ಹುಬ್ಬಳ್ಳಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸರ್ಕಾರಕ್ಕೆ ಉರುಳಾಗುತ್ತದೆ. ಇದರಿಂದ ಸರ್ಕಾರ ಬಿದ್ದರೂ ಅಚ್ಚರಿ ಇಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಅಭಿವೃದ್ಧಿ ಹಗರಣ ಸರ್ಕಾರಕ್ಕೆ ಉರುಳಾಗುವುದು ಖಚಿತ. ಈ ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಹದ್ದು ಮೀರಿದೆ. ಕೇವಲ ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟರೆ ಸಾಲದು. ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ಹಗರಣ ನಡೆದಿದೆ. ಅವರೇ ಹಣಕಾಸು ಸಚಿವರಿದ್ದಾರೆ. ಅವರ ಗಮನಕ್ಕೆ ಇರಲಾರದೆ ಹಗರಣ ನಡೆಯುತ್ತದೆಯೇ? ಕಾರಣ ಮುಖ್ಯಮಂತ್ರಿಗಳು ಸಹ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ನಾಗೇಂದ್ರ ಅವರನ್ನು ಬಲಿ ಕೊಡಲಾಗಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಿದೆ. ಈ ಸರ್ಕಾರದಲ್ಲಿ 40 ಪರ್ಸೆಂಟ್ ಅಲ್ಲ, 60 ಪರ್ಸೆಂಟ್ ಕಮಿಷನ್ ಆಗಿದೆ. ರಾಜೀನಾಮೆ ಕೊಡುವುದಷ್ಟೆ ಅಲ್ಲ. ಇವರೆಲ್ಲ ಒಳಗೆ ಹೋಗುತ್ತಾರೆ ಎಂದರು.
ಬಸನಗೌಡ ದದ್ದಲ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಏಕೆ ಹೈದರಾಬಾದ್‌ಗೆ ಹೋಯಿತು? ಕಾಂಗ್ರೆಸ್ ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ನಾಲ್ಕೈದು ಮಂತ್ರಿಗಳಲ್ಲ. ಮುಖ್ಯಮಂತ್ರಿಗಳೇ ರಾಜೀನಾಮೆ ಕೊಡುವ ಪ್ರಸಂಗ ಬರುತ್ತದೆ ಎಂದು ಹರಿಹಾಯ್ದರು.
ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಮೂರನೇ ಬಾರಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ನಮಗೂ ದೆಹಲಿ ಕಚೇರಿಯಿಂದ ಅಹ್ವಾನ ಬಂದಿದೆ. ಮುಂದಿನ ಐದು ವರ್ಷಗಳಲ್ಲಿ ದೇಶಕ್ಕೆ ಹೊಸ ದಿಕ್ಕು ಸಿಗಲಿದೆ. ಹುಬ್ಬಳ್ಳಿಯ ಮೂವರಲ್ಲಿ ಮಂತ್ರಿ ಯಾರಾಗಬೇಕು ಅನ್ನುವುದು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಮೂರು ಜನರ ಮನೆಗಳು ಹು-ಧಾ. ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿವೆ. ಅವರಲ್ಲಿ ಯಾರೇ ಮಂತ್ರಿಯಾದರೂ ಸಂತಸ ಎಂದರು.
ಕಾಂಗ್ರೆಸ್ ಭ್ರಮಾಲೋಕದಲ್ಲಿದೆ. ಬಿಜೆಪಿ ಗೆದ್ದಷ್ಟು ಸೀಟ್ ಯುಪಿಎ ಗೆದ್ದಿಲ್ಲ. ಮುಂದಿನ ಹದಿನೈದು ವರ್ಷ ಬಿಜೆಪಿ ಸರ್ಕಾರ ಇರುತ್ತದೆ. ಐದು ವರ್ಷ ಮೋದಿ ಅವರೇ ಪ್ರಧಾನಮಂತ್ರಿ ಆಗಿರುತ್ತಾರೆ. ಅವರ ಹಿಂದಿನ ಹತ್ತು ವರ್ಷದ ಅವಧಿಯಲ್ಲಿ ಒಂದು ಭ್ರಷ್ಟಾಚಾರ ಆರೋಪ ಇಲ್ಲ. ಮುಂದೆಯೂ ಕಳಂಕ ರಹಿತವಾಗಿ ಆಡಳಿತ ಮಾಡಲಿದ್ದಾರೆ ಎಂದು ಶಾಸಕ ಟೆಂಗಿನಕಾಯಿ ವಿಶ್ವಾಸ ವ್ಯಕ್ತಪಡಿಸಿದರು.