Advertisement

ಬಿಜೆಪಿ ಕಾಂಗ್ರೆಸ್‌ಗೆ ಉತ್ತರ ಕರ್ನಾಟಕವೇ ಟಾರ್ಗೆಟ್‌ 

01:20 AM Feb 27, 2019 | |

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಈಗ ಉರಿ ಬಿಸಿಲು. ಅದರ ಜತೆಗೆ, ಲೋಕಸಭಾ ಚುನಾವಣೆ ಯ ಕಾವೂ ಏರತೊಡಗಿದೆ. ಉತ್ತರವನ್ನೇ ಕೇಂದ್ರವಾಗಿಸಿಕೊಂಡು ಪ್ರಮುಖ ರಾಜಕೀಯ ಪಕ್ಷಗಳು ಪ್ರಚಾರಾಂದೋಲನಕ್ಕೆ ಮುಂದಾಗಿವೆ. ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆಗೆ ಹುಬ್ಬಳ್ಳಿಯಿಂದ ರಣಕಹಳೆ ಮೊಳಗಿಸಿದ್ದರೆ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾವೇರಿಯಿಂದ ರಣಕೇಕೆಗೆ ಮುಂದಾಗಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಪ್ರಮುಖರು ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರಾಂದೋಲನಕ್ಕೆ ಚಾಲನೆ ನೀಡಲು ಆಯ್ಕೆ ಮಾಡಿಕೊಂಡಿರುವುದು ಉತ್ತರಕರ್ನಾಟಕವನ್ನೇ ಎನ್ನುವುದು ವಿಶೇಷ. ರಾಜ್ಯದ 28 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳು ಉತ್ತರ ಕರ್ನಾಟಕದಲ್ಲೇ ಬರುತ್ತವೆ. ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಪಡೆಯಬೇಕಾದರೆ ಉ.ಕ.ದಲ್ಲಿ ಪ್ರಾಬಲ್ಯ ಮೆರೆಯಬೇಕಾದ ಅನಿವಾರ್ಯತೆ ಇದೆ.

Advertisement

ಬಿಜೆಪಿ ಕಾರ್ಯತಂತ್ರ: ಮೋದಿಯವರು ಫೆ.10 ರಂದು ಉ.ಕ.ಭಾಗದ ಹುಬ್ಬಳ್ಳಿಯಲ್ಲಿ ಚುನಾವಣಾ ರಣಕಹಳೆ ಮೊಳಗಿಸುವ ಮೂಲಕ ರಾಜ್ಯದಲ್ಲಿ ಪಕ್ಷದ ಪರ ಪ್ರಚಾರಾಂದೋಲನಕ್ಕೆ ಶ್ರೀಕಾರ ಹಾಕಿದ್ದರು. ಮಾ.7ರಂದು ಹೈದರಾಬಾದ್‌ ಕರ್ನಾಟಕ ಪ್ರದೇಶದ ಕಲಬುರಗಿಯಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಫೆ.14ರಂದು ಸಿಂಧನೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಸಿದ್ದರು. ಬೀದರ ಜಿಲ್ಲೆ ಹುಮ್ನಾಬಾದ್‌ನಲ್ಲಿ “ಮೋದಿ ವಿಜಯ ಸಂಕಲ್ಪ ಯಾತ್ರೆ’ ಕೈಗೊಂಡ ಯಡಿಯೂರಪ್ಪ, ಕೇಂದ್ರ ಸಚಿವ ಪಿ.ರೂಪಾಲಾ ಸೇರಿದಂತೆ ಇನ್ನಿತರರು ಚುನಾವಣಾ ಸಮರಕ್ಕೆ ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಿದ್ದಾರೆ.

ಯಡಿಯೂರಪ್ಪ ಅವರು ವಿಜಯಪುರ, ಬಾಗಲಕೋಟೆ, ಗದಗ ಇನ್ನಿತರೆಡೆ ಯಾತ್ರೆ ಮುಂದುವರೆಸಿದ್ದಾರೆ. ಕಾರ್ಯಕರ್ತರ ಸಮಾವೇಶ ಕೈಗೊಳ್ಳಲಾಗಿದ್ದು, ರಾಜಸ್ಥಾನದ ಮಾಜಿ ಸಚಿವೆ ಕಿರಣ ಮಹೇಶ್ವರಿ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಎರಡೂ ಪಕ್ಷಕ್ಕೂ ಉಕ ಪ್ರಾಮುಖ್ಯ: ಉತ್ತರದಲ್ಲಿ ಪ್ರಾಬಲ್ಯ ಮೆರೆದವರು ಲೋಕ ಸಭೆಗೆ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಬಲ್ಲರು ಎಂಬುದು ಲೆಕ್ಕಾಚರ. 2014ರ ಲೋಕಸಭಾ ಚುನಾವಣೆ ನಂತರ ನಡೆದ ಉಪ ಚುನಾವಣೆಯ ಗೆಲುವಿನ ಅಂಕಿ-ಅಂಶ ನೋಡಿದರೆ, ಮುಂಬೈ ಕರ್ನಾಟಕದಲ್ಲಿ ಬಿಜೆಪಿ, ಹೈ-ಕದಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿವೆ. 2019ರಲ್ಲಿ ಎರಡೂ ಪಕ್ಷಗಳು ಇದ್ದ ಸ್ಥಾನ ಉಳಿಸಿಕೊಳ್ಳುವ, ಇನ್ನಷ್ಟು ಸ್ಥಾನ ಕಿತ್ತುಕೊಳ್ಳುವ ಪೈಪೋಟಿಗೆ ಮುಂದಾಗಿವೆ.

ಮುಂಬೈ ಕರ್ನಾಟಕದಲ್ಲಿನ ಏಳು ಲೋಕಸಭಾ ಕ್ಷೇತ್ರಗಳ ಪೈಕಿ 2014ರ ಚುನಾವಣೆಯಲ್ಲಿ ಬಿಜೆಪಿ ಬೆಳಗಾವಿ, ಧಾರವಾಡ, ಹಾವೇರಿ, ವಿಜಯಪುರ, ಬಾಗಲಕೋಟೆ ಹಾಗೂ ಉತ್ತರ ಕನ್ನಡ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಚಿಕ್ಕೋಡಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಗೆದ್ದಿತ್ತು. ಹೈ-ಕ ಪ್ರದೇಶದ ಐದು ಲೋಕಸಭಾ ಕ್ಷೇತ್ರಗಳ ಪೈಕಿ 2014ರಲ್ಲಿ ಬಿಜೆಪಿ ಬೀದರ, ಕೊಪ್ಪಳ, ಬಳ್ಳಾರಿಯಲ್ಲಿ ಗೆಲುವು ಸಾಧಿಸಿತ್ತು. ಕಲಬುರಗಿ, ರಾಯಚೂರುಗಳಲ್ಲಿ ಕಾಂಗ್ರೆಸ್‌ ಗೆದ್ದಿತ್ತು. 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರ ಕೈ ವಶವಾಗುವ ಮೂಲಕ ಹೈ-ಕದಲ್ಲಿ ಕಾಂಗ್ರೆಸ್‌ ತನ್ನ ಪ್ರಾಬಲ್ಯ ಮೆರೆದಂತಾಗಿದೆ.

ಕಾಂಗ್ರೆಸ್‌ ಕಾರ್ಯತಂತ್ರ
ಬಿಜೆಪಿಯ ಯತ್ನ ಗಳಿಗೆ ಎದುರೇಟು ನೀಡಲು ಕಾಂಗ್ರೆಸ್‌, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಂದ ಹಾವೇರಿ ಯಲ್ಲಿ ಲೋಕಸಭಾ ಚುನಾವಣಾ ರಣಕೇಕೆ ಮೊಳಗಿಸಲು ಮಾ.9ರಂದು ಸಮಾವೇಶ ಹಮ್ಮಿ ಕೊಂಡಿದೆ. ಈಗಾಗಲೇ ಕಾಂಗ್ರೆಸ್‌ ಪಕ್ಷ ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ, ಉದ್ಘಾಟನಾ ಕಾರ್ಯಕ್ರಮಗಳ ಮೂಲಕ ಲೋಕಸಭಾ ಚುನಾ ವಣಾ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲೇ ರಾಜಕೀಯ ವಿರೋಧಿಗಳಿಗೆ ಲೋಕಸಭಾ ಚುನಾವಣೆಯ ಪಂಥಾಹ್ವಾನ ನೀಡಿದ್ದಾರೆ. ರಾಯಚೂರಿನಲ್ಲಿ ನಡೆದ ಕೈ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳುವ ಮೂಲಕ ಲೋಕಸಭಾ ಚುನಾವಣಾ ಪ್ರಕ್ರಿಯೆ ಚುರುಕು ಪಡೆಯುವಂತೆ ಮಾಡಿದ್ದಾರೆ.

Advertisement

ಅಮರೇಗೌಡ ಗೊನೇವಾರ 

Advertisement

Udayavani is now on Telegram. Click here to join our channel and stay updated with the latest news.

Next