸಿದರು. ಡಿಸಿಪಿಗಳಾದ ಮುತ್ತುರಾಜು ಎಂ., ಬಿ.ಟಿ.ಕವಿತಾ, ಇತರೆ ಪೊಲೀಸ್‌ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next